ತುಮಕೂರು: ದೇಶದಲ್ಲಿ ಕೋವಿಡ್ ಎರಡನೇ ಅಲೆ ಸುಂಟರಗಾಳಿಯಂತೆ ಹಬ್ಬುತ್ತಿದೆ. ಭಾರತದ ಆರ್ಥಿಕ ಪುನಶ್ಚೇತನಕ್ಕೆ ಹೊಡೆತ ಉಂಟಾಗೋದಂತು ಪಕ್ಕಾ ಎಂದು ಈಗಾಗಲೇ ಆರ್ ಬಿಐನ ಗವರ್ನರ್ ಸ್ಪಷ್ಟಪಡಿಸಿದ್ದಾರೆ.
ಹೌದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ್ ದಾಸ್ ಆರ್ ಬಿ ಐನ ಸದಸ್ಯರೊಂದಿಗೆ ವಿತ್ತೀಯ ನೀತಿ ಸಮಿತಿ ಸಭೆಯಲ್ಲಿ ಬಹಿರಂಗ ಹೇಳಿಕೆ ನೀಡಿದ್ದಾರೆ.
ದೇಶದಲ್ಲಿ ಪ್ರತಿದಿನ ಕೊರೊನಾ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಕೋವಿಡ್-19 ಅಲೆಯನ್ನು ತಡೆಯುವ ನಿಟ್ಟಿನಲ್ಲಿ ದೇಶದ ಹಲವು ಭಾಗಗಳಲ್ಲಿ ಮಿನಿ ಲಾಕ್ ಡೌನ್ ಮಾಡಲಾಗಿದೆ, ಇದರಿಂದ ವ್ಯಾಪಾರ ವಹಿವಾಟು ಸಂಪರ್ಕ ಕುಂಠಿತವಾಗಿದೆ, ಈ ಬೆಳವಣಿಗೆಯಿಂದ ದೇಶದ ಆರ್ಥಿಕ ಪರಿಸ್ಥಿತಿ ಪುನಶ್ಚೇತನಗೊಳ್ಳುವುದು ಕಷ್ಟಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಲಾಕ್ ಡೌನ್ ಬೇಡ ಎಂದೇ ಹೇಳುತ್ತಿದ್ದರು. ಆದರೆ, ಲಾಕ್ ಡೌನ್ ಮಾಡದೇ ಜನಸಂಪರ್ಕ ನಿಯಂತ್ರಿಸಲು ಕಷ್ಟಸಾಧ್ಯವಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಘೋಷಿತ ಲಾಕ್ ಡೌನ್ ಗೆ ಸೂಚನೆ ನೀಡಿ ಆಯಾ ಜಿಲ್ಲಾಧಿಕಾರಿಗಳು, ಖಾಕಿ ಪಡೆ ಸಹಯೋಗದಲ್ಲಿ ಖುದ್ದು ಅಂಗಡಿಗಳಿಗೆ ಭೇಟಿ ನೀಡಿ ಅಂಗಡಿ ಮುಂಗಟ್ಟುಗಳನ್ನು ಸ್ಥಗಿತಗೊಳಿಸುವಂತೆ ವರ್ತಕರು ವಿನಂತಿಸಿದರು.
ಇಷ್ಟೇ ಅಲ್ಲಾ, ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ವರ್ತಕರು ಈ ಬಗ್ಗೆ ಆಕ್ರೋಶ ಕೂಡ ವ್ಯಕ್ತಪಡಿಸಿದರು. ಈ ಅಘೋಷಿತ ಲಾಕ್ ಡೌನ್ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರಲಿದೆ, ನಿಗದಿತ ಸಮಯ ಗೊತ್ತು ಮಾಡಿದರೆ, ಒಂದಷ್ಟು ಚೇತರಿಕೆ ಆಗಲಿದೆ ಎಂದು ಜಿಲ್ಲಾಧಿಕಾರಿಗಳಿಗೆ ವಿನಂತಿಸಿದರೂ ಪ್ರಯೋಜನವಾಗಲಿಲ್ಲ. ಮೇ 4 ರವರೆಗೆ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಬಂದ್ ಮಾಡುವುದು ಅನಿವಾರ್ಯ ಎಂಬುದನ್ನು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಹೋಟೆಲ್ ಉದ್ಯಮಕ್ಕೆ ಭಾರಿ ಪೆಟ್ಟು: ಇನ್ನೂ ಒಂದನೇ ಅಲೆಗೆ ಬೆಚ್ಚಿ ಬಿದ್ದಿದ್ದ ಹೋಟೆಲ್ ಉದ್ಯಮಕ್ಕೆ ಮತ್ತೆ ಹೊಡೆತ ಕೊಟ್ಟಿದೆ. 1ನೇ ಅಲೆಗೆ ಕೆಲವು ಹೋಟೆಲ್ ಗಳು ತಿಂಗಳಿಗೆ 40 ರಿಂದ 50 ಸಾವಿರ ಬಾಡಿಗೆ ಕಟ್ಟಲು ಸಾಧ್ಯವಾಗದೆ ಉದ್ಯಮವನ್ನೇ ಕೈಬಿಟ್ಟರು. ಜೊತೆಗೆ ನಿತ್ಯ ದುಡಿಮೆಯಿಂದ ಜೀವನೋಪಾಯಕ್ಕೆ ಹಣ ಸಿಗುವ ಟೀ ಹೋಟೆಲ್ ಗಳು ಮತ್ತೆ ಸಂಕಷ್ಟಕ್ಕೆ ಸಿಲುಕಿವೆ.
ರಸ್ತೆ ಬದಿಯ ಫುಟ್ ಪಾತ್ ವ್ಯಾಪಾರಿಗಳು, ಫುಡ್ ಸ್ಟ್ರೀಟ್ ಗಳು, ಜ್ಯೂಸ್ ಅಂಗಡಿಗಳು, ಹೊಟ್ಟೆ ಪಾಡಿಗಾಗಿ ಅವಲಂಬಿಸಿರುವ ಅನೇಕ ಸಣ್ಣ ವ್ಯಾಪಾರಸ್ಥರ ಸ್ಥಿತಿ ಕೈ ಮೀರುವ ಸಾಧ್ಯತೆಗಳಿವೆ.
ಒಟ್ಟಾರೆ ಮಧ್ಯಮ ವರ್ಗದ ಜೀವನದ ಮೇಲೆ ಬರೆ ಎಳೆದಿರುವ ಕೊರೊನಾ ಮಹಾಮಾರಿ ಮತ್ತೆ ಯಾವ ಗಂಡಾಂತರಗಳನ್ನು ಸೃಷ್ಟಿ ಮಾಡುವುದೋ, ಇನ್ನೆಷ್ಟು ಜನರನ್ನು ಬಲಿ ಪಡೆಯುವುದೋ ಕಣ್ಣ ಮುಂದಿರುವ ಪ್ರಶ್ನೆ.
Get real time updates directly on you device, subscribe now.
Next Post
Comments are closed.