ಶಿರಾ: ತುಮಕೂರು ಜಿಲ್ಲೆಯಲ್ಲಿಯೇ ಶಿರಾ ತಾಲ್ಲೂಕಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ತಾಲ್ಲೂಕು ಆಡಳಿತದಿಂದ ಕೋವಿಡ್ ಕೇರ್ ಹಾಗೂ ಡೇ ಕೇರ್ ಸೆಂಟರ್ ತೆರೆಯಲಾಗಿದೆ.
ಕೋವಿಡ್ ಪಾಸಿಟೀವ್ ಬಂದ ಕುಟುಂಬದ ಇತರ ಸದಸ್ಯರು ಮನೆಯ ಹಾಗೂ ಮನೆಯಿಂದ ಹೊರಗಡೆ ಇತರರೊಂದಿಗೆ ಬೆರೆಯುವುದನ್ನು ಕಡಿಮೆ ಮಾಡಲು ಹೋಂ ಐಸೋಲೇಷನ್‌ನಲ್ಲಿ ಇರಿಸಲು ಅವರೊಂದಿಗೆ ಸಮಾಲೋಚನೆ ನಡೆಸಿ ನಿರ್ಧರಿಸಲಾಗಿದೆ.
ಕೊರೊನಾ 2ನೇ ಅಲೆಯಿಂದ ತಾಲ್ಲೂಕಿನಲ್ಲಿ ತೀವ್ರಗತಿಯಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿವೆ, ತುಮಕೂರು ಜಿಲ್ಲಾ ಕೇಂದ್ರ ಬಿಟ್ಟರೆ ಶಿರಾ ತಾಲ್ಲೂಕಿನಲ್ಲಿಯೇ ಹೆಚ್ಚು ಪ್ರಕರಣ ಕಂಡು ಬರುತ್ತಿವೆ, ಕಳೆದ ಏಪ್ರಿಲ್ 1 ರಿಂದ ಇಲ್ಲಿವರೆಗೆ ಹೊಸದಾಗಿ 1100 ಕೋವಿಡ್- 19 ಪಾಸಿಟಿವ್ ಪ್ರಕರಣ ಕಂಡು ಬಂದಿದ್ದು, ದಿನದಿಂದ ದಿನಕ್ಕೆ ಪ್ರಕರಣ ಹೆಚ್ಚುತ್ತಲೇ ಇವೆ, ಕಳೆದ ಆರು ದಿನಗಳಲ್ಲಿ 624 ಪಾಸಿಟೀವ್ ಬಂದಿವೆ, ಶುಕ್ರವಾರ, 167 ಮತ್ತು ಶನಿವಾರ 143, ಭಾನುವಾರ 72 ಜನರಿಗೆ ಸೋಂಕು ತಗುಲಿದೆ. ಕಳೆದ ವರ್ಷ ರಾಜ್ಯದಲ್ಲಿಯೇ ಮೊದಲು ಶಿರಾ ತಾಲ್ಲೂಕಿನಲ್ಲಿ ಕೊರೊನಾದಿಂದ ವ್ಯಕ್ತಿ ಸಾವನ್ನಪ್ಪಿದ್ದು ಮರೆಯುವ ಮುನ್ನವೇ 2ನೇ ಅಲೆಯೂ ತಾಲ್ಲೂಕಿನಲ್ಲಿ ತೀವ್ರವಾಗಿದೆ.
ಕೋವಿಡ್ ಕೇರ್ ಸೆಂಟರ್
ಶಿರಾ ತಾಲ್ಲೂಕಿನಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರಕ್ಕೆ ಹೊರ ವಲಯದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 100 ಬೆಡ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ, ಹೆಚ್ಚುವರಿಯಾಗಿ 100 ಬೆಡ್‌ಗಳಿಗೆ ಕಾಯ್ದಿರಿಸಿ, ಸಾರ್ವಜನಿಕ ಆಸ್ಪತ್ರೆಯಲ್ಲಿಯೂ ಸಹ 100 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. 6 ಐಸಿಯೂ ಬೆಡ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಇದುವರೆಗೂ ಯಾವುದೇ ಆಕ್ಸಿಜನ್ ಕೊರತೆ ಕಂಡುಬಂದಿಲ್ಲ. ಇದರ ಜೊತೆಗೆ ಅಂಬೇಡ್ಕರ್ ಭವನದಲ್ಲಿ ಸುಮಾರು 20 ಬೆಡ್‌ಗಳ ಕೋವಿಡ್ ಡೇ ಕೇರ್ ಸೆಂಟರ್ ಮಾಡಿದ್ದು, ಕೊರೊನಾ ಪಾಸಿಟಿವ್ ಬಂದು ಅವರಲ್ಲಿ ಸ್ವಲ್ಪ ಮಟ್ಟಿನ ರೋಗ ಲಕ್ಷಣ ಕಂಡುಬಂದರೆ ಅಂತಹವರನ್ನು ಕೋವಿಡ್ ಡೇ ಕೇರ್ ಸೆಂಟರ್‌ನಲ್ಲಿ ಎರಡು ಮೂರು ದಿನಗಳವರೆಗೆ ಚಿಕಿತ್ಸೆ ನೀಡಿ ನಂತರ ಮನೆಯಲ್ಲಿಯೇ ಹೋಂ ಐಸೋಲೇಷನ್ ಮಾಡಲಾಗುವುದು.
