ತುಮಕೂರು ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟು ಸ್ಥಗಿತ ದಿಢೀರ್ ನಿರ್ಧಾರಕ್ಕೆ ವರ್ತಕರ ಆಕ್ರೋಶ

ಕೊರೊನಾ ಆರ್ಭಟ ಅಂಗಡಿಗಳನ್ನು ಮುಚ್ಚಿಸಿದ ಖಾಕಿ

279

Get real time updates directly on you device, subscribe now.

ತುಮಕೂರು: ಸರ್ಕಾರ ಏಕಾಏಕಿ ಕೊರೊನಾ ಮಾರ್ಗಸೂಚಿ ಪಾಲನೆಗೆ ಸೂಚನೆ ನೀಡಿ ತುಮಕೂರು ನಗರ ಸೇರಿದಂತೆ ಎಲ್ಲಾ ತಾಲ್ಲೂಕುಗಳಲ್ಲೂ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವ ಮೂಲಕ ವ್ಯಾಪಾರಸ್ಥರಿಗೆ, ವರ್ತಕರಿಗೆ ದಿಢೀರ್ ಶಾಕ್ ನೀಡಿದೆ.
ಪೊಲೀಸರು ಜೀಪ್ಗಳಲ್ಲಿ ಬಂದು ಅಂಗಡಿಗಳನ್ನು ಮುಲಾಜಿಲ್ಲದೆ ಮುಚ್ಚಿಸಿದ್ದಾರೆ, ಅಂಗಡಿ ಮುಚ್ಚಿಸುತ್ತಾರೆ ಎಂಬ ಯಾವುದೇ ಸುಳಿವು ಪಡೆಯದ ವರ್ತಕರು, ವ್ಯಾಪಾರಸ್ಥರು ಸರ್ಕಾರದ ದಿಢೀರ್ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಪೊಲೀಸರು ಅವಕಾಶ ನೀಡಿದ್ದಾರೆ.
ಇನ್ನು ತುಮಕೂರಿನಲ್ಲಿ ಜಿಲ್ಲಾಧಿಕಾರಿಯೇ ರಸ್ತೆಗಿಳಿದು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದರು, ಹೋಟೆಲ್, ಆಸ್ಪತ್ರೆ, ಮೆಡಿಕಲ್, ಎಟಿಎಂ ಸೇರಿದಂತೆ ಕೆಲವೇ ವಲಯಕ್ಕೆ ಅವಕಾಶ ನೀಡಿ ಮಿಕ್ಕಂತೆ ಅಂಗಡಿ, ಟೀ ಹೌಸ್ಗಳನ್ನು ಬಂದ್ ಮಾಡಿಸಿದರು, ಇದರಿಂದ ವ್ಯಾಪಾರಸ್ಥರು ತೀವ್ರ ಬೇಸರ ಹೊರ ಹಾಕಿದ್ದಾರೆ, ಯಾವುದೇ ಸೂಚನೆ ನೀಡದೆ ಹೀಗೆ ಬಂದ್ ಮಾಡಿಸಿದ್ದು ಎಷ್ಟು ಸರಿ ಎಂದು ಕೆಲವರು ಅಸಮಾಧಾನ ಹೊರ ಹಾಕಿದರು.

