ಬಡವರ ಸೇವೆ ಮಾಡಿದ್ರೆ ದೇವರು ಒಲಿತಾನೆ: ಕೆಎನ್ ಆರ್

14

Get real time updates directly on you device, subscribe now.


ಮಧುಗಿರಿ: ಪ್ರಯಾಗ್ ರಾಜ್ ಗೆ ಹೋಗಿ ಕೊಳಕು ನೀರಲ್ಲಿ ಮುಳುಗಿದರೆ ಪುಣ್ಯ ದೊರೆಯುವುದಿಲ್ಲ, ಬಡ ಜನರ ಸೇವೆ ಮಾಡಿ, ಅವರಿಗೆ ಒಳಿತು ಮಾಡಿದಾಗ ಮಾತ್ರ ದೇವರು ಒಲಿಯುತ್ತಾನೆ. ಬಡ ಜನರ ಸೇವೆಯಲ್ಲೇ ನಾನು ದೇವರನ್ನು ಕಾಣುತ್ತಿದ್ದೇನೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.

ಪಟ್ಟಣದ ಕನ್ನಡ ಭವನದಲ್ಲಿರುವ ಕೆ.ಎನ್.ರಾಜಣ್ಣನವರ ಸಭಾಂಗಣದಲ್ಲಿ ಬುಧವಾರ ತಾಲೂಕು ಆಡಳಿತ ಮತ್ತು ತಾಲೂಕು ಮಡಿವಾಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮೂರಲ್ಲೇನು ದೇವರಿಲ್ಲವಾ? ಬಡ ಜನರ ಸೇವೆ ಮಾಡಿ, ಅವರ ನೆರವಿಗೆ ಧಾವಿಸಿ ಅವರಿಗೆ ಒಳಿತು ಮಾಡಿದಾಗ ಮಾತ್ರ ದೇವರು ಒಲಿಯುತ್ತಾನೆ, ಹಾಗೆಂದು ಅಲ್ಲಿಗೆ ಹೋಗಬಾರದು ಎಂದು ನಾನು ಹೇಳುವುದಿಲ್ಲ, ಆದರೆ ಅಷ್ಟೊಂದು ವೈಭವೀಕರಣ ಸರಿಯಲ್ಲ, ಭಕ್ತಿಯಿಂದ ಪೂಜೆ ಮಾಡಿದರೆ ನಮ್ಮೂರಲ್ಲೇ ದೇವರು ಒಲಿಯುತ್ತಾನೆ ಎಂದರು.

ಮಡಿವಾಳ ಸಂಘದ ತಾಲೂಕು ಅಧ್ಯಕ್ಷ ಈಶ್ವರಯ್ಯ ಮಾತನಾಡಿ, ಮಡಿವಾಳ ಜನಾಂಗ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿದಿದ್ದು, ಮಡಿವಾಳ ಸಮುದಾಯವನ್ನು ದೇಶದ 21 ರಾಜ್ಯಗಳಲ್ಲಿ ಎಸ್ಸಿಗೆ ಸೇರ್ಪಡೆ ಮಾಡಿದ್ದು, ಅನ್ನಪೂರ್ಣಮ್ಮ ವರದಿ ಅನ್ವಯ ಮಡಿವಾಳ ಸಮುದಾಯವನ್ನು ಎಸ್ ಸಿ ಜನಾಂಗಕ್ಕೆ ಸೇರ್ಪಡೆ ಮಾಡಬೇಕು ಮತ್ತು ಕ್ಷೇತ್ರದಲ್ಲಿ ದೋಬಿಘಾಟ್ ಮತ್ತು ನಿವೇಶನ ಹಾಗೂ ತುಮಕೂರು ಗೇಟ್ ಬಳಿ ಮಡಿವಾಳ ಮಾಚಿದೇವರ ಪುತ್ಥಳಿ ನಿರ್ಮಿಸಬೇಕು ಎಂದು ಮನವಿ ಮಾಡಿದರು.

ಸರ್ವಜ್ಞ ವೇದಿಕೆಯ ಅಧ್ಯಕ್ಷ ವೆಂಕಟರವಣಪ್ಪ ಮಾತನಾಡಿ, ನಮ್ಮ ಕುಲ ಕಸುಬುಗಳನ್ನು ಇಂದು ಅವನತಿಯ ಅಂಚಿಗೆ ತಳ್ಳುತ್ತಿರುವುದು ವಿಷಾದನೀಯ, ತಳ ಸಮುದಾಯಗಳನ್ನು ಗುರುತಿಸಿ ವಿಧಾನ ಪರಿಷತ್ ಗೆ ಆಯ್ಕೆಮಾಡಬೇಕು ಎಂದು ಧ್ವನಿ ಎತ್ತಿದವರು ಸಹಕಾರ ಸಚಿವ ಕೆ.ಎನ್.ರಾಜಣ್ಣನವರು, ಇದು ಸಚಿವರಿಗೆ ತಳ ಸಮುದಾಯಗಳ ಬಗ್ಗೆ ಇರುವ ಕಾಳಜಿ ತೋರಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ, ಡಿವೈಎಸ್ಪಿ ಮಂಜುನಾಥ್, ಡಿಡಿಪಿಐ ಗಿರಿಜಾ, ತಾಪಂ ಇಒ ಲಕ್ಷ್ಮಣ್, ಪುರಸಭಾಧ್ಯಕ್ಷ ಲಾಲಾಪೇಟೆ ಮಂಜುನಾಥ್, ಜಿಪಂ ಮಾಜಿ ಉಪಾಧ್ಯಕ್ಷ ಮುದಿಮಡುಗು ರಂಗಶಾಮಯ್ಯ, ಮಡಿವಾಳ ಸಂಘದ ಪದಾಧಿಕಾರಿಗಳಾದ ಲಕ್ಷ್ಮಿಕಾಂತಯ್ಯ, ಶಾಂತರಾಜು, ಅಶ್ವಥನಾರಾಯಣ, ಚಿಕ್ಕರಂಗಪ್ಪ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!