ಶಾಸಕರಿಂದ 40 ಬೆಡ್ ಕೊಡುಗೆ: ಶಿರಾದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರು ತಮ್ಮ ಸ್ವಂತ ಹಣದಿಂದ ಆಸ್ಪತ್ರೆಗೆ 40 ಬೆಡ್‌ಗಳನ್ನು ಉಚಿತವಾಗಿ ಕೊಡುಗೆ ನೀಡಿದ್ದಾರೆ. ಸದ್ಯ100 ಬೆಡ್‌ಗಳನ್ನು ವ್ಯವಸ್ಥೆ ಮಾಡಲಾಗಿದ್ದು ಹೆಚ್ಚುವರಿಯಾಗಿ 50 ಬೆಡ್ ವ್ಯವಸ್ಥೆ ಮಾಡಲಾಗಿದೆ.
ಸೋಂಕಿತರನ್ನು ಸಮುದಾಯದಿಂದ ಪ್ರತ್ಯೇಕಿಸಿ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಚಿಕಿತ್ಸೆ ನೀಡಲು ತಾಲ್ಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ.
ಶಿರಾ ಸಾರ್ವಜನಿಕ ಆಸ್ಪತ್ರೆಯಲ್ಲಿ 100 ಬೆಡ್‌ಗಳನ್ನು ಕೋವಿಡ್ ಪಾಸಿಟಿವ್ ಬಂದವರಿಗೆ ಚಿಕಿತ್ಸೆ ನೀಡಲು ಕಾಯ್ದಿರಿಸಲಾಗಿದೆ. ಸದ್ಯ ಎಲ್ಲಾ ಸೋಂಕಿತರನ್ನು ಇಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ, ಇಲ್ಲಿ ಸೋಂಕಿತರು ಹೆಚ್ಚಾದರೆ ನಗರಕ್ಕೆ ಹೊರವಲಯದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿಯೂ 100 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ, ಅಲ್ಲಿಯೂ ಚಿಕಿತ್ಸೆ ನೀಡಲಾಗುವುದು.
–ಡಾ.ಶ್ರೀನಾಥ್, ಆಡಳಿತ ವೈದ್ಯಾಧಿಕಾರಿ, ಸಾರ್ವಜನಿಕ ಆಸ್ಪತ್ರೆ, ಶಿರಾ.
ಶಿರಾ ತಾಲ್ಲೂಕಿನಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡುವುದನ್ನು ತಡೆಗಟ್ಟಲು ಹಾಗೂ ಸೋಂಕಿತರಿಗೆ ಸರಿಯಾಗಿ ಚಿಕಿತ್ಸೆ ನೀಡುವ ಉದ್ದೇಶದಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ 100 ಬೆಡ್‌ಗಳು, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 100 ಬೆಡ್‌ಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚುವರಿಯಾಗಿ 100 ಬೆಡ್ ಕಾಯ್ದಿರಿಸಲಾಗಿದೆ ಹಾಗೂ ಅಂಬೇಡ್ಕರ್ ಭವನದಲ್ಲಿ ಡೇ ಕೇರ್ ಸೆಂಟರ್ ಮಾಡಿ ಕಡಿಮೆ ರೋಗಲಕ್ಷಣ ಇರುವವರಿಗೆ ಅಲ್ಲಿಯೇ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ.
-ಮಮತ.ಎಂ, ತಹಶೀಲ್ದಾರ್, ಶಿರಾ ತಾಲ್ಲೂಕು.
ಶಿರಾ ತಾಲ್ಲೂಕಿನಲ್ಲಿ ಕೋವಿಡ್ ವ್ಯಾಕ್ಸಿನ್ ಹಾಗೂ ