ಹುಳಿಯಾರು: ಹುಳಿಯಾರಿನ ರಾಮಗೋಪಾಲ್ ಸರ್ಕಲ್ನಲ್ಲಿ ನ್ಯಾಷನಲ್ ಹೈವೆ ರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಗಿತದಿಂದಾಗಿ ರಸ್ತೆಯಲ್ಲಿದ್ದ ಗುಂಡಿಗಳು ಹಾಗೆ ಉಳಿದಿದ್ದರು. ಈ ಗುಂಡಿಗಳಿಗೆ ಮಳೆ ನೀರು ನಿಂತು ವಾಹನ ಸವಾರರು ಬಿದ್ದುಎದ್ದು ಓಡಾಡುತ್ತಿದ್ದರು. ಈ ಬಗ್ಗೆ ಪತ್ರಿಕೆ ಪ್ರಕಟಿಸಿದ ವರದಿ ಫಲಶೃತಿಯಿಂದಾಗಿ ರಸ್ತೆಯಲ್ಲಿ ನೀರು ನಿಲ್ಲದಂತೆ ತಾತ್ಕಾಲಿಕ ಮಾರ್ಗೋಪಾಯ ಕಂಡುಕೊಳ್ಳಲಾಗಿದೆ.
ಮಂಗಳೂರು ವಿಶಾಖಪಟ್ಟಣ ರಾಷ್ಟ್ರೀಯ ಹೆದ್ದಾರಿ 234 ರ ಹುಳಿಯಾರು ಭಾಗದ ವಿಸ್ತರಣೆಯ ಕಾಮಗಾರಿ 3 ವರ್ಷ ಕಳೆದರೂ ಮುಗಿಯದೆ ಕುಟುಂತ ಸಾಗುತ್ತಿದೆ. ಪರಿಣಾಮ ಡಾಂಬರ್ ರಸ್ತೆಯನ್ನು ಹಾಗೆಯೇ ಬಿಟ್ಟಿರುವುದರಿಂದ ಅಲ್ಪಸ್ವಲ್ಪ ಮಳೆಯಾದರೂ ಮೊಳಕಾಲುದ್ದ ನೀರು ನಿಂತು ವಾಹನ ಸವಾರರಿಗೆ ಗುಂಡಿ ಕಾಣದೆ ಬಿದ್ದುಎದ್ದು ಓಡಾಡುವ ಅನಿವಾರ್ಯ ಕರ್ಮ ನಿರ್ಮಾಣವಾಗಿತ್ತು.
ಅಲ್ಲದೆ ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದಾಗಿ ರಸ್ತೆಯ ನೀರು ಚರಂಡಿಗೆ ಹರಿಯದೆ ಚರಂಡಿ ನೀರೆ ರಸ್ತೆಗೆ ಹರಿಯುತ್ತಿತ್ತು. ಊರಿನ ಕೊಳಚೆ ನೀರೆಲ್ಲ ಚರಂಡಿಯಿಂದ ರಸ್ತೆಗೆ ಹರಿದು ಬಂದು ನಿಲ್ಲುವುದರಿಂದ ಸೊಳ್ಳೆಗಳ ಕಾಟ, ಕೊಳಚೆ ನೀರಿನ ದುರ್ನಾತ ಹೇಳತೀರದಾಗಿತ್ತು, ಈ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟವಾದ ತಕ್ಷಣ ಎಚ್ಚೆತ್ತ ಗುತ್ತಿಗೆದಾರರು ಬೆಳ್ಳಂಬೆಳಗ್ಗೆಯೇ ರಸ್ತೆಯಲ್ಲಿ ನಿಲ್ಲುವ ನೀರು ಸರಾಗವಾಗಿ ಹರಿಯುವಂತೆ ತಾತ್ಕಾಲಿಕ ವ್ಯವಸ್ಥೆಗೆ ಮುಂದಾದರು.
ನೀರು ನಿಲ್ಲುವ ಸ್ಥಳದಿಂದ 200 ಮೀಟರ್ ದೂರದ ತೋಟಕ್ಕೆ ಹಿಟಾಚಿಯ ಸಹಾಯದಿಂದ ಟ್ರಂಚ್ ತೆಗೆದು ನೀರಿನ ತೆರವು ಮಾಡುವ ಜೊತೆಗೆ ಮಳೆಬಂದಾಗಲೆಲ್ಲಾ ನೀರು ರಸ್ತೆಯಲ್ಲಿ ನಿಲ್ಲದೆ ಸರಾಗವಾಗಿ ಹರಿಯುವಂತೆ ಮಾಡಲು ಮುಂದಾದರು. ಇದಕ್ಕೆ ಸ್ಥಳೀಯ ಕೆಲ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದರು, ಮಳೆ ನೀರಿನ ಜೊತೆಗೆ ಚರಂಡಿಯ ಕೊಳಚೆ ನೀರು ಹರಿಯುತ್ತದೆ, ಹಾಗಾಗಿ ದುರ್ನಾತ ಮತ್ತು ಸೊಳ್ಳೆ, ಹಂದಿಗಳ ಕಾಟ ಶುರುವಾಗುವುದರಿಂದ ಇಲ್ಲಿ ಟ್ರಂಚ್ ತೆಗೆಯಬೇಡಿ ಎಂದು ಪಟ್ಟು ಹಿಡಿದರು.
ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಿ ಈಗ ತೊಂದರೆಯಾಗಿದೆ ಎಂದು ಖಾಸಗಿ ತೋಟ, ನಿವೇಶನಕ್ಕೆ ಕೊಳಚೆ ನೀರು ಬಿಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಮೊದಲು ವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಿ ಸರ್ಕಾರಿ ಕರಾಬಿನಲ್ಲಿ ಚರಂಡಿ ನೀರು ಬಿಡಿ ಎಂದು ಗಲಾಟೆ ಮಾಡಿದರು. ಸ್ಥಳಕ್ಕೆ ಪೊಲೀಸರು ಆಗಮಿಸಿ ಇದು ತಾತ್ಕಾಲಿಕ ಟ್ರಂಚ್ ಆಗಿದ್ದು ಮಳೆ ಬಂದಾಗ ಮಾತ್ರ ನೀರು ಹೋಗಲು ಮಾಡಿದ್ದು ರಸ್ತೆ ಮತ್ತು ಚರಂಡಿ ಕಾಮಗಾರಿ ಮುಗಿದ ತಕ್ಷಣ ಟ್ರಂಚ್ ಮುಚ್ಚುವುದಾಗಿ ಭರವಸೆ ನೀಡಿ ಪರಿಸ್ಥಿತಿ ತಿಳಿಗೊಳಿಸಿ ಟ್ರಂಚ್ ತೆಗೆದು ಮಳೆ ನೀರು ಹೋಗುವಂತೆ ಮಾಡಿದರು.
ಸ್ಥಳೀಯ ನಿವಾಸಿಗಳ ವಿರೋಧ- ಪೊಲೀಸರ ಮಧ್ಯೆ ಪ್ರವೇಶ- ಟ್ರಂಚ್ ಮುಚ್ಚುವ ಭರವಸೆ
ಟ್ರಂಚ್ ತೆರೆದು ಮಳೆ ನೀರು ತೆರವು
Get real time updates directly on you device, subscribe now.
Next Post
Comments are closed.