ಕೋವಿಡ್ ಕೇರ್ ಸೆಂಟರ್ಗೆ ಸೋಂಕಿತರನ್ನು ಸ್ಥಳಾಂತರಿಸಿ: ಸಚಿವ
ಕೋವಿಡ್ ಪ್ರಕರಣ ಜಿಲ್ಲೆಯಲ್ಲಿ ದಿನೇ ದಿನೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ತುಮಕೂರು ನಗರ ಸೇರಿದಂತೆ ಎಲ್ಲಾ ತಾಲೂಕುಗಳಲ್ಲಿ ಕನಿಷ್ಟ 200 ಹಾಸಿಗೆವುಳ್ಳ ಕೋವಿಡ್ ಕೇರ್ ಸೆಂಟರ್ಗಳನ್ನು ಪ್ರಾರಂಭಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳ ಹಾಗೂ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೋವಿಡ್ ದೃಢಪಟ್ಟು ಹೋಂ ಐಸೋಲೇಷನಲ್ಲಿರುವ ಸೋಂಕಿತರು ಹೋ ಐಸೋಲೇಷನಲ್ಲಿರದೆ ಎಲ್ಲೆಂದರಲ್ಲಿ ಓಡಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ, ಹಾಗಾಗಿ ಹೋಂ ಐಸೋಲೇಷನ್ ಬದಲಾಗಿ ಈ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ, ತುಮಕೂರಿನ ಕ್ಯಾತ್ಸಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್ ಅನ್ನು ಕಳೆದ ಬಾರಿಯಂತೆಯೇ ಈ ಬಾರಿಯೂ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರತಿ ತಾಲೂಕಿನಲ್ಲಿ 200 ಹಾಸಿಗೆಗಳ ಕೋವಿಡ್ ಕೇರ್ ಸ್ಥಾಪಿಸಲು ಕಳೆದ ಬಾರಿ ಬಳಸಿಕೊಂಡಿದ್ದ ವಸತಿ ನಿಲಯಗಳನ್ನು ಬಳಸಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ, ಕೋವಿಡ್ ಕೇರ್ನ ಸೆಂಟರ್ಗಳಲ್ಲಿ ಜಿಲ್ಲಾಡಳಿತದಿಂದ ಗುಣಮಟ್ಟದ ಆಹಾರ ಪೂರೈಕೆ ಮಾಡಲಾಗುವುದು ಎಂದರು.
ಕೋವಿಡ್ ಕಾರಣದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಗೌರವಯುತವಾಗಿ ಮಾಡಬೇಕು, ಯಾವುದೇ ಕಾರಣಕ್ಕೂ ಮೃತದೇಹ ಅಂತ್ಯಸಂಸ್ಕಾರ ವಿಳಂಬವಾಗಬಾರದು, ಕೋವಿಡ್ ಮೃತದೇಹಗಳನ್ನು ಹೆಚ್ಚು ಸಮಯ ಆಸ್ಪತ್ರೆಯಲ್ಲಿ ಇಟ್ಟುಕೊಳ್ಳಬೇಡಿ, ಮೃತಪಟ್ಟ ತಕ್ಷಣವೇ ಅಂತ್ಯಸಂಸ್ಕಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಡಿಎಚ್ಒ ಹಾಗೂ ಡಿಎಸ್ ಅವರಿಗೆ ಸಚಿವರು ಸೂಚಿಸಿದರು.
