ಶಿರಾ: ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಸಹಸ್ರ ಲಿಂಗಾರ್ಚನಾ ಸಮಿತಿ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ 15ನೇ ವರ್ಷದ ಸಹಸ್ರ ಲಿಂಗಾರ್ಚನೆ ಕಾರ್ಯಕ್ರಮ ಫೆ.26ರ ಸಂಜೆ 5 ಗಂಟೆಗೆ ನಗರದ ಸಂತೆಪೇಟೆಯಲ್ಲಿರುವ ಶ್ರೀಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ ಎಂದು ಆಗಮ ಶಾಸ್ತ್ರ ಪಂಡಿತ ಡಾ. ಸುರೇಶ್ ಶಾಸ್ತ್ರಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಫೆ. 26 ರ ಸಂಜೆ 5 ಗಂಟೆಗೆ ಗಣಪತಿ ಪ್ರಾರ್ಥನೆ, ಸಂಜೆ 5:30 ರಿಂದ ಪಂಚಾಮೃತ ಅಭಿಷೇಕ ಹಾಗೂ ಮಂಗಳ ದ್ರವ್ಯ ಸಮೇತ ಏಕವಾರ ರುದ್ರಾಭಿಷೇಕ, 6.30ರ ನಂತರ ದಂಪತಿ ಮತ್ತು ಯುವಕ, ಯುವತಿಯರಿಂದ ಸಹಸ್ರಲಿಂಗಾರ್ಚನೆ, ರಾತ್ರಿ 9 ಗಂಟೆಗೆ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ, ಪೂಜೆಗೆ ಯಾವುದೇ ಶುಲ್ಕ ವಿಧಿಸಿರುವುದಿಲ್ಲ, ಪೂಜೆಯಲ್ಲಿ ಪಾಲ್ಗೊಳ್ಳುವರಿಗೆ ಹುತ್ತದ ಮಣ್ಣಿನಿಂದ ಮಾಡಿರುವ 16 ಲಿಂಗಗಳನ್ನು ನೀಡಲಾಗುತ್ತದೆ. ಭಕ್ತರು ಶಿವರಾತ್ರಿ ದಿನದಂದು 16 ಹುತ್ತದ ಮಣ್ಣಿನ ಲಿಂಗಗಳಿಗೆ ಮಾಡಿದ ಲಿಂಗಾರ್ಚನೆಯ ಪೂಜೆಯ ಫಲವು, 16 ಸೋಮವಾರಗಳಂದು ಮಾಡಿದ ಪೂಜಾ ಫಲಕ್ಕೆ ಸಮನಾದ ಪ್ರತಿಫಲ ನೀಡುತ್ತದೆ. ಈ ಬಾರಿ ಸಹಸ್ರಲಿಂಗಾರ್ಚನೆ ಮಾಡಿದ ಲಿಂಗಗಳನ್ನು ತಲಕಾಡಿನ ಕಾವೇರಿ ಪುಣ್ಯ ನದಿಯಲ್ಲಿ ವಿಸರ್ಜಿಸಲಾಗುವುದು, ಭಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾರ್ಚನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದರು.
ಪೂಜೆಯಲ್ಲಿ ಭಾಗವಹಿಸುವರು ದೂರವಾಣಿ ಮೂಲಕ ಹೆಸರನ್ನು ನೋಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸುವ ದೂರವಾಣಿ ಸಂಖ್ಯೆ 9880144651, 9880511842 ಮತ್ತು 9242993366 ಸಂಪರ್ಕಿಸುವಂತೆ ಕೋರಿದರು.
ನಗರಸಭೆ ಸದಸ್ಯ ಆರ್. ರಾಮು ಮಾತನಾಡಿ ಸಹಸ್ರ ಲಿಂಗಾರ್ಚನೆ ಕಾರ್ಯಕ್ರಮವು ಕಳೆದ 14 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದೆ. ಸಹಸ್ರ ಲಿಂಗಾರ್ಚನೆಯಲ್ಲಿ ಭಾಗವಹಿಸಿದ ಹಲವರಿಗೆ ಶುಭ ಫಲಗಳು ದೊರೆತಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದರು.
ಸಹಸ್ರ ಲಿಂಗಾರ್ಚನಾ ಸಮಿತಿಯ ನಂದಿನಿ ಸೋಮಶೇಖರ್ ಮಾತನಾಡಿ ಸಹಸ್ರ ಲಿಂಗಾರ್ಚನೆ ಕಾರ್ಯಕ್ರಮದ ಉದ್ದೇಶ ನಮ್ಮ ದೇಶ, ನಮ್ಮ ರಾಜ್ಯದ ಜನರು ಸುಭೀಕ್ಷವಾಗಿರಲು ಮಾಡಲಾಗುತ್ತಿದೆ. ಪೂಜಾ ಕಾರ್ಯದಲ್ಲಿ ಭಾಗವಹಿಸುವ ಭಕ್ತರು ಸಮಯಕ್ಕೆ ಸರಿಯಾಗಿ ಹಾಜರಾಗಬೇಕು. ತಡವಾಗಿ ಆಗಮಿಸಿದರೆ ಪೂಜಾ ಕಾರ್ಯಕ್ರಮಗಳು ತಡವಾಗುತ್ತವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್.ಟಿ ನರಸಿಂಹಮೂರ್ತಿ, ಶಿವಣ್ಣ, ಎಸ್.ಎನ್.ಜೈಪಾಲ್, ವಿನೋದ್ ಕುಮಾರ್, ಬಿ.ಎನ್.ಚಂದ್ರಶೇಖರ್, ಹರಿಕೃಷ್ಣ, ಎಂ.ಜಿ.ಮಧುಸೂಧನ್, ಸುಬ್ಬಣ್ಣ, ರಂಗನಾಥ್, ಸತ್ಯನಾರಾಯಣ , ಪಿ.ಆರ್.ಮಧುಸೂಧನ್, ವೆಂಕಟೇಶ್, ಕರಿಯಣ್ಣ ಹಾಗೂ ಸದಸ್ಯರು ಹಾಜರಿದ್ದರು.
Comments are closed.