ಕುಣಿಗಲ್: ರೈತರು ಎದುರಿಸುತ್ತಿರುವ ಸಮಸ್ಯೆಗಳ ಚರ್ಚೆ ನಿಟ್ಟಿನಲ್ಲಿ ಶುಕ್ರವಾರ ತಹಶೀಲ್ದಾರ್ ರಶ್ಮಿ ಅಧ್ಯಕ್ಷತೆಯಲ್ಲಿ ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ರಾಜ್ಯರೈತಸಂಘದ ಜಿಲ್ಲಾಧ್ಯಕ್ಷ ಯೋಗೇಶ್ ಗೌಡ, ಬಗರ್ ಹುಕುಂ ಯೋಜನೆಯಡಿಯಲ್ಲಿ ನಮೂನೆ 52, 53 ಅರ್ಜಿ ಸಲ್ಲಿಸಿರುವ ರೈತರಿಗೆ ಉಳುಮೆ ಚೀಟಿ ನೀಡಲಾಗಿದೆ, ಆದರೆ ಜಮೀನು ದಾಖಲೆ ಮಾಡಲು ವಿಳಂಬ ಮಾಡಲಾಗುತ್ತಿದೆ, ಇದರಿಂದಾಗಿ ರೈತರು ಸರ್ಕಾರದ ಯಾವುದೇ ಯೋಜನೆ ಪಡೆಯಲಾಗುತ್ತಿಲ್ಲ, ಜಮೀನಿನ ಹಕ್ಕು ಪಡೆಯಲು ನ್ಯಾಯಾಲಯದ ಮೊರೆ ಹೋಗಿ ರೈತರು ಪರದಾಡಬೇಕಿದೆ, ನಮೂನೆ 57ರಲ್ಲಿ ಅರ್ಜಿ ಸಲ್ಲಿಸಿ, ಕಳೆದ ಮೂವತ್ತು ವರ್ಷಗಳಿಂದ ಉಳುಮೆ ಮಾಡುತ್ತಿರುವ ರೈತರಿಗೆ ಸಮರ್ಪಕ ಭೂದಾಖಲೆ ನೀಡುವ ಕೆಲಸವಾಗುತ್ತಿಲ್ಲ, ಗೋಮಾಳ ಎಂದು ನೆಪ ಹೇಳಿ ರೈತರ ಅರ್ಜಿ ತಿರಸ್ಕರಿಸಲಾಗುತ್ತಿದೆ, ಇವುಗಳನ್ನು ಕಾನೂನಿನ ಆಡಿಯಲ್ಲಿ ಪರಿಗಣಿಸಿ ಬಗರ್ಹುಕುಂ ಸಮಿತಿ ಮುಂದೆ ಮಂಡಿಸಲು ಸಿಬ್ಬಂದಿಗೆ ಸೂಚನೆ ನೀಡಬೇಕು.
ಕೆಲವೆಡೆಗಳಲ್ಲಿ ಅರಣ್ಯದ ಅಂಚಿನಲ್ಲಿರುವ ರೈತರ ಜಮೀನಿಗೆ ಅರಣ್ಯ ಇಲಾಖೆಯವರು ವಿನಾಕಾರಣ ಸಮಸ್ಯೆ ಉಂಟು ಮಾಡಿ ರೈತರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ, ರೈತವಿರೋಧಿ ಕ್ರಮ ಅನುಸರಿಸಿ ರೈತರಿಗೆ ತೊಂದರೆ ಉಂಟು ಮಾಡುವ ಅರಣ್ಯ ಇಲಾಖೆಯವರಿಗೆ ಸೂಕ್ತ ಸೂಚನೆ ನೀಡಬೇಕು, ರೈತ ತನ್ನ ಜಮೀನಿನಲ್ಲಿ ಕೃಷಿಉದ್ದೇಶಕ್ಕೆ ಬೋರ್ ವೆಲ್ ಹಾಕಿಸಿ ವಿದ್ಯುತ್ ಸಂಪರ್ಕ ಪಡೆಯಬೇಕಾದರೆ ಅಗತ್ಯ ಇರುವ ಎಲ್ಲಾ ಉಪಕರಣಗಳನ್ನು ರೈತನೆ ಖರೀದಿ ಮಾಡಬೇಕಿದೆ, ಇದರಿಂದ ರೈತರಿಗೆ ತುಂಬ ಹೊರೆಯಾಗುತ್ತಿದ್ದು ಬೆಸ್ಕಾಂ ಇಲಾಖೆಯ ಖಾಸಗಿಕರಣ ನೀತಿ ರೈತರಿಗೆ ಮರಣ ಶಾಸನವಾಗುತ್ತಿದ್ದು ಈ ನಿಟ್ಟಿನಲ್ಲಿ ರೈತರಿಗೆ ಪೂರಕವಾಗುವ ನಿಟ್ಟಿನಲ್ಲಿ ಕ್ರಮ ವಹಿಸಬೇಕೆಂದು ಹೇಳಿ ಮನವಿ ಸಲ್ಲಿಸಿದರು.
ತಹಶೀಲ್ದಾರ್ ರಶ್ಮಿ ಮಾತನಾಡಿ, ಭೂ ಮಂಜೂರಾತಿಯಾಗಿರುವ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿ ಆನ್ಲೈನ್ ಮೂಲಕ ಅಪ್ ಲೋಡ್ ಮಾಡಲಾಗುತ್ತಿದೆ, ಇದರಿಂದ ಎಲ್ಲಾ ಪ್ರಕ್ರಿಯೆಗಳು ಪಾರದರ್ಶಕವಾಗಿರುತ್ತದೆ, ನಿಯಮಾನುಸಾರವಾಗಿರುವ ಪ್ರಕರಣಗಳನ್ನು ಪರಿಗಣಿಸಿ ಸಮಿತಿ ಮುಂದೆ ಮಂಡಿಸಲಾಗುವುದು, ಈಗಾಗಲೆ ಕೆಲ ರೈತರಿಗೆ ಹದ್ದುಬಸ್ ತ್ ಮಾಡಿ ಪಹಣಿ ನೀಡಲಾಗಿದೆ, ಗೋಮಾಳ ಪ್ರದೇಶದ ಭೂಮಿ ಹಂಚಿಕೆ ಮಾಡಲಾಗದು, ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಇನ್ನೊಂದು ತಿಂಗಳಲ್ಲಿ ಸಮಸ್ಯೆ ಇರುವೆಡೆಗಳಲ್ಲಿ ಜಂಟಿ ಸರ್ವೇ ಮಾಡಿಸಲಾಗುವುದು, ಬೆಸ್ಕಾಂ ವಿಷಯದ ಬಗ್ಗೆ ಸಂಬಂಧಪಟ್ಟ ಇಲಾಖೆ ಹಾಗೂ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಪ್ರಮುಖರಾದ ಸಿಂಗ್ರಿಗೌಡ, ಶಿವಲಿಂಗಯ್ಯ, ಕುಮಾರ, ಪುಟ್ಟಮ್ಮ, ಸುರೇಂದ್ರ ಇತರರು ಇದ್ದರು.
Comments are closed.