ತುಮಕೂರು ನಗರದಲ್ಲಿರುವ ಚಿತಾಗಾರ ನಿರ್ವಹಣೆ ಮಾಡಲು ಟಿಜಿಎಂಸಿ ಬ್ಯಾಂಕ್ ಮುಂದೆ ಬಂದಿದೆ, ಅವರಿಗೆ ಈಗಿರುವ ಒಂದು ಒಲೆ ಜೊತೆಗೆ ಇನ್ನು ಮೂರು ಒಲೆಗಳನ್ನು ನಿರ್ಮಿಸುವಂತೆ ಕೋರಿದ್ದು, ನಿರ್ವಹಣೆಯನ್ನು ಅವರಿಗೆ ವಹಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ ಅವರು, ಇನ್ನುಳಿದ ಸ್ಮಶಾನಗಳನ್ನು ತುಮಕೂರು ಮಹಾನಗರ ಪಾಲಿಕೆ ನಿರ್ವಹಿಸಬೇಕು ಹಾಗೂ ಸ್ಮಶಾನ ಮತ್ತು ಚಿತಾಗಾರದಲ್ಲಿ ನಿರ್ವಹಿಸುವ ಸಿಬ್ಬಂದಿಗೆ ತಕ್ಷಣವೇ ವೇತನ ಪಾವತಿಸುವಂತೆ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಅವರಿಗೆ ನಿರ್ದೇಶಿಸಿದರು.
ಜಿಲ್ಲೆಯಲ್ಲಿ ಆಮ್ಲಜನಕ ಮತ್ತು ರೆಮ್ಡಿಸಿವಿಯರ್ ಕೊರತೆಯಾಗದಂತೆ ಕ್ರಮಕೈಗೊಳ್ಳಬೇಕು, ಜಿಲ್ಲೆಯ ಬೇಡಿಕೆಗೆ ಅನ್ವಯ ಆಮ್ಲಜನಕ ಮತ್ತು ರೆಮ್ಡಿಸಿವಿಯರ್ ಪೂರೈಕೆ ಮಾಡಿಕೊಳ್ಳುವ ಬಗ್ಗೆ ಅಗತ್ಯ ಕ್ರಮ ವಹಿಸವೇಕು. ಜಿಲ್ಲೆಗೆ ಪೂರೈಕೆಯಾಗುವ ರೆಮ್ಡಿಸಿವಿಯರ್ ಯಾವುದೇ ಕಾರಣಕ್ಕೂ ಕಾಳಸಂತೆ, ಅಕ್ರಮವಾಗಿ ಮಾರಾಟವಾಗದಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾ ಔಷಧಿ ನಿಯಂತ್ರಕಿ ಮಮತಾ ಅವರಿಗೆ ನಿರ್ದೇಶಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರ ಆರೋಗ್ಯದ ಬಗ್ಗೆ ಸೂಕ್ತವಾಗಿ ನಿಗಾವಣೆ ಮಾಡಿ ಮಾನವೀಯ ದೃಷ್ಟಿಯಿಂದ ಕೋವಿಡ್ ಸೋಂಕಿತರ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು ಹಾಗೂ ಚಿಕಿತ್ಸೆಯಲ್ಲಿ ಯಾವುದೇ ರೀತಿಯ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸುರೇಶ್ ಬಾಬು ಅವರಿಗೆ ಸೂಚಿಸಿದರು.
ಆನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 2 ಮೆಡಿಕಲ್ ಕಾಲೇಜುಗಳನ್ನು ಬಳಕೆಮಾಡಿಕೊಳ್ಳಲಾಗುತ್ತಿದ್ದು ನಗರದ ಶ್ರೀದೇವಿ ಕಾಲೇಜಿನಲ್ಲಿ ಕೋವಿಡ್ ಸೋಂಕಿತರನ್ನು ದಾಖಲು ಮಾಡಿಕೊಳ್ಳಲಾಗಿದೆ. ಸಿದ್ದಾರ್ಥ ಆಸ್ಪತ್ರೆಗೆ ಈಗಾಗಲೇ 26 ಸೋಂಕಿತರನ್ನು ದಾಖಲು ಮಾಡಲಾಗಿದೆ ಇಲ್ಲಿ 200 ಹಾಸಿಗೆಗಳನ್ನು ಮೀಸಲಿಡುವುದಾಗಿ ಅವರು ತಿಳಿಸಿದ್ದಾರೆ. ನಗರದ ಸಿದ್ದಗಂಗಾ, ಅಶ್ವಿನಿ ಆಸ್ಪತ್ರೆ ಸೇರಿದಂತೆ ಇನ್ನಿತರ ಖಾಸಗಿಆಸ್ಪತ್ರೆಗಳಲ್ಲಿ ಸುಮಾರು 500 ರಿಂದ 600 ಹಾಸಿಗೆಗಳನ್ನು ಸಿದ್ಧ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಕೋವಿಡ್ ನಿಯಂತ್ರಣಕ್ಕಾಗಿ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ, ಜಿಲ್ಲೆಯ ಜನರು ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು, ಸೋಂಕು