ಕೊರೊನಾ ತಡೆಗೆ ಪೌರ ಕಾರ್ಮಿಕರಿಂದ ಜನ ಜಾಗೃತಿ

363

Get real time updates directly on you device, subscribe now.

ತುಮಕೂರು: ನಗರದ ಪ್ರತಿಷ್ಠಿತ ವಾರ್ಡುಗಳಲ್ಲಿಯೇ ಒಂದಾಗಿರುವ 26ನೇ ವಾರ್ಡಿನಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ನೋಡಲ್ ಅಧಿಕಾರಿ ರವೀಶ್ ಹಾಗೂ ವಾರ್ಡ್ನ ಕೌನ್ಸಿಲರ್ ಮಲ್ಲಿಕಾರ್ಜುನಯ್ಯ ನೇತೃತ್ವದಲ್ಲಿ ಪೌರಕಾರ್ಮಿಕರು ಹಾಗೂ ಪಾಲಿಕೆಯ ಸಿಬ್ಬಂದಿ ಜನಜಾಗೃತಿ ಜಾಥಾ ಹಮ್ಮಿಕೊಂಡಿದ್ದರು.
ನಗರದ 26ನೇ ವಾರ್ಡ್ಗೆ ಸೇರಿದ ಅಶೋಕ ನಗರ, ಎಸ್ಐಟಿ ಬಡಾವಣೆಯ ಪ್ರತಿ ಬೀದಿಗಳಲ್ಲಿಯೂ ಕನಿಷ್ಠ 10- 15 ಕೋವಿಡ್-19 ಪಾಸಿಟಿವ್ ಕೇಸುಗಳಿವೆ, ನಗರದ ಹೃದಯ ಭಾಗದಲ್ಲಿರುವುದರಿಂದ ಮತ್ತಷ್ಟು ಹೆಚ್ಚಾಗದಂತೆ ತಡೆಯುವ ನಿಟ್ಟಿನಲ್ಲಿ ಜಾಗೃತಿ ಜಾಥಾ ಹಮ್ಮಿಕೊಂಡಿರುವುದಾಗಿ ತಿಳಿಸಿದ ನೋಡಲ್ ಅಧಿಕಾರಿ ರವೀಶ್, ಅತಿ ಹೆಚ್ಚು ವಿದ್ಯಾವಂತರು, ಸುಶಿಕ್ಷಿತರು ಇರುವ ಬಡಾವಣೆ ಇದಾಗಿದೆ, ಆದರೆ ಜನರ ನಿರ್ಲಕ್ಷದಿಂದಾಗಿ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ, ಆದ್ದರಿಂದ ಮುಂದಿನ 10 ದಿನಗಳವರೆಗೆ ಅಂದರೆ ಮೇ 04ರ ವರೆಗೆ ಜನರು ಅನಗತ್ಯವಾಗಿ ಮನೆಯಿಂದ ಹೊರಬರದಂತೆ, ಅದರಲ್ಲಿಯೂ ಸೋಂಕಿತರು ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೆ ರಸ್ತೆಗಳಿಗೆ ಇಳಿಯದಂತೆ ಎಚ್ಚರಿಸುವ ನಿಟ್ಟಿನಲ್ಲಿ ಈ ಅಭಿಯಾನ ಆರಂಭಿಸಲಾಗಿದೆ, ರಾಜಧಾನಿ ಬೆಂಗಳೂರು ಹೊರತು ಪಡಿಸಿದರೆ ಅತಿ ಹೆಚ್ಚು ಕೇಸುಗಳಿರುವುದು ತುಮಕೂರು ನಗರದಲ್ಲಿ, ಅದರಲ್ಲಿಯೂ ಅಶೋಕ ನಗರ, ಎಸ್ಐಟಿ ಬಡಾವಣೆಯಲ್ಲಿ, ಹಾಗಾಗಿ ಜನರು ಸರಕಾರದ ನಿಯಮಗಳನ್ನು ಪಾಲಿಸುವ ಮೂಲಕ ರೋಗ ತಡೆಯಲು ಸಹಕರಿಸುವಂತೆ ಮನವಿ ಮಾಡಿದರು.
