ಕರ್ಪ್ಯೂ ಮಾರ್ಗಸೂಚಿ ಅನುಷ್ಠಾನಗೊಳಿಸಿ: ಜಿಲ್ಲಾಧಿಕಾರಿ

546

Get real time updates directly on you device, subscribe now.

ತುಮಕೂರು: ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹೊರಡಿಸಿರುವ ವಾರಾಂತ್ಯದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಹಾಗೂ ಜಿಲ್ಲೆಯಲ್ಲಿ ಕೋವಿಡ್ ಕೇರ್ ಸೆಂಟರ್ಗಳು ಕಾರ್ಯಾರಂಭ ಮಾಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್ ಮೂಲಕ ತಹಸೀಲ್ದಾರರು ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕಿನ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿ ಅವರು ಸೂಚನೆ ನೀಡಿದರು.
ವಾರಾಂತ್ಯದ ಕರ್ಪ್ಯೂ ಅವಧಿಯಲ್ಲಿ ಯಾವ್ಯಾವ ಚಟುವಟಿಕೆಗಳಿಗೆ ನಡೆಸಲು ಅವಕಾಶ ನೀಡಲಾಗಿದೆಯೋ ಅವುಗಳಿಗೆ ಅವಕಾಶ ಮಾಡಿಕೊಡಿ. ವಾರಾಂತ್ಯದ ಕರ್ಪ್ಯೂ ಮಾರ್ಗಸೂಚಿಗಳನ್ನು ಪೊಲೀಸ್ ಇಲಾಖೆಯ ಸಮನ್ವಯದೊಂದಿಗೆ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು, ಕೊವೀಡ್ ಕೇರ್ ಸೆಂಟರ್ ಗಳಲ್ಲಿ ಸ್ವಚ್ಛತೆ ಕಾಪಾಡಬೇಕು, ಪ್ರತಿನಿತ್ಯ ಕ್ಲಿನಿಂಗ್ ಮಾಡಬೇಕು ಎಂದರು.
ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಆರಂಭಿಸುವ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಸೋಂಕಿತರನ್ನು ದಾಖಲು ಮಾಡಲು ಪ್ರಾರಂಭಿಸಬೇಕು, ಮಾರ್ಗಸೂಚಿನ್ವಯ ಸೋಂಕಿತರಿಗೆ ಉತ್ತಮ ಗುಣಮಟ್ಟದ ತಿಂಡಿ, ಊಟ ಹಾಗೂ ನೀರಿನ ವ್ಯವಸ್ಥೆ ಮಾಡಬೇಕು, ಕೋವಿಡ್ ಕೇರ್ ಸೆಂಟರ್ನಲ್ಲಿ ಪಿಪಿ ಕಿಟ್, ಎನ್ 95 ಮಾಸ್ಕ್, ತ್ರಿಬಲ್ ಲೇಯರ್ ಮಾಸ್ಕ್, ಸ್ಯಾನಿಟೈಸರ್ ಮತ್ತಿತರ ವ್ಯವಸ್ಥೆ ಕಲ್ಪಿಸಬೇಕು, ಅಲ್ಲಿ ಕರ್ತವ್ಯ ನಿರತ ವೈದ್ಯರು, ನರ್ಸಿಂಗ್ ಸಿಬ್ಬಂದಿ ದಿನದ 24 ಗಂಟೆಗಳ ಕಾಲ ಪಾಳಿಯಲ್ಲಿ ಕಾರ್ಯ ನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕಳೆದ ಬಾರಿ ಕೋವಿಡ್ ಕೇರ್ ಸೆಂಟರ್ಗಳು ನಿರ್ವಹಣೆ ಮಾಡಿದಂತೆಯೇ ಈ ಬಾರಿಯು ನಿರ್ವಹಣೆ ಮಾಡಲು ವ್ಯವಸ್ಥೆ ಮಾಡಬೇಕು, ಅಗತ್ಯವಿರುವ ಆಕ್ಸಿಜನ್ನ್ನು ಜಂಬೂ ಸಿಲಿಂಡರ್ಗಳಲ್ಲಿ ತುಂಬಿಸಿಕೊಳ್ಳಿ, ಯಾವುದೇ ಕಾರಣಕ್ಕೂ ಆಮ್ಲಜನಕದ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನಿಗಾವಹಿಸಬೇಕು. ರೆಮಿಡಿಸ್ವಿಯರ್ ಅಕ್ರಮವಾಗಿ ಮಾರಾಟವಾಗದಂತೆ ನಿಗಾ ಇಡಬೇಕು. ಸೋಂಕಿತರ ಕನಿಷ್ಠ 20 ಮಂದಿಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಬೇಕು ಎಂದು ಸೂಚಿಸಿದರು.
ಸರ್ಕಾರದ ಎಸ್ಒಪಿ ಯಂತೆ ಕೋವಿಡ್ ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್ಗಳಿಗೆ ನಿರ್ದೇಶಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ಎಸಿ ಅಜಯ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ರಜಾ ದಿನಗಳಲ್ಲೂ ಪಡಿತರ ವಿತರಣೆಗೆ ಸೂಚನೆ
ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಧಿಸಿರುವ ರಾತ್ರಿ ಮತ್ತು ವಾರಾಂತ್ಯದ ಕರ್ಫ್ಯೂ ಹಾಗೂ ವಾರದ ರಜಾ ದಿನವಾದ ಮಂಗಳವಾರ ಮತ್ತು ಸರ್ಕಾರದ ರಜಾದಿನಗಳಲ್ಲಿಯೂ ನ್ಯಾಯಬೆಲೆ ಅಂಗಡಿಗಳು ಪಡಿತರ ವಿತರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚಿಸಿದ್ದಾರೆ.
ಕೋವಿಡ್-19 ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಈ ಮಾರ್ಗಸೂಚಿಗಳ ಪ್ರಕಾರ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಅಗತ್ಯ ಸೇವೆಗಳ ವ್ಯಾಪ್ತಿಯಲ್ಲಿ ಬರುವುದರಿಂದ ಯಾವುದೇ ರಜಾ ವಿನಾಯಿತಿ ಅಥವಾ ಸೇವಾ ನಿರ್ಬಂಧ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಏಪ್ರಿಲ್ ಮಾಹೆಯಲ್ಲಿ ಎಲ್ಲಾ ನ್ಯಾಯಬೆಲೆ ಅಂಗಡಿಗಳು ವಾರದ ರಜಾ ದಿನವಾದ ಮಂಗಳವಾರ ಮತ್ತು ಸರ್ಕಾರದ ರಜಾ ದಿನಗಳಂದು ಕಡ್ಡಾಯವಾಗಿ ಪಡಿತರ ವಿತರಣೆ ಮಾಡಲು ಸೂಚಿಸಲಾಗಿದೆ. ವಾರಾಂತ್ಯ ಕರ್ಫ್ಯೂ ಸಮಯದಲ್ಲಿ ನ್ಯಾಯಬೆಲೆ ಅಂಗಡಿಗಳು ಪಡಿತರ ವಿತರಿಸಲು ಯಾವುದೇ ಅಡ್ಡಿ ಇರುವುದಿಲ್ಲ ಎಂದು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!