ನಿಯಂತ್ರಣಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಗ್ರಾಮೀಣ ಭಾಗಗಳಲ್ಲಿ ಟೆಸ್ಟ್ ಮಾಡಲು ಲ್ಯಾಬ್ ಆನ್ ವೀಲ್ ವಾಹನವನ್ನು ಜಿಲ್ಲೆಯಲ್ಲಿ ಬಳಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ವ್ಯವಸ್ಥೆಯಿಂದ ಸೋಂಕಿತರನ್ನು ಶೀಘ್ರ ಪತ್ತೆ ಹಚ್ಚಲು ನೆರವಾಗಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಹುಲಿನಾಯ್ಕರ್, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಡಿಎಚ್ಒ ನಾಗೇಂದ್ರಪ್ಪ, ಡಿಎಸ್ ಸುರೇಶ್ಬಾಬು, ಉಪವಿಭಾಗಾಧಿಕಾರಿ ಅಜಯ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವರ್ತಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರ್ತಕರ ಸಭೆ
ಕೋವಿಡ್ ಸಭೆಗೂ ಮುನ್ನ ತುಮಕೂರಿನ ವರ್ತಕರ ಸಂಘದ ಪ್ರತಿನಿಧಿಗಳ ಸಭೆ ನಡೆಸಿದ ಸಚಿವರು, ಕೋವಿಡ್-19 ನಿಯಂತ್ರಣ ಸಂಬಂಧ ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿಗಳು ಉಲ್ಲಂಘನೆಯಾಗದಂತೆ ಕಡ್ಡಾಯವಾಗಿ ಪಾಲಿಸಬೇಕು, ವರ್ತಕರ ಬಗ್ಗೆ ಸಹಾನುಭೂತಿ ನನಗೂ ಇದೆ, ಆದರೆ ಕೊರೊನಾ ಮಹಾಮಾರಿ ದೇಶಕ್ಕೆ ಗಂಡಾಂತರ ತಂದಿದೆ, ಹಾಗಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದರು.
ಪೊಲೀಸರು ಬಲವಂತವಾಗಿ ಮುಚ್ಚಿಸುವ ಪರಿಸ್ಥಿತಿ ತಲೆದೋರದಂತೆ ಕೋವಿಡ್ ಸೋಂಕಿನ ಬಗ್ಗೆ ಅರಿತು ಸ್ವಯಂ ಪ್ರೇರಿತವಾಗಿ ಮಾರ್ಗಸೂಚಿಗಳನ್ನು ಪಾಲಿಸಿ, ತಮ್ಮ ಮನವಿ ಬಗ್ಗೆ ಸೋಮವಾರ ನಡೆಯುವ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು, ಪ್ರತಿನಿತ್ಯ ವರ್ತಕರಿಗೆ 4 ರಿಂದ 6 ಗಂಟೆಗಳ ವಹಿವಾಟು ನಡೆಸಲು ಕಾಲಾವಕಾಶ ಕಲ್ಪಿಸಿದರೆ ಉತ್ತಮ ಎನ್ನುವುದು ನನ್ನ ಭಾವನೆ, ಹಾಗಾಗಿ ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ, ಸರ್ಕಾರ ಒಪ್ಪದಿದ್ದರೆ ಮಾರ್ಗಸೂಚಿಗಳನ್ನು ಪಾಲಿಸಲೇಬೇಕು, ದೇಶಕ್ಕೆ ಗಂಡಾತರ ಬಂದಾಗ ನಾವೆಲ್ಲಾ ಸರ್ಕಾರದ ಆದೇಶದಂತೆ ನಡೆಯಬೇಕು ಎಂದು ಮನವಿ ಮಾಡಿದರು.

Get real time updates directly on you device, subscribe now.

Comments are closed.

error: Content is protected !!