ತುಮಕೂರು: ಮಹಾತ್ಮಗಾಂಧಿ ಕ್ರೀಡಾಂಗಣ ಬಳಕೆಗೆ ಸರಕಾರ ಶುಲ್ಕ ವಿಧಿಸಿರುವುದನ್ನು ಕಡಿಮೆ ಮಾಡಬೇಕು, ಸ್ಟೇಡಿಯಂನ ಒಳಭಾಗದಲ್ಲಿ ವಾಕಿಂಗ್, ಜಾಗಿಂಗ್ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಮುಂಜಾನೆ ಗೆಳೆಯರ ಬಳಗ ಸದಸ್ಯರು ಜಿಲ್ಲಾಡಳಿತ ಹಾಗೂ ಕ್ರೀಡಾ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಮುಂಜಾನೆ ಗೆಳೆಯರ ಬಳಗದ ಧನಿಯಕುಮಾರ್ ಮಾತನಾಡಿ, ಸರಕಾರ ಕ್ರೀಡಾಂಗಣ ನಿರ್ವಹಣೆಗೆ ಅನುದಾನವಿಲ್ಲ ಎಂಬ ಕಾರಣಕ್ಕೆ ಬಳಕೆದಾರರಿಗೆ ಮಾಸಿಕ 150 ರಿಂದ 300 ರೂ. ವರೆಗೆ ಶುಲ್ಕ ವಿಧಿಸಿದೆ. ಇಲ್ಲಿಗೆ ಅಭ್ಯಾಸಕ್ಕೆ ಬರುವ ಕ್ರೀಡಾಪಟುಗಳಲ್ಲಿ ಬಹುತೇಕರು ಬಡವರು, ಮನೆ ಮನೆಗೆ ದಿನಪತ್ರಿಕೆ ವಿತರಿಸಿ ಕ್ರೀಡಾ ಅಭ್ಯಾಸಕ್ಕೆ ಬರುವ ಹಲವು ಕ್ರೀಡಾಪಟುಗಳಿದ್ದಾರೆ, ಸಣ್ಣ ಪುಟ್ಟ ಕಿರಾಣಿ ಅಂಗಡಿ ನಡೆಸುವವರು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಕಾರಣಕ್ಕೆ ಇಲ್ಲಿಗೆ ಬರುತ್ತಾರೆ, ಅವರಿಗೆ ಮಾಸಿಕ 300 ರೂ. ಭರಿಸುವುದು ಕಷ್ಟ, ಹಾಗಾಗಿ ಶುಲ್ಕದಲ್ಲಿ ವಿನಾಯಿತಿ ನೀಡಬೇಕು, ಹಾಗೆಯೇ ಬೆಳಗಿನ ವಾಕಿಂಗ್, ಜಾಗಿಂಗ್ ಗೆ ಬರುವವರಿಗೆ ಕ್ರೀಡಾಂಗಣ ಬಳಕೆಗೆ ಅವಕಾಶವಿಲ್ಲ ಎಂದು ಹೇಳುತಿದ್ದಾರೆ, ಆದರೆ ಕ್ರೀಡಾಂಗಣದ ಸುತ್ತಮುತ್ತ ಇರುವ ಬಡಾವಣೆಗಳ ಹಿರಿಯ ನಾಗರಿಕರು, ಯುವಕರು ತಮ್ಮ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡಾಂಗಣ ಬಳಕೆ ಮಾಡುತಿದ್ದು, ಏಕಾಏಕಿ ಬಳಕೆ ಮಾಡಬೇಡಿ ಎಂದರೆ ಅವರಿಗೆ ಪರ್ಯಾಯ ಏನು ಎಂಬ ಪ್ರಶ್ನೆ ಉದ್ಬವಿಸಿದೆ, ಹಾಗಾಗಿ ಜಿಲ್ಲಾಡಳಿತ ಹಾಗೂ ಕ್ರೀಡಾ ಇಲಾಖೆ ಈ ನಿಟ್ಟಿನಲ್ಲಿ ಕ್ರೀಡಾಪಟುಗಳು ಮತ್ತು ವಾಕಿಂಗ್ ಮತ್ತು ಜಾಗಿಂಗ್ಗೆ ಬರುವ ಜನರೊಂದಿಗೆ ಚರ್ಚೆ ನಡೆಸಿ, ಸಮಸ್ಯೆ ಬಗೆ ಹರಿಸಬೇಕೆಂದು ಒತ್ತಾಯಿಸಿದರು.
ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್ ಮಾತನಾಡಿ, ದಕ್ಷಿಣ ಭಾರತದಲ್ಲಿಯೇ ತುಮಕೂರಿನಲ್ಲಿ ನಿರ್ಮಾಣವಾಗಿರುವ ಕ್ರೀಡಾಂಗಣ ಅತ್ಯುತ್ತಮ. ಆದರೆ ಇದನ್ನು ಬಳಕೆ ಮಾಡಲು ಹಲವಾರು ಅಡ್ಡಿ ಆತಂಕಗಳನ್ನು ಕ್ರೀಡಾ ಇಲಾಖೆ, ಜಿಲ್ಲಾಡಳಿತ ವಿಧಿಸಿದೆ, ಹಣ ನೀಡಿ ಬಳಕೆ ಮಾಡಿ ಎಂದರೆ ಹೇಗೆ ? ಬಡ ಕ್ರೀಡಾಪಟುಗಳಿಗೆ ಇದು ಸಾಧ್ಯವಾಗದು, ಹಾಗಾಗಿ ಅಂತಹರವರಿಗೆ ರಿಯಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.
ಕ್ರೀಡಾಪಟುಗಳಾದ ನಿರಂಜನ್, ಹಿರಿಯ ನಾಗರಿಕರಾದ ಮಧು, ನಿವೃತ್ತ ಪ್ರಾಂಶುಪಾಲರಾದ ವೆಂಕಟೇಶ್, ನಿವೃತ್ತ ಉಪನ್ಯಾಸಕರಾದ ಸುದರ್ಶನ್, ಹಿರಿಯ ಕ್ರೀಡಾಪಟುಗಳ ಆರೋಗ್ಯ ಕಾಪಾಡಿಕೊಳ್ಳಲು ಜಾಗಿಂಗ್, ವಾಕಿಂಗ್ ಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಕ್ರೀಡಾಪಟುಗಳಾದ ಕಿಶನ್, ಪ್ರಕಾಶ್, ನರೇಶ್ ಬಾಬು, ಗೋವಿಂದಗಿರಿ, ಸ್ವಾಮಿ ಇತರರು ಇದ್ದರು.
Comments are closed.