ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ಗಳಿಗೆ ಸ್ಥಳಾಂತರಿಸಿ

ಸೋಂಕಿನ ಮೂಲ ಪತ್ತೆಗೆ ಮಾಧುಸ್ವಾಮಿ ಸೂಚನೆ

214

Get real time updates directly on you device, subscribe now.

ತುಮಕೂರು: ಜಿಲ್ಲೆಯಲ್ಲಿ ಹೋಂ ಐಸೋಲೇಷನ್, ಹೋಂ ಕ್ವಾರಂಟೈನಲ್ಲಿರುವ ಸೋಂಕಿತರನ್ನು ಕೂಡಲೇ ಕೋವಿಡ್ ಕೇರ್ ಸೆಂಟರ್ಗಳಿಗೆ ಸ್ಥಳಾಂತರಿಸಬೇಕು ಹಾಗೂ ಸೋಂಕಿತರ ಸೋಂಕಿನ ಮೂಲ ಪತ್ತೆ ಹಚ್ಚಬೇಕು ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ತಡೆಗಟ್ಟುವಿಕೆ, ನಿರ್ವಹಣೆ ಕುರಿತಂತೆ ಚಿಕ್ಕನಾಯಕನಹಳ್ಳಿಯ ತಾಲೂಕು ಕಚೇರಿಯ ಕೆಸ್ವಾನ್ ಮೂಲಕ ಕಂದಾಯ, ಆರೋಗ್ಯ, ನಗರ ಸ್ಥಳೀಯ ಸಂಸ್ಥೆ ಹಾಗೂ ಪಂಚಾಯತ್ ರಾಜ್ ಇಲಾಖೆಯ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿದರು.
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಹೆಚ್ಚಿನ ಗಮನ ಹರಿಸಬೇಕು, ಹೋಂ ಐಸೋಲೇಷನ್ ಹಾಗೂ ಹೋಂ ಕ್ವಾರಂಟೈನ್ನಲ್ಲಿರುವವರು ಎಲ್ಲೆಂದರೆಲ್ಲೆ ಓಡಾಡುತ್ತಿರುವ ಬಗ್ಗೆ ದೂರು ಕೇಳಿಬರುತ್ತಿವೆ, ಅಲ್ಲದೆ ಅವರು ಪ್ರತ್ಯೇಕವಾಗಿರಲು ಸೌಲಭ್ಯಗಳು ಇಲ್ಲದಿರಬಹುದು, ಆದ್ದರಿಂದ ಹೋಂ ಐಸೋಲೇಷನ್ ಹಾಗೂ ಹೋಂ ಕ್ವಾರಂಟೈನ್ನಲ್ಲಿರುವವರನ್ನು ಪರೀಕ್ಷೆ ಮಾಡಿ ಕೋವಿಡ್ ಕೇರ್ ಸೆಂಟರ್ಗೆ ಸ್ಥಳಾಂತರಿಸಬೇಕು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತರ ಪೈಕಿ ಸೋಂಕಿನ ಲಕ್ಷಣ ಇಲ್ಲದವರು ಮತ್ತು ಆಮ್ಲಜನಕ ಅವಶ್ಯಕವಿಲ್ಲದವರನ್ನು ಕೋವಿಡ್ ಕೇರ್ ಸೆಂಟರ್ಗೆ ಸ್ಥಳಾಂತರಿಸಬೇಕು, ಕ್ವಾರಂಟೈನ್ನಲ್ಲಿದ್ದ ಸೋಂಕಿತರ ಮನೆಯವರನ್ನು ಕಡ್ಡಾಯವಾಗಿ ರ್ಯಾಪಿಡ್ ಟೆಸ್ಟ್ಗೆ ಒಳಪಡಿಸಬೇಕು ಎಂದು ನಿರ್ದೇಶಿಸಿದರು.
ಸೋಂಕಿತರಿಗೆ ಸೋಂಕು ಎಲ್ಲಿಂದ ಬಂದಿದೆ ಎಂಬ ಮೂಲವನ್ನು ಪತ್ತೆ ಹಚ್ಚಬೇಕು, ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಗುರುತಿಸಿ ಅವರನ್ನು ಕೋವಿಡ್ ಟೆಸ್ಟ್ ಗೊಳಪಡಿಸುವ ಪ್ರಮಾಣ ಹೆಚ್ಚಾಗಬೇಕು, ಈ ನಿಟ್ಟಿನಲ್ಲಿ ತಹಸೀಲ್ದಾರ್, ಆರೋಗ್ಯಾಧಿಕಾರಿಗಳು, ವೈದ್ಯರು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ಪಂಚಾಯತ್ ರಾಜ್ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ಬಳಸಿಕೊಂಡು ಮನೆ ಮನೆ ಸಮೀಕ್ಷೆ ನಡೆಸಿ, ಸೋಂಕಿನ ಲಕ್ಷಣ ಹೊಂದಿರುವವರ ಬಗ್ಗೆ ಮಾಹಿತಿ ಸಂಗ್ರಹಿಸಬೇಕು, ಒಂದು ವೇಳೆ ಸೋಂಕಿನ ಲಕ್ಷಣಗಳಿದ್ದರೆ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು, ಒಂದು ವೇಳೆ ಆಶಾಕಾರ್ಯಕರ್ತೆಯರು ಕೆಲಸ ನಿರ್ವಹಿಸಲು ನಿರಾಕರಿಸಿದರೆ ಅಂತಹವರಿಗೆ ನೋಟಿಸ್ ನೀಡಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಡಿಎಚ್ಒ ನಾಗೇಂದ್ರಪ್ಪ ಅವರಿಗೆ ಸೂಚಿಸಿದರು.
ಹಾಸಿಗೆಗಳು ಸಿಗದೆ ಸೋಂಕಿತರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡದಂತಾಗಬಾರದು, ಜಿಲ್ಲೆಯಲ್ಲಿ ಲಭ್ಯವಿರುವ ಹಾಸಿಗೆಗಳು ಮತ್ತೆ ಐಸಿಯು, ವೆಂಟಿಲೇಟರ್ ಇವುಗಳ ಮಾಹಿತಿಯನ್ನು ಡಿಎಚ್ಒ ಹಾಗೂ ಡಿಎಸ್ ಅವರು ನಿರ್ವಹಿಸಿ, ಹಾಸಿಗೆ ಲಭ್ಯತೆ ಇರುವ ಕಡೆ ಸೋಂಕಿತರನ್ನು ದಾಖಲು ಮಾಡಬೇಕು, ಹಾಸಿಗೆ ಖಾಲಿಯಿರುವ ಕಡೆ ತಾವು ರೆಫರ್ ಮಾಡುವ ಸೋಂಕಿತರನ್ನು ಖಾಸಗಿ ಆಸ್ಪತ್ರೆಗಳು ನಿರಾಕರಿಸುವಂತಿಲ್ಲ, ಒಂದು ವೇಳೆ ನಿರಾಕರಿಸಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ರೆಮ್ಡಿಸಿವಿಯರ್ ಮತ್ತು ಆಮ್ಲಜನಕವನ್ನು ಅಗತ್ಯಕ್ಕೆ ಅನುಗುಣವಾಗಿ ಪೂರೈಕೆ ಮಾಡಿ ಕೊರತೆಯಾಗದಂತೆ ನಿರ್ವಹಣೆ ಮಾಡಬೇಕು, ಅಗತ್ಯವಿರುವ ಸೋಂಕಿತರಿಗೆ ಮಾರ್ಗಸೂಚಿಯಂತೆಯೇ ರೆಮ್ಡಿಸಿವಿಯರ್ ಹಾಗೂ ಆಮ್ಲಜನಕ ನೀಡಬೇಕು. ಖಾಸಗಿ ಕೋವಿಡ್ ಆಸ್ಪತ್ರೆಗಳಿಗೆ ನಿತ್ಯ ಭೇಟಿ ನೀಡಿ ರೆಮ್ಡಿಸಿವಿಯರ್ ಹಾಗೂ ಆಮ್ಲಜನಕವನ್ನು ಸರ್ಕಾರದ ಮಾರ್ಗಸೂಚಿಯಂತೆ ಸೋಂಕಿತರಿಗೆ ಬಳಕೆ ಮಾಡಲಾಗುತ್ತಿದೆಯೇ ಎಂಬುದನ್ನು ಪರಿಶೀಲನೆ ಮಾಡಬೇಕು, ರೆಮ್ಡಿಸಿವಿಯರ್ ಹಾಗೂ ಆಮ್ಲಜನಕದ ಅಗತ್ಯತೆಯ ಬಗ್ಗೆ ಪ್ರತಿನಿತ್ಯ ವರದಿ ಸಂಗ್ರಹಿಸಿ ನನಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ನೀಡಬೇಕು, ಸರ್ಕಾರ ನಿಗದಿ ಮಾಡಿರುವ ಬೆಲೆಗಿಂತ ಹೆಚ್ಚಿನ ಬೆಲೆಗೆ ರೆಮ್ಡಿಸಿವಿಯರ್ ಮಾರಾಟವಾಗದಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಹಾಗೂ ಜಿಲ್ಲಾ ಔಷಧ ನಿಯಂತ್ರಿಕಿ ಮಮತಾ ಅವರಿಗೆ ಹೇಳಿದರು.
ನಿತ್ಯ 5- 6 ಸಾವಿರ ಕೋವಿಡ್ ಪರೀಕ್ಷೆಗಳಾಗಬೇಕು, ಅಂದಿನ ವರದಿ ಅಂದೇ ಸಿಗುವಂತಾಗಬೇಕು, ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯ ಸಮರ್ಪಕವಾಗಿ ಆಗಲೇಬೇಕು, ಸೋಂಕು ಹರಡುವ ಚೈನ್ ಕತ್ತರಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿರುವ ಪ್ರತಿ ತಾಲೂಕಿನ ಕೋವಿಡ್ ನಿರ್ವಹಣೆ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು ಸೋಂಕಿತರ ಸಂಪರ್ಕಿತರ ಪತ್ತೆ ಹಚ್ಚುವ ಕಾರ್ಯ ಸಮರ್ಪಕವಾಗಿ ನಿರ್ವಹಿಸಬೇಕು, ಸೋಂಕಿನ ಪ್ರಮಾಣ ಕಡಿಮೆ ಮಾಡಲು ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು, ಸೋಂಕಿತರ ಸೋಂಕಿನ ಮೂಲ ಪತ್ತೆ ಹಚ್ಚಬೇಕು, ಕೋವಿಡ್ ಕೇರ್ ಸೆಂಟರ್ಗಳನ್ನು ಆರಂಭಿಸಬೇಕು, ಅಧಿಕಾರಿಗಳು ಆಸ್ಪತ್ರೆಗಳಿಗೆ ಮತ್ತು ಹೋಂ ಐಸೋಲೇಷನ್ನಲ್ಲಿರುವ ಸೋಂಕಿತರ ಮನೆಗಳಿಗೆ ಭೇಟಿ ನೀಡಿ ಮಾರ್ಗಸೂಚಿಗಳನ್ನು ಸೋಂಕಿತರು ಪಾಲಿಸುತ್ತಿದ್ದಾರಾ ಎಂಬುದರ ಬಗ್ಗೆ ಪರಿಶೀಲನೆ ನಡೆಸಬೇಕು, ಗ್ರಾಮಗಳಲ್ಲಿ ಸೋಂಕು ಹರಡುವುದಕ್ಕೆ ಕಡಿವಾಣ ಹಾಕಲೇಬೇಕು, ಯಾವುದೇ ಕಾರಣಕ್ಕೂ ಗ್ರಾಮಕ್ಕೆ ಕೋವಿಡ್ ಸೋಂಕು ವ್ಯಾಪಕವಾಗಿ ಹರಡಬಾರದು. ಈ ನಿಟ್ಟಿನಲ್ಲಿ ಹಳ್ಳಿಗಳಲ್ಲಿ ಹೆಚ್ಚು ಕೋವಿಡ್ ಪರೀಕ್ಷೆ ಮಾಡಬೇಕು, ಕೋವಿಡ್ ಮುಂಜಾಗ್ರತ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ನಿರ್ದೇಶಿಸಿದರು.
ತಿಪಟೂರು ತಾಲೂಕಿನಲ್ಲಿ ಲ್ಯಾಬ್ ಇದ್ದು, ಈ ಲ್ಯಾಬ್ನಲ್ಲಿ ತಿಪಟೂರು ಉಪವಿಭಾಗದ ಚಿಕ್ಕನಾಯಕನಹಳ್ಳಿ ಹಾಗೂ ತುರುವೇಕೆರೆ ಸೇರಿದಂತೆ ಮೂರು ತಾಲೂಕುಗಳ ಕೋವಿಡ್ ಪರೀಕ್ಷೆಗಳನ್ನು ಸೀನಿಯಾರಿಟಿ ಆಧಾರದ ಮೇಲೆ ನಡೆಸಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಶಿರಾ ಹಾಗೂ ತಿಪಟೂರು ಆಸ್ಪತ್ರೆಗಳಲ್ಲಿ ಕನಿಷ್ಟ 100 ಆಮ್ಲಜನಕ ಸಂಪರ್ಕವಿರುವ ಹಾಸಿಗೆಗಳನ್ನು ನಿರ್ಮಾಣ ಮಾಡಬೇಕು, ಇದರಿಂದ ಸೋಂಕಿತರನ್ನು ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ, ಈಗಾಗಲೇ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಐಸಿಯು, ಆಮ್ಲಜನಕ ಸಂಪರ್ಕವಿರುವ ಹಾಸಿಗೆ, ವೆಂಟಿಲೇಟರ್ ಸೇರಿದಂತೆ ಸೋಂಕಿತರ ಚಿಕಿತ್ಸೆ ನೀಡುವ ಸೌಲಭ್ಯ ಒದಗಿಸಲಾಗಿದೆ. ಆಯಾ ತಾಲೂಕಿನಲ್ಲಿ ಚಿಕಿತ್ಸೆ ನೀಡಿ ಗಂಭೀರತೆ ಇದ್ದರೆ ಮಾತ್ರ ಜಿಲ್ಲಾಸ್ಪತ್ರೆಗೆ ರೆಫರ್ ಮಾಡಬೇಕು ಎಂದು ವೈದ್ಯರಿಗೆ ಸೂಚಿಸಿದರು.
ವೈದ್ಯರು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ಇದ್ದು, ಸಮನ್ವಯತೆಯಿಂದ ಕೋವಿಡ್ ನಿರ್ವಹಣೆ ಮಾಡಬೇಕು, ಒಂದು ವೇಳೆ ಕರ್ತವ್ಯದಲ್ಲಿ ಲೋಪ ಎಸಗಿದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಕೊರಟಗೆರೆ, ತುರುವೇಕೆರೆ ಸೇರಿದಂತೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಬೇಕು ಹಾಗೂ ಆಟೋಗಳ ಮೂಲಕ ಪ್ರಚಾರ, ಕರಪತ್ರಗಳ ಮೂಲಕ ಕೋವಿಡ್ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ, ಆಮ್ಲಜನಕ, ರೆಮ್ಡಿಸಿವಿಯರ್ನ್ನು ಜಿಲ್ಲೆಯ ಅಗತ್ಯಕ್ಕೆ ಅನುಗುಣವಾಗಿ ತರಿಸಿಕೊಳ್ಳಲಾಗುತ್ತಿದೆ, ಪ್ರತಿನಿತ್ಯ ಕೋವಿಡ್ ಕುರಿತಂತೆ ಸಮನ್ವಯ ಸಭೆಗಳನ್ನು ನಡೆಸಲಾಗುತ್ತಿದೆ, ವಾರ್ ರೂಂ ಸ್ಥಾಪಿಸಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಜಿಲ್ಲೆಯಲ್ಲಿ ಕೈಗೊಂಡಿರುವ ಕೋವಿಡ್ ನಿಯಂತ್ರಣ ಕ್ರಮಗಳು ಹಾಗೂ ಸರ್ಕಾರದ ಮಾರ್ಗಸೂಚಿಗಳ ಅನುಷ್ಠಾನಗಳ, ಲಸಿಕಾ ಪ್ರಗತಿ ಬಗ್ಗೆ ಮಾಹಿತಿ ನೀಡಿದರು.
ವಿಡಿಯೋ ಕಾನ್ಫನ್ಸ್ನಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪ ವಿಭಾಗಾಧಿಕಾರಿ ಅಜಯ್, ಪಾಲಿಕೆ ಆಯುಕ್ತೆ ರೇಣುಕಾ, ಡಿಎಚ್ಒ ನಾಗೇಂದ್ರಪ್ಪ, ಡಿಎಸ್ ಸುರೇಶ್ಬಾಬು ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.

Get real time updates directly on you device, subscribe now.

Comments are closed.

error: Content is protected !!