ಮನೆ ಸೇರಿದ ಜನ- ರಸ್ತೆಗಳು ಖಾಲಿ ಖಾಲಿ- ರೋಡ್ ಗೆ ಬಂದವರಿಗೆ ಬಿತ್ತು ಫೈನ್

ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಯಶಸ್ವಿ

568

Get real time updates directly on you device, subscribe now.

ತುಮಕೂರು: ರಾಜ್ಯದಲ್ಲಿ ರಾಕೆಟ್ ವೇಗದಲ್ಲಿ ಏರಿಕೆಯಾಗುತ್ತಿರುವ ಕೋವಿಡ್-19 ಸೋಂಕು ನಿಯಂತ್ರಿಸುವ ಸಲುವಾಗಿ ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯ ಲಾಕ್ಡೌನ್ಗೆ ಕಲ್ಪತರುನಾಡಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಗರ ಸೇರಿದಂತೆ ಜಿಲ್ಲೆಯ 10 ತಾಲ್ಲೂಕುಗಳು ಸಂಪೂರ್ಣ ಸ್ಥಬ್ದವಾಗಿದ್ದವು.
ಕೋವಿಡ್ ಕರ್ಫ್ಯೂ ಹೇರಿರುವ ರಾಜ್ಯ ಸರ್ಕಾರ ಸಾರ್ವಜನಿಕರ ಅನುಕೂಲಕ್ಕಾ ಗಿ ಕೆಲ ನಿಯಮಗಳನ್ನು ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳಾದ ಹಾಲು, ಮೊಸರು, ತರಕಾರಿ ಮತ್ತು ದಿನಸಿ ಪದಾರ್ಥಗಳಿಗೆ ಸಂಬಂಧಿಸಿದ ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆದಿದ್ದವು, ಈ ಅವಧಿಯಲ್ಲಿ ಸಾರ್ವಜನಿಕರು ಸಹ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಅಂಗಡಿಗಳಿಂದ ಅಗತ್ಯ ವಸ್ತುಗಳನ್ನು ಖರೀದಿಸಿ ಮನೆಗಳತ್ತ ತೆರಳಿದ ದೃಶ್ಯಗಳು ಕಂಡು ಬಂದವು.
ಮಾಂಸ ಪ್ರಿಯರು ಕೋಳಿ, ಮಟನ್, ಮೀನಿನ ಅಂಗಡಿಗಳಿಗೆ ತೆರಳಿ ಮಾಂಸ ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿದ್ದವು, 10 ಗಂಟೆ ಬಳಿಕ ಮಾಂಸ ಮಾರಾಟದ ಅಂಗಡಿಗಳು ಸಹ ಬಾಗಿಲು ಮುಚ್ಚಿದ್ದವು, ಬೆಳಗ್ಗೆ 10 ಗಂಟೆಯ ನಂತರ ತುರ್ತು ಸೇವೆಗಳಾದ ಸರ್ಕಾರಿ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಮೆಡಿಕಲ್ ಸ್ಟೋರ್ಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಅಂಗಡಿ ಮುಂಗಟ್ಟುಗಳು, ತರಕಾರಿ, ಹಣ್ಣಿನ ಅಂಗಡಿಗಳು ಬಾಗಿಲು ಹಾಕಿದವು.
ಇನ್ನು ಪ್ರಯಾಣಿಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಸಾರಿಗೆ ಸಂಸ್ಥೆ ಬಸ್ಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ, ಆದರೆ ಬಸ್ ನಿಲ್ದಾಣದಲ್ಲಿ ಬಸ್ಗಳು ಪ್ರಯಾಣಿಕರನ್ನು ಕೊಂಡೊಯ್ಯಲು ಸಿದ್ಧವಿದ್ದರೂ ಪ್ರಯಾಣಿಕರೇ ಇರಲಿಲ್ಲ, ಪ್ರಯಾಣಿಕರಿಗಾಗಿ ಬಸ್ಗಳು ನಿಲ್ದಾಣದಲ್ಲೇ ಕಾದು ನಿಂತಿದ್ದವು.
ವಾರಾಂತ್ಯ ಲಾಕ್ಡೌನ್ನಿಂದಾಗಿ ಸಾರ್ವಜನಿಕರು ಮನೆಯಿಂದ ಹೊರ ಬರದ ಕಾರಣ ಸಾರಿಗೆ ಸಂಸ್ಥೆ ಬಸ್ಗಳು ಬೆರಳೆಣಿಕೆ ಸಂಖ್ಯೆಯಷ್ಟು ಪ್ರಯಾಣಿಕರಿಗಾಗಿ ಗಂಟೆಗಟ್ಟಲೇ ಬಸ್ ನಿಲ್ದಾಣದಲ್ಲಿ ಕಾದು ಕೂರಿಸಿಕೊಂಡು ಅಲ್ಲೊಂದು ಇಲ್ಲೊಂದು ಬಸ್ಗಳು ಸಂಚಾರ ನಡೆಸಿದರೆ, ಯಾವುದೇ ಖಾಸಗಿ ಬಸ್ಗಳು ಮಾತ್ರ ರಸ್ತೆಗಳಿಯಲಿಲ್ಲ.
ಖಾಸಗಿ ಬಸ್ಗಳ ಮಾಲೀಕರು ಸ್ವಯಂ ಪ್ರೇರಣೆಯಿಂದ ಸರ್ಕಾರದ ವಾರಾಂತ್ಯ ಲಾಕ್ಡೌನ್ಗೆ ಬೆಂಬಲ ವ್ಯಕ್ತಪಡಿಸಿ ಬಸ್ಗಳ ಸಂಚಾರ ಸ್ಥಗಿತಗೊಳಿಸಿವೆ. ಆದರೆ ರಸ್ತೆಗಳಲ್ಲಿ ಕಾರುಗಳು, ಲಾರಿಗಳು, ಬೈಕ್ಗಳು, ಆಟೋ ರಿಕ್ಷಾಗಳ ಸಂಚಾರ ಮಾತ್ರ ಬೆಳಗ್ಗೆ 10 ಗಂಟೆಯವರೆಗೆ ಎಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂತು, 10 ಗಂಟೆಯ ನಂತರ ಪೊಲೀಸ್ ಇಲಾಖೆ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಸ್ಥಾಪಿಸಿರುವ ಚೆಕ್ಪೋಸ್ಟ್ಗಳಲ್ಲಿ ಪೊಲೀಸ್ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದು, ಅನಗತ್ಯವಾಗಿ ರಸ್ತೆಗಳಿದಿದ್ದ ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
ನಗರ ಉಪವಿಭಾಗದ ಡಿವೈಎಸ್ಪಿ ಶ್ರೀನಿವಾಸ್ ನಗರದಾದ್ಯಂತ ಸಂಚರಿಸಿ ಎಲ್ಲಾ ಚೆಕ್ಪೋಸ್ಟ್ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಪ್ರತಿಯೊಂದು ವಾಹನ ತಪಾಸಣೆ ನಡೆಸುವಂತೆ ಸೂಚನೆ ನೀಡಿದ್ದರ ಮೇರೆಗೆ ಪೊಲೀಸರು ಎಲ್ಲ ವಾಹನಗಳನ್ನು ಪರಿಶೀಲಿಸಿ, ಅಗತ್ಯ ಇದ್ದವರಿಗೆ ಮಾತ್ರ ಸಂಚರಿಸಲು ಅವಕಾಶ ಮಾಡಿಕೊಟ್ಟು, ವಿನಾ ಕಾರಣ ಅನಗತ್ಯವಾಗಿ ರಸ್ತೆಗಿಳಿದಿದ್ದವರಿಗೆ ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸಿದರು.
ವಾರಾಂತ್ಯ ಲಾಕ್ಡೌನ್ ಇಂದು ಕೂಡ ಜಾರಿಯಲ್ಲಿರುವುದರಿಂದ ನಿನ್ನೆಯ ಪರಿಸ್ಥಿತಿಯೇ ಇಂದು ಮುಂದುವರೆಯಲಿದೆ. ಇದನ್ನು ಅರಿತಿರುವ ಸಾರ್ವಜನಿಕರು ಮುನ್ನೆಚ್ಚರಿಕೆಯಾಗಿಯೇ ರಸ್ತೆಗಿಳಿಯದೆ ತಮ್ಮ ತಮ್ಮ ಮನೆಗಳಲ್ಲೇ ಉಳಿದು ಸರ್ಕಾರದ ಕೋವಿಡ್ ಕರ್ಫ್ಯೂಗೆ ಬೆಂಬಲ ಸೂಚಿಸುತ್ತಿರುವುದು ಜಿಲ್ಲೆಯಾದ್ಯಂತ ಕಂಡು ಬಂದಿದೆ.
ಆದರೆ ಸರ್ಕಾರ ಸಾರಿಗೆ ಸಂಸ್ಥೆ ಬಸ್ಗಳನ್ನು ರಸ್ತೆಗಿಳಿಸಿರುವುದನ್ನು ಕೆಲ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದು, ವಾರಾಂತ್ಯ ಲಾಕ್ಡೌನ್ ಘೋಷಿಸಿ ಬಸ್ ಸಂಚಾರ ಆರಂಭಿಸಿರುವುದರ ಉದ್ದೇಶವಾದರೂ ಏನು, ವಿನಾ ಕಾರಣ ಜನರ ಸಂಚಾರಕ್ಕೆ ಸರ್ಕಾರವೇ ಪ್ರಚೋದಿಸುತ್ತಿದೆ, ಇಂತಹ ಗೊಂದಲದ ನೀತಿಯನ್ನು ಸರ್ಕಾರ ಮೊದಲು ಕೈ ಬಿಡಬೇಕು, ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಜಾರಿಗೊಳಿಸಿರುವ ಕಟ್ಟುನಿಟ್ಟಿನ ಕ್ರಮಗಳಿಗೆ ಜನ ಸ್ಪಂದಿಸುತ್ತಾರೆ, ಈ ರೀತಿಯ ಗೊಂದಲ ಮೂಡಿಸುವುದಾದರೂ ಏಕೆ ಎಂಬ ಪ್ರಶ್ನೆಗಳು ಪ್ರಜ್ಞಾವಂತ ನಾಗರಿಂದ ಕೇಳಿ ಬಂದಿವೆ.

Get real time updates directly on you device, subscribe now.

Comments are closed.

error: Content is protected !!