ಕುಣಿಗಲ್ ನಲ್ಲಿ ಆಕ್ಸಿಜನ್ ಉತ್ಪಾದಕ ಘಟಕ ಸ್ಥಾಪನೆಗೆ ಕ್ರಮ

247

Get real time updates directly on you device, subscribe now.

ಕುಣಿಗಲ್: ಮೊದಲ ಬಾರಿಗೆ ತಾಲ್ಲೂಕು ಕೇಂದ್ರದಲ್ಲಿ ಆಕ್ಸಿಜನ್ ಉತ್ಪಾದಕ ಘಟಕವನ್ನು ಸಿಎಸ್ಆರ್ ಯೋಜನೆಯಡಿಯಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಡಾ.ರಂಗನಾಥ್ ತಿಳಿಸಿದರು.
ಸೋಮವಾರ ಸಂಜೆ ಕೈಗಾರಿಕಾ ನಿರೀಕ್ಷಕ ಜಗದೀಶ್, ಪುರಸಭೆ ಅಧ್ಯಕ್ಷ ನಾಗೇಂದ್ರ, ತಾಲೂಕು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಗಣೇಶ್ ಬಾಬು, ವೈದ್ಯರಾದ ಡಾ.ಮಂಜುನಾಥ್ ಇವರೊಂದಿಗೆ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಾಗ ಗುರುತಿಸಿ ಮಾತನಾಡಿ, ಆಮ್ಲಜನಕದ ಕೊರತೆ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ವೈದ್ಯಲೋಕಕ್ಕೆ ಸವಾಲಾಗಿ ಪರಿಣಮಿಸಿದೆ, ತಾಲೂಕಿನ ಜನತೆಗೆ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬಿಪಿಎಲ್ ಕಂಪನಿಯ ಸಿಎಸ್ಆರ್ ಯೋಜನೆಯಡಿಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಪ್ರಾರಂಭಿಸಲಾಗುತ್ತಿದೆ, ಇದರಿಂದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ವಿಶೇಷವಾಗಿ ಕೋವಿಡ್ ಸೋಂಕಿತ ರೋಗಿಗಳಿಗೆ ಆಮ್ಲಜನಕದ ಕೊರತೆಯಾಗದಂತೆ ಉತ್ತಮ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ, ಅಲ್ಲದೆ ಆಮ್ಲಜನಕ ಸಿಲಿಂಡರ್ ಸರಬರಾಜು ಸೇರಿದಂತೆ ಇತರೆ ಕೊರತೆಯ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಬಹುದು ಎಂದರು.
ತುಮಕೂರು ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ತಾಲೂಕು ಕೇಂದ್ರದಲ್ಲಿ ಆಮ್ಲಜನಕ ಉತ್ಪಾದನೆ ಘಟಕ ಪ್ರಾರಂಭವಾಗುತ್ತಿರುವುದು ಸಂಸದ ಡಿ.ಕೆ.ಸುರೇಶ್ ರವರ ಮಾರ್ಗದರ್ಶನದಲ್ಲಿ, ಪ್ರಸ್ತುತ ಕೊರೊನಾ ಸಮಸ್ಯೆ ತೀವ್ರ ಉಲ್ಬಣಗೊಳ್ಳುತ್ತಿದೆ, ಸಾರ್ವಜನಿಕರು ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸೋಂಕು ಹರಡುವುದನ್ನು ನಿಯಂತ್ರಿಸಬಹುದಾಗಿದೆ, ವೈದ್ಯರ ಮೇಲೂ ಹೆಚ್ಚಿನ ಒತ್ತಡ ಇದ್ದು ವೈದ್ಯರು ಸೋಂಕಿತರಾಗಿ ಅವರ ಕುಟುಂಬದವರು ಸಹ ಆತಂಕದಲ್ಲಿದ್ದಾರೆ, ಜನತೆ ಸರ್ಕಾರ ಸೂಚಿಸುವ ಕ್ರಮಗಳನ್ನು ಪಾಲಿಸಿ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿ ತಾಲೂಕಿನಲ್ಲಿ ಸೋಂಕಿತರ ಚಿಕಿತ್ಸೆಗೆ ಮಲ್ಲನಾಯಕನಹಳ್ಳಿಯಲ್ಲಿ 120 ಹಾಸಿಗೆಯ ಹಾಗೂ ಹುಲಿಯೂರುದುರ್ಗ ಸಮೀಪದ ಅಂಕಣಹಳ್ಳಿಯಲ್ಲಿ 50 ಹಾಸಿಗೆ ಸಾಮರ್ಥ್ಯದ ಚಿಕಿತ್ಸಾ ಕೇಂದ್ರ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

Get real time updates directly on you device, subscribe now.

Comments are closed.

error: Content is protected !!