ತುಮಕೂರು: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆರ್. ರಾಜೇಂದ್ರ ಹಾಗೂ ಉಪಾಧ್ಯಕ್ಷರಾಗಿ ರಾಧಾ ದೇವರಾಜು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗಷ್ಟೆ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಚುನಾವಣೆ ನಡೆದು ನಿರ್ದೇಶಕರು ಆಯ್ಕೆಯಾಗಿದ್ದರು.
ಗುರುವಾರ ನಡೆದ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಆರ್.ರಾಜೇಂದ್ರ ಅಧ್ಯಕ್ಷರಾಗಿ, ರಾಧಾ ದೇವರಾಜು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ನಂತರ ಮಾತನಾಡಿದ ನೂತನ ಅಧ್ಯಕ್ಷ ಆರ್.ರಾಜೇಂದ್ರ, ಮುಂದಿನ 5 ವರ್ಷದ ಅವಧಿಗೆ ಅಧ್ಯಕ್ಷನನ್ನಾಗಿ ನಿರ್ದೇಶಕರು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ, ನಿರ್ದೇಶಕರು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕೆಲಸ ನಿರ್ವಹಿಸುತ್ತೇನೆ ಎಂದರು.
ನನ್ನ ಅವಧಿಯಲ್ಲಿ ಸಂಸ್ಥೆಯನ್ನು ಲಾಭದತ್ತ ಕೊಂಡೊಯ್ಯಲು ಹಾಗೂ ರೈತರಿಗೆ ಅಗತ್ಯ ಸೇವೆ ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.
ಸಂಸ್ಥೆಯಲ್ಲಿ ಪ್ರತಿ ತಿಂಗಳು 28 ರಿಂದ 30 ಲಕ್ಷ ವ್ಯವಹಾರ ನಡೆಯುತ್ತಿತ್ತು, ಈಗ 20 ಲಕ್ಷಕ್ಕೆ ಇಳಿದಿದೆ ಎಂದ ಅವರು, ಸೊಸೈಟಿಗಳಲ್ಲಿ ರೈತರಿಗೆ 3 ಲಕ್ಷದ ವರೆಗೆ ಸಾಲ ಕೊಡಲಾಗಿದೆ. ಹಾಗೆಯೇ ತಾಲ್ಲೂಕುಗಳಲ್ಲಿನ ಸೊಸೈಟಿಗಳು 10 ಕೋಟಿ ವರೆಗೆ ಸಾಲ ನೀಡುತ್ತಿವೆ ಎಂದರು.
ಸಹಕಾರ ಸಂಸ್ಥೆಗಳು ಉನ್ನತ ಮಟ್ಟಕ್ಕೆ ಬೆಳೆಯಲು ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರಷ್ಟೇ ಇಲ್ಲಿ ಕಾರ್ಯ ನಿರ್ವಹಿಸುವ ಕಾರ್ಯದರ್ಶಿಗಳು ಮತ್ತು ಅಧಿಕಾರಿಗಳ ಪಾತ್ರವೂ ಬಹುಮುಖ್ಯವಾಗಿದೆ, ಹಾಗಾಗಿಯೇ ಸಂಸ್ಥೆ ಇಂದು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದರು.
ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 19-20 ಲಕ್ಷ ರೂ. ಲಾಭ ಹೊಂದಿದ್ದು, 20 ಕೋಟಿಗೂ ಹೆಚ್ಚು ವಹಿವಾಟು ನಡೆಸಿದೆ ಎಂದು ಮಾಹಿತಿ ನೀಡಿದರು.
ಸಹಕಾರಿ ರತ್ನ ಕೆ.ಎನ್.ರಾಜಣ್ಣನವರ ಮಾರ್ಗದರ್ಶನ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ಸಹಕಾರಿ ಸಂಸ್ಥೆಗಳು ನಡೆಯುತ್ತಿವೆ, ಡಿಸಿಸಿ ಬ್ಯಾಂಕ್ ಸಹಾಗಿತ್ವದಲ್ಲೂ ಹೆಚ್ಚು ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಸಹಕಾರಿ ಕ್ಷೇತ್ರದಲ್ಲಿ ಪಕ್ಷಾತೀತವಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತಿದ್ದೇವೆ, ಕ್ರಿಬ್ಕೋ ಮಂಡಳಿಯಲ್ಲೂ ನಾನು ನಿರ್ದೇಶಕನಾಗಿದ್ದು, ಈ ಮಂಡಳಿಯಲ್ಲಿ ಇರುವವರೆಲ್ಲಾ ಸಂಸದರು, ನನ್ನ ವಯಸ್ಸಿನಲ್ಲಿ ಅನುಭವ ಹೊಂದಿರುವ ಹಿರಿಯರು ಅಲ್ಲಿದ್ದಾರೆ. ಅವರೊಂದಿಗೆ ಕೆಲಸ ಮಾಡುವ ಅವಕಾಶ ದೊರೆತಿರುವುದು ನನ್ನ ಭಾಗ್ಯ ಎಂದರು.
ಎಂಎಲ್ಸಿ ಚುನಾವಣೆಗೆ ಸ್ಪರ್ಧೆ
ಮುಂದಿನ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ವಿಧಾನ ಪರಿಷತ್ ಚುನಾವಣೆ ತಾವು ಸ್ಪರ್ಧೆ ಮಾಡುವುದಾಗಿ ರಾಜೇಂದ್ರ ಇದೇ ಸಂದರ್ಭದಲ್ಲಿ ಹೇಳಿದರು.
ಈಗಿನಿಂದಲೇ ಜಿಲ್ಲೆಯಾದ್ಯಂತ ಕಾರ್ಯಕರ್ತರೊಂದಿಗೆ ಸೇರಿ ಮತದಾರರ ಪಟ್ಟಿ ಮಾಡಿ ಮತ ಬೇಟೆಗೆ ಇಳಿಯಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಟಿಎಪಿಸಿಎಂಸ್ ನಿರ್ದೇಶಕರಾದ ಕೆಂಪಹನುಮಯ್ಯ, ಮಲ್ಲೇಶ್, ದೊಡ್ಡನಂಜಯ್ಯ, ಮಹಮದ್ ಜಿಯಾವುಲ್ಲಾ, ಟಿ.ವೈ. ಯಶಸ್, ವಿ.ಜಿ.ಸರೋಜ, ಕೆ.ಸಿ. ಗಂಗರಾಜು, ಟಿ.ಆರ್. ಸುರೇಶ್, ಡಿಸಿಸಿ ಬ್ಯಾಂಕ್ ನಾಮಿನಿ ನಿರ್ದೇಶಕ ಬಿ.ಜಿ. ವೆಂಕಟೇಗೌಡ, ಸಹಕಾರಿ ಸಂಘದ ಸಹಾಯಕ ನಿಬಂಧಕ ಪಾರ್ಥಸಾರಥಿ, ಸಂಘದ ಕಾರ್ಯದರ್ಶಿ ರವಿಕುಮಾರ್ ಮತ್ತಿತರರು ಇದ್ದರು.
ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ರಾಜೇಂದ್ರ ಆಯ್ಕೆ
Get real time updates directly on you device, subscribe now.
Prev Post
Next Post
Comments are closed.