ಡೀಸಿ, ಎಸ್ಪಿಯಿಂದ ಕರ್ಫ್ಯೂ ಪರಿಶೀಲನೆ

417

Get real time updates directly on you device, subscribe now.

ತುಮಕೂರು: ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಅವರು ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ವೀಕೆಂಡ್ ಕರ್ಫ್ಯೂ ಪರಿಶೀಲನೆ ನಡೆಸಿದರು.
ನಗರದ ಟೌನ್ಹಾಲ್, ಅಶೋಕ ರಸ್ತೆ, ಬಿ.ಹೆಚ್.ರಸ್ತೆ, ಶಿವಕುಮಾರ ಸ್ವಾಮೀಜಿ ಸರ್ಕಲ್ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಕರ್ಫ್ಯೂ ಅನುಷ್ಠಾನದ ಪರಿಶೀಲಿಸಿ ಅನಂತರ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಸರ್ಕಾರದ ಆದೇಶದಂತೆ ವೀಕೆಂಡ್ ಕರ್ಫ್ಯೂ ಜಾರಿಮಾಡಲಾಗಿದೆ, ಸಾರ್ವಜನಿಕರು ಸಹಕರಿಸಿ ಸೋಂಕು ಹರಡದಂತೆ ಎಚ್ಚರ ವಹಿಸಬೇಕು, ಅನಗತ್ಯವಾಗಿ ಹೊರಗಡೆ ಓಡಾಡದೇ ಕೋವಿಡ್ ಮಾರ್ಗಸೂಚಿ ಪಾಲಿಸಬೇಕೆಂದರು.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿಯವರು ಎಲ್ಲಾ ತಾಲ್ಲೂಕುಗಳ ತಹಸೀಲ್ದಾರ್ಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಕೋವಿಡ್ ನಿಯಂತ್ರಣ ಸಭೆ ನಡೆಸಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಶೀಘ್ರ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಿ, ಹೋಂ ಐಸೋಲೇಷನ್ನಲ್ಲಿರುವವರನ್ನು ಮತ್ತು ಆಮ್ಲಜನಕ ಅವಶ್ಯಕವಿಲ್ಲದ, ಸೋಂಕಿನ ಲಕ್ಷಣಗಳಿಲ್ಲದಿರುವವರನ್ನು ಸ್ಥಳಾಂತರಗೊಳಿಸಲು ತಿಳಿಸಿದ್ದಾರೆ ಎಂದು ಹೇಳಿದರು.
ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ, ರೆಮ್ಡಿಸಿವಿಯರ್ ಪೂರೈಕೆ ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ, ಅಕ್ರಮವಾಗಿ ರೆಮ್ಡಿಸಿವಿಯರ್ ದಾಸ್ತಾನು ಮತ್ತು ಮಾರಾಟ ಮಾಡುವಂತಿಲ್ಲ, ಇಂತಹ ಪ್ರಕರಣ ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ಮತ್ತು ಸರ್ಕಾರದ ಆದೇಶ ಪಾಲನೆ ಮಾಡಲು ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ, ಒಳ ಬರುವ ಮತ್ತು ಹೊರ ಹೋಗುವ ಜನರನ್ನು ತಪಾಸಣೆ ಮಾಡಲಾಗುತ್ತಿದೆ, ತುಮಕೂರು ನಗರದಲ್ಲಿ 18 ಚೆಕ್ ಪೋಸ್ಟ್ ಗಳನ್ನು ಹಾಕಲಾಗಿದೆ, ಸರ್ಕಾರದ ಮಾರ್ಗಸೂಚಿಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ, ಅನಗತ್ಯವಾಗಿ ಓಡಾಡುವವರ ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ, ದೂರ ಪ್ರಯಾಣ ಬೆಳೆಸುವವರು ಟಿಕೆಟ್ ಅಥವಾ ಅಗತ್ಯ ದಾಖಲೆಗಳನ್ನು ತೋರಿಸಬೇಕಾಗುತ್ತದೆ, ಅಗತ್ಯ ಸೇವೆಗಳ ಕೆಲಸಗಾರರು ತಮ್ಮ ಕಚೇರಿಯ ಗುರುತಿನ ಚೀಟಿ ತೋರಿಸಬೇಕು, ವಿಕೇಂಡ್ ದಿನಗಳಲ್ಲಿ ಬೆಳಗ್ಗೆ 6 ರಿಂದ 10 ರವರೆಗೆ ದಿನಸಿ, ಹಾಲು, ತರಕಾರಿ, ಸೇರಿದಂತೆ ಆಹಾರ ಉತ್ಪನ್ನಗಳ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ, ಸಾರ್ವಜನಿಕರು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪ ವಿಭಾಗಾಧಿಕಾರಿ ಅಜಯ್ ಸೇರಿದಂತೆ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!