ಸಾರ್ವಜನಿಕರು ಕರ್ಫ್ಯೂ ನಿಯಮ ಪಾಲಿಸಬೇಕು: ಡೀಸಿ

483

Get real time updates directly on you device, subscribe now.

ತುಮಕೂರು: ಕೋವಿಡ್ ಪ್ರಕರಣ ತಡೆಗಾಗಿ ಸರ್ಕಾರ ಜಾರಿಗೊಳಿಸಿರುವ ವೀಕೆಂಡ್ ಕರ್ಫ್ಯೂವನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮನವಿ ಮಾಡಿದರು.
ನಗರದಲ್ಲಿ ವಾರಾಂತ್ಯ ಲಾಕ್ಡೌನ್ ಪರಿಶೀಲಿಸಿದ ನಂತರ ಟೌನ್ಹಾಲ್ ವೃತ್ತದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರು ಸರ್ಕಾರ ಜಾರಿಗೊಳಿಸಿರುವ ವೀಕೆಂಡ್ ಕರ್ಫ್ಯೂ ಮತ್ತು ರಾತ್ರಿ ಕರ್ಫ್ಯೂವನ್ನು ಪಾಲಿಸುವ ಮೂಲಕ ಕೊರೊನಾ ಸೋಂಕು ತಡೆಗೆ ಸಹಕರಿಸಬೇಕು ಎಂದರು.
ಪ್ರಸ್ತುತ ಜಿಲ್ಲೆಯಲ್ಲಿ ಬರುತ್ತಿರುವ ಪಾಸಿಟಿವ್ ಪ್ರಕರಣಗಳಲ್ಲಿ ಶೇ. 5 ರಷ್ಟು ಮಂದಿಗೆ ಆಕ್ಸಿಜನ್ ಅಗತ್ಯ ಇರುವವರು ಇದ್ದಾರೆ. ಇವರಿಗೆ ಆಕ್ಸಿಜನ್ ಕೊರತೆಯಾಗದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ. ಹಾಗೆಯೇ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ಸೂಚಿಸಲಾಗಿದೆ ಎಂದರು.
ಜಿಲ್ಲೆಯ 10 ತಾಲ್ಲೂಕುಗಳಲ್ಲೂ ಕೋವಿಡ್ ಕೇರ್ ಸೆಂಟರ್ಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಮುಂದಿನ ಮೂರು ದಿನಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲೂ 50 ಹಾಸಿಗೆಯಂತೆ 450 ಆಕ್ಸಿಜನ್ ಬೆಡ್ ವ್ಯವಸ್ಥೆಗೆ ಸಿದ್ದತೆ ಮಾಡಲಾಗಿದೆ ಎಂದರು.
ಕೋವಿಡ್ ಪಾಸಿಟಿವ್ ಬಂದಿರುವವರಿಗೆ ಕೇಂದ್ರ ಸರ್ಕಾರದ ಗೈಡ್ಲೈನ್ ಪ್ರಕಾರವೇ ರೆಮ್ಡಿಸಿವಿರ್ ಲಸಿಕೆ ನೀಡಬೇಕು. ಈ ಸಂಬಂಧ ಈಗಾಗಲೇ ವೈದ್ಯರಿಗೂ ಸೂಚನೆ ನೀಡಲಾಗಿದೆ, ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೆಮ್ಡಿಸಿವಿರ್ ಲಸಿಕೆಗಳಿಗೆ ಸರ್ಕಾರಿ ಸೀಲ್ ಹಾಕಲಾಗಿರುತ್ತದೆ, ಈ ಲಸಿಕೆ ದುರುಪಯೋಗವಾಗದಂತೆ ಅಗತ್ಯ ಇರುವವರಿಗೆ ನೀಡಲು ಕ್ರಮ ವಹಿಸುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಆಕ್ಸಿಜನ್ ಅಗತ್ಯ ಇರುವವರಿಗೆ 24 ಗಂಟೆ ಮುನ್ನವೇ ವ್ಯವಸ್ಥೆ ಮಾಡಿಕೊಳ್ಳುವಂತೆ ಈಗಾಗಲೇ ಸಚಿವರು ತಿಳಿಸಿದ್ದಾರೆ, ಹಾಗೆಯೇ 9 ಅಗತ್ಯ ಸೇವೆಗಳ ಕಾರ್ಖಾನೆಗಳಿಗೆ ಆಕ್ಸಿಜನ್ ಪೂರೈಸಲು ಮಾತ್ರ ಅವಕಾಶ ನೀಡಲಾಗಿದೆ, ಇದನ್ನು ಹೊರತುಪಡಿಸಿ ಇತರೆ ಕಾರ್ಖಾನೆಗಳಿಗೆ ಆಕ್ಸಿಜನ್ ಸರಬರಾಜು ಮಾಡುತ್ತಿದ್ದರೆ ಆ ಬಗ್ಗೆ ಗಮನ ಹರಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಔಷಧಿ ನಿಯಂತ್ರಣಾಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದಾರೆ ಎಂದರು.
ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಹಾಸಿಗೆ ನೀಡಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ಡಿಹೆಚ್ಓ ನೇತೃತ್ವದ ತಂಡ ಪ್ರತಿದಿನ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಮಾತನಾಡಿ, ನಗರದ ಆಯಕಟ್ಟಿನ ಸ್ಥಳಗಳಲ್ಲಿ 18 ರಿಂದ 19 ಚೆಕ್ ಪೋಸ್ಟ್ ಆರಂಭಿಸಲಾಗಿದೆ, ಈಗಾಗಲೇ ಮಾರ್ಗಸೂಚಿ ಅನ್ವಯ ಏನೇನು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ, ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಸಹ ಈ ಸಂಬಂಧ ಸೂಚನೆ ನೀಡಿದ್ದಾರೆ ಎಂದರು.
ಅನಾವಶ್ಯಕವಾಗಿ ಓಡಾಡುತ್ತಿರುವ ವಾಹನಗಳ ತಪಾಸಣೆ ನಡೆಸಿ ಜಪ್ತಿ ಮಾಡಲಾಗುತ್ತಿದೆ, ಹಾಗಾಗಿ ಸಾರ್ವಜನಿಕರು ವಿನಾ ಕಾರಣ ರಸ್ತೆಗಿಳಿಯಬಾರದು ಎಂದರು.
ಪ್ರಯಾಣಿಕರನ್ನು ಬಸ್ ನಿಲ್ದಾಣಕ್ಕೆ ಬಿಟ್ಟು ಬರುವವರು ದಾಖಲಾತಿ ತೋರಿಸುವುದು ಕಡ್ಡಾಯ, ಹಾಗೆಯೇ ಅಗತ್ಯ ಸೇವೆಗಳಿಗೆ ತೆರಳುವವರು ಸಹ ತಮ್ಮ ಸಂಸ್ಥೆಯ ಐಡಿ ಕಾರ್ಡ್ ತೋರಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್ ಮತ್ತಿತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!