ಪಾಲಿಕೆಯ ಹಿರಿಯ ಆರೋಗ್ಯ ನಿರೀಕ್ಷಕಿ ಮಂಜುಳ ಮಾತನಾಡಿ, ಪ್ರತಿಷ್ಠಿತ ವಾರ್ಡ್ಗಳಲ್ಲಿಯೇ ಒಂದಾಗಿರುವ 26 ರಲ್ಲಿ ಅತಿ ಹೆಚ್ಚು ಕೇಸುಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಈ ಜಾಗೃತಿ ಅಭಿಯಾನ ಆರಂಭಿಸಲಾಗಿದೆ, ಇದರಲ್ಲಿ ಪಾಲಿಕೆಯ ಕಸ ಸಂಗ್ರಹಿಸುವ ಆಟೋ ಚಾಲಕರು, ಸಹಾಯಕರು, ಪೌರಕಾರ್ಮಿಕರು,ಇನ್ನಿತರ ಸಿಬ್ಬಂದಿ ಭಾಗವಹಿಸಿ, ಪ್ರತಿ ಮನೆ ಮನೆಗೆ ಹೋಗಿ ಸರಕಾರದ ನಿಯಮ ಪಾಲಿಸುವಂತೆ ಎಚ್ಚರಿಕೆ ನೀಡುವ ಜೊತೆಗೆ, ಪಾಸಿಟಿವ್ ಇರುವ ಮನೆಗಳ ಜನರು ವಹಿಸಬೇಕಾದ ಅಗತ್ಯ ಮುನ್ನೆಚ್ಚರಿಕೆಗಳನ್ನು ತಿಳಿಸಿ ಹೇಳಲಿದ್ದಾರೆ, ಮುಂದಿನ 10 ದಿನಗಳ ಕಾಲ ನಮ್ಮ ತಿರುಗಾಟಕ್ಕೆ ಕಡಿವಾಣ ಹಾಕಿಕೊಂಡರೆ ರೋಗ ಹೆಚ್ಚು ಹರಡದಂತೆ ತಡೆಯಲು ಸಾಧ್ಯ, ಹಾಗಾಗಿ ಜನರು ನಮಗೆ ಸಹಕರಿಸುವಂತೆ ಮನವಿ ಮಾಡಿದರು.
ಪಾಲಿಕೆಯ ಪೌರಕಾರ್ಮಿಕರಾದ ದೇದಾರ್ ಚಂದ್ರಪ್ಪ ಮಾತನಾಡಿ, ಅಶೋಕ ನಗರದಲ್ಲಿ 11 ಕ್ರಾಸ್ಗಳಿದ್ದು, ಒಂದೊಂದು ಕ್ರಾಸ್ ನಲ್ಲಿಯೂ ಕನಿಷ್ಠ 15- 20 ಜನ ಸೋಂಕಿತರಿದ್ದಾರೆ, ಆದರೆ ಯಾರು ಸೋಂಕಿತರು ಎಂಬುದೇ ತಿಳಿಯುತ್ತಿಲ್ಲ, ಇದರಿಂದ ಜನರು ತೊಂದರೆಗೆ ಒಳಗಾಗುತ್ತಿದ್ದಾರೆ, ಆದ್ದರಿಂದ ವಾರ್ಡ್ನ ಕೌನ್ಸಿಲರ್ ಅವರ ಮನವಿ ಮೇರೆಗೆ ಈ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.
ವಾರ್ಡ್ನ ಕೌನ್ಸಿಲರ್ ಹೆಚ್.ಮಲ್ಲಿಕಾರ್ಜುನಯ್ಯ ಮಾತನಾಡಿ, ವಾರ್ಡ್ನ ಜನರು ಅಗತ್ಯ ಮುನ್ನಚ್ಚರಿಕಾ ಕ್ರಮ ವಹಿಸದ ಕಾರಣ ರೋಗ ಉಲ್ಬಣಗೊಳ್ಳುತ್ತಿದೆ, ಇದರಿಂದ ಎಲ್ಲರಿಗೂ ತೊಂದರೆ, ಅಲ್ಲದೆ ಬೆಳಗ್ಗೆ ಪೌರಕಾರ್ಮಿಕರು ಆಟೋಗಳಲ್ಲಿ ಕಸ ಸಂಗ್ರಹಣೆಗೆ ಬಂದಾಗ ಸೋಂಕಿತರ ಮನೆಗಳವರು ಕಸ ನೀಡುವಾಗ ತಿಳಿಸಿದರೆ, ಅದಕ್ಕೆಂದೆ ಪ್ರತ್ಯೇಕ ವ್ಯವಸ್ಥೆ ಮಾಡಬಹುದು, ಆಗ ಕಸ ಒಂದು ರಸ್ತೆಯಿಂದ ಇನ್ನೊಂದು ರಸ್ತೆಗೆ ಹರಡುವುದು, ಪೌರಕಾರ್ಮಿಕರಿಗೆ ವರ್ಗಾವಣೆ ಆಗುವುದನ್ನು ತಡೆಯಬಹುದು, ಹಾಗಾಗಿ ಜನರು ಎಚ್ಚರಿಕೆ ವಹಿಸಬೇಕೆಂಬುದು ನಮ್ಮ ಮನವಿ, ಎಲ್ಲಾ ವಿಚಾರಗಳಲ್ಲಿಯೂ ಮುಂಚೂಣಿಯಲ್ಲಿರುವ 26ನೇ ವಾರ್ಡ್ನ ಜನರು, ಕೊರೊನ ತಡೆಯುವಲ್ಲಿಯೂ ಪಾಲಿಕೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.

Get real time updates directly on you device, subscribe now.

Comments are closed.

error: Content is protected !!