ಮಳೆ ಅಬ್ಬರ- ವಾಹನ ಸವಾರರ ಪರದಾಟ

152

Get real time updates directly on you device, subscribe now.

ಹುಳಿಯಾರು: ಮಂಗಳೂರು ವಿಶಾಖಪಟ್ಟಣ ರಾಷ್ಟ್ರೀಯ ಹೆದ್ದಾರಿ 234 ರ ಹುಳಿಯಾರು ಭಾಗದ ವಿಸ್ತರಣೆಯ ಕಾಮಗಾರಿ 3 ವರ್ಷ ಕಳೆದರೂ ಮುಗಿಯದೆ ಕುಂಟುತ್ತ ಸಾಗುತ್ತಿದೆ. ಪರಿಣಾಮ ವಾಹನ ಸವಾರರು ಬೇಸಿಗೆಯಲ್ಲಿ ಧೂಳಿನ ಮಜ್ಜನ, ಮಳೆಗಾಲದಲ್ಲಿ ಬಿದುಎದ್ದು ತಳ್ಳಿ ಪ್ರಯಾಣಿಸುವ ಅನಿವಾರ್ಯ ಕರ್ಮ ಸೃಷ್ಟಿಯಾಗಿದೆ.
ರಸ್ತೆ ನಿರ್ಮಾಣದ ಭರದಲ್ಲಿ ಡಾಂಬರ್ ರಸ್ತೆಯನ್ನು ಕಿತ್ತು ಜಲ್ಲಿ ಹಾಗೂ ಜಲ್ಲಿಯ ಪುಡಿ ಹಾಕಿ ಹಾಗೆಯೇ ಬಿಟ್ಟಿರುವುದರಿಂದ ಧೂಳು ಎದ್ದು ಪ್ರಮಾಣಿಕರಿಗೆ ಧೂಳಿನ ಸ್ನಾನ ಮಾಡಿಸುತ್ತಿದ್ದರೆ ಮಳೆಗಾಲದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಚರಂಡಿ ಮತ್ತು ರಸ್ತೆ ಕಾಮಗಾರಿಯಿಂದ ಅಲ್ಪಸ್ವಲ್ಪ ಮಳೆಯಾದರೂ ಸಹ ಮೊಳಕಾಲುದ್ದ ನೀರು ನಿಂತು ವಾಹನ ಸವಾರರಿಗೆ ಗುಂಡಿ ಕಾಣದೆ ಬಿದ್ದುಎದ್ದು ಓಡಾಡುವಂತಾಗಿದೆ.
ಗುರುವಾರ ರಾತ್ರಿ ಹುಳಿಯಾರಿನಲ್ಲಿ ಬಿದ್ದ ಮಳೆಗೆ ರಾಮಗೋಪಾಲ್ ಸರ್ಕಲ್ ಬಳಿಯ ಅರ್ಧಕ್ಕೆ ಸ್ಥಗಿತಗೊಂಡಿರುವ ರಸ್ತೆಯಲ್ಲಿ ಮೊಳಕಾಲುದ್ದ ನೀರು ನಿಂತು ವಾಹನಸವಾರರಿಗೆ ಸಿಕ್ಕಾಪಟ್ಟೆ ಕಿರಿಕಿರಿ ತಂದೊಡ್ಡಿತ್ತು. ಮಳೆ ನೀರಿನ ಜೊತೆಗೆ ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದಾಗಿ ರಸ್ತೆಯ ನೀರು ಚರಂಡಿಗೆ ಹರಿಯದೆ ಚರಂಡಿ ನೀರೇ ರಸ್ತೆಗೆ ಹರಿದ ಪರಿಣಾಮ ಬೆಳಗ್ಗೆಯವರೆವಿಗೂ ನೀರು ರಸ್ತೆಯಲ್ಲಿ ನಿಂತು ಓಡಾಡುವವರಿಗೆ ಜಾರಿ ತೊಂದರೆಗೆ ಕಾರಣವಾಯಿತು.
ಕಳೆದ 3 ವರ್ಷಗಳಿಂದಲೂ ಇಲ್ಲಿನ ಸಮಸ್ಯೆಗೆ ಮುಕ್ತಿ ಸಿಗದೆ ವಾಹನ ಸವಾರರಿಗೆ ಹಾಗೂ ರಸ್ತೆ ಪಕ್ಕದ ವ್ಯಾಪಾರಿಗಳು ಹಾಗೂ ನಿವಾಸಿಗಳು ನಿತ್ಯವೂ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಿಡಿಶಾಪಹಾಕಿ ದಿನದೂಡುತ್ತಿದ್ದಾರೆ. ಸಾಧಾರಣ ಮಳೆಬಂದರೂ ಸಾಕು ಮೇಲಿನಿಂದ ನೀರು ಹರಿದು ಬಂದು ರಾಮಗೋಪಾಲ್ ಸರ್ಕಲ್ ಬಳಿ ನಿಲ್ಲುತ್ತದೆ. ಹೊರಗೆ ಹರಿಯದೆ ನಿಂತ ಜಾಗದಲ್ಲೇ ನೀರು ನಿಲ್ಲುತ್ತಿದ್ದು ಸೊಳ್ಳೆಗಳ ಕಾಟ, ಕೊಳಚೆ ನೀರಿನ ದುರ್ನಾತ ಹೇಳತೀರದಾಗಿದೆ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ನಿಂತಿರುವ ನೀರನ್ನು ತೆಗೆಯುವುದರ ಜೊತೆಗೆ ಚರಂಡಿ ಕಾಮಗಾರಿಯನ್ನು ವೈಜ್ಞಾನಿಕವಾಗಿ ಪೂರ್ಣಗೊಳಿಸಿ ರಸ್ತೆ ಕಾಮಗಾರಿ ಮುಗಿಸಿ ಸುಗಮ ಸಂಚಾರಕ್ಕೆ ನೆರವಾಗುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!