ತುರುವೇಕೆರೆಯಲ್ಲಿ ಮಾಸ್ಕ್ ಧರಿಸದವರಿಗೆ ಬಿತ್ತು ದಂಡ

605

Get real time updates directly on you device, subscribe now.

ತುರುವೇಕೆರೆ: ಕೋವಿಡ್ 2ನೇ ಅಲೆ ತಾಲೂಕಿನ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದರೂ ಮಾಸ್ಕ್ ಧರಿಸದೆ ಪಟ್ಟಣದಲ್ಲಿ ಅಲೆಯುತ್ತಿದ್ದ ಅನೇಕರಿಗೆ ದಂಡ ಹಾಕುವ ಮೂಲಕ ಪಟ್ಟಣದ ಪೊಲೀಸರು ಬಿಸಿ ಮುಟ್ಟಿಸಿದರು.
ಪಟ್ಟಣದ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಕೋವಿಡ್ ಅರಿವು ಮೂಡಿಸುವ ಸಲುವಾಗಿ ಬೆಳ್ಳಂಬೆಳಗ್ಗೆಯೇ ಪಪಂ ಸಿಬ್ಬಂದಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಯನ್ನೊಳಗೊಂಡ ತಂಡ ರಚಿಸಿಕೊಂಡು ಪಿಎಸ್ಐ ಪ್ರೀತಂ ನೇತೃತ್ವದಲ್ಲಿ ಖಾಕಿ ಪಡೆ ಕಾರ್ಯಾಚರಣೆಗಿಳಿದಿತ್ತು.
ಪಟ್ಟಣದ ಅಂಬೇಡ್ಕರ್ ವೃತ್ತ, ತಿಪಟೂರು ರಸ್ತೆ, ದಬ್ಬೇಘಟ್ಟ, ಮಾಯಸಂದ್ರ ಮತ್ತು ಬಾಣಸಂದ್ರ ರಸ್ತೆಗಳಲ್ಲಿ ಹಾಗೂ ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಮಾಸ್ಕ್ ಧರಿಸದೆ ಅಲೆಯುತ್ತಿದ್ದ ಮಂದಿ ದಂಡದ ರುಚಿ ಅನುಭವಿಸಬೇಕಾಯಿತು, ವಿನಾಕಾರಣ ಗುಂಪು ಗೂಡಿಕೊಂಡು ಅನಗತ್ಯ ಚರ್ಚೆಯಲ್ಲಿ ತೊಡಗಿದ್ದ ಮಂದಿ ದಂಡ ಕಟ್ಟುವುದು ಮಾತ್ರವಲ್ಲದೇ ಪೊಲೀಸರ ಮಾತಿನ ಚಾಟಿ ಏಟು ಅನುಭವಿಸಬೇಕಾಯಿತು.
ತಹಶೀಲ್ದಾರ್ ನಯೀಮುನ್ನಿಸ್ಸಾ ಮಾತನಾಡಿ ಕೋವಿಡ್ ಎರಡನೇ ಅಲೆ ತುಂಬಾ ವೇಗವಾಗಿ ಹರಡುತ್ತಿದೆ, ಕೊರೊನಾ ನಿಯಂತ್ರಣಕ್ಕೆ ಕೋವಿಡ್ ಮಾರ್ಗ ಸೂಚಿಗಳನ್ನು ಎಲ್ಲರೂ ಅನುಸರಿಸಬೇಕು, ತಮ್ಮ ಅಮೂಲ್ಯವಾದ ಜೀವಗಳನ್ನು ಸಂರಕ್ಷಿಸಿಕೊಳ್ಳುವದರ ಜೊತೆಗೆ ಜೀವದ ಬಗ್ಗೆ ಕಾಳಜಿ ವಹಿಸಬೇಕು, ಮಾಸ್ಕ್ ಧರಿಸಿ, ಸಾಮಾಜಿಕ ಅಂತಕ ಕಾಪಾಡಿಕೊಳ್ಳಿ, ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಸಹಕರಿಸಿ ಎಂದು ಮನವಿ ಮಾಡಿದರು.
ಕಾರ್ಯಾಚರಣೆಯಲ್ಲಿ ತಹಶೀಲ್ದಾರ್ ಆರ್.ನಯೀಮುನ್ನೀಸಾ, ಸಿಪಿಐ ನವೀನ್, ಮುಖ್ಯಾಧಿಕಾರಿ ಮಂಜುಳಾದೇವಿ, ಎಎಸ್ಐಗಳಾದ ಶಿವಲಿಂಗಪ್ಪ, ವೆಂಕಟೇಶ್, ಸಿಬ್ಬಂದಿ ನಾಗರಾಜು, ಸುಪ್ರೀತ್, ಕೇಶವಮೂರ್ತಿ, ಉಮೇಶ್, ರಾಜು, ಸೋಮು ಇದ್ದರು.

Get real time updates directly on you device, subscribe now.

Comments are closed.

error: Content is protected !!