ಗುಬ್ಬಿ: ಗುಬ್ಬಿ ತಾಲ್ಲೂಕಿನಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಗಳು ನೀಡಿರುವ ಸಾಲವನ್ನು ದೌರ್ಜನ್ಯದಿಂದ ವಸೂಲಿ ಮಾಡುವ ಜೊತೆಗೆ ಬೆದರಿಕೆ ಉಂಟು ಮಾಡುತ್ತಿದ್ದಾರೆ ಹಾಗೂ ರಾಷ್ಟ್ರೀಕೃತ ಬ್ಯಾಂಕಿನವರು ಸಾಲ ನೀಡದ ಕಾರಣ ಅನಿವಾರ್ಯವಾಗಿ ಮೈಕ್ರೋ ಫೈನಾನ್ಸ್ ಗಳಲ್ಲಿ ಸಾಲ ಪಡೆಯುವಂತಾಗಿದೆ ಎಂದು ಸಾರ್ವಜನಿಕರಿಂದ ದೂರು ಬಂದಿದ್ದ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳು, ಮೈಕ್ರೋ ಫೈನಾನ್ಸ್ ಸಂಸ್ಥೆಯವರು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳ ಸಭೆ ಏರ್ಪಡಿಸಿ ಚರ್ಚಿಸಲಾಯಿತು.
ಸಭೆಯ ಆರಂಭದಲ್ಲಿಯೇ ಮೈಕ್ರೋಫೈನಾನ್ಸ್ ಸಂಸ್ಥೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ಮೈಕ್ರೋ ಫೈನಾನ್ಸ್ ನವರ ಕಿರುಕುಳದಿಂದಾಗಿ ಸಾಲ ಪಡೆದಿರುವ ಹಲವರು ಗ್ರಾಮಗಳನ್ನೇ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ತಹಶೀಲ್ದಾರ್ ಆರತಿ.ಬಿ. ಮಾತನಾಡಿ ಈಗಾಗಲೇ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಆರ್ ಬಿಐ ನಿಯಮಾನಸಾರ ಸಾಲ ವಸೂಲಾತಿ ಮಾಡಬೇಕು, ಯಾವುದೇ ಸಂಸ್ಥೆಯವರು ನಿಯಮ ಮೀರಿ ವಸುಲಾತಿಗೆ ಮುಂದಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮೈಕ್ರೋ ಫೈನಾನ್ಸ್ ಸಂಸ್ಥೆಯವರು ಬೆಳಗ್ಗೆ 9 ರಿಂದ ಸಂಜೆ 6 ರ ಒಳಗೆ ಮಾತ್ರ ಸಾಲಗಾರರ ಮನೆಗೆ ಹೋಗಿ ಸಾಲವನ್ನು ನಿಯಮಾನುಸಾರವೇ ಕೇಳಬೇಕು, ಯಾವುದೇ ಬೆದರಿಕೆ ಹಾಕಿದಲ್ಲಿ ಸಂಬಂಧಿಸಿದವರು ತಾಲ್ಲೂಕು ಆಡಳಿತಕ್ಕೆ ಅಥವಾ ಪೊಲೀಸ್ ಠಾಣೆಗೆ ದೂರು ನೀಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಮೈಕ್ರೋ ಫೈನಾನ್ಸ್ ಸಂಸ್ಥೆಯವರು ಅಪರಾಧಿಕ ಹಿನ್ನೆಲೆ ಉಳ್ಳವರನ್ನು ವಸುಲಾತಿಗೆ ಕಳುಹಿಸಬಾರದು ಎಂದು ಸೂಚನೆ ನೀಡಿದರು.
ಮೈಕ್ರೋ ಫೈನಾನ್ಸ್ ನವರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ರೈತರಿಗೆ ಹಾಗೂ ಮಹಿಳೆಯರಿಗೆ ಸಾಲದ ಆಸೆ ತೋರಿಸಿ ಯಾವುದೇ ಖಾತರಿ ಪಡೆಯದೆ ಸಾಲ ವಿತರಿಸುತ್ತಿದ್ದಾರೆ, ಹಣಕಾಸು ಸಂಸ್ಥೆಗಳಿಗೆ ಅಗತ್ಯ ಇರುವ ದಾಖಲೆಗಳನ್ನು ಅವರೇ ಸೃಷ್ಟಿಸಿಕೊಳ್ಳುವ ಮಟ್ಟಕ್ಕೂ ಹೋಗಿದ್ದಾರೆ, ಅಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು .
ರಾಷ್ಟ್ರೀಕೃತ ಬ್ಯಾಂಕುಗಳು ಆರ್ ಬಿಐ ನಿಯಮಾನುಸಾರ ಕೆಲಸ ನಿರ್ವಹಿಸುತ್ತಿರುವುದರಿಂದ ಯಾವುದೇ ದೌರ್ಜನ್ಯ ಹಾಗೂ ಅನ್ಯಾಯ ಎಸೆಗಲು ಸಾಧ್ಯವಿಲ್ಲ, ಸಾಲ ಪಡೆಯಲಿಚ್ಚಿಸುವವರು ಬ್ಯಾಂಕ್ ಗೆ ಅಗತ್ಯವಿರುವ ದಾಖಲೆಗಳನ್ನು ಒದಗಿಸಿದಲ್ಲಿ ಸಾಲ ನೀಡಲು ಯಾವುದೇ ಅಭ್ಯಂತರವಿಲ್ಲ, ಎಲ್ಲವನ್ನು ಪಾರದರ್ಶಕ ಮತ್ತು ನಿಯಮಾನಸಾರವೇ ಮಾಡುತ್ತೇವೆ, ಯಾವುದೇ ಗೊಂದಲಕ್ಕೆ ಒಳಗಾಗದೆ ಸಾರ್ವಜನಿಕರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಿಗುವ ಸೌಲಭ್ಯ ಬಳಸಿಕೊಳ್ಳುವಂತೆ ಬ್ಯಾಂಕ್ ನ ಅಧಿಕಾರಿಗಳು ತಿಳಿಸಿದರು.
ಈ ಸಭೆಯಲ್ಲಿ ಪಟ್ಟಣದ ಹಾಗೂ ತಾಲ್ಲೂಕಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ರೈತ ಸಂಘದ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
Comments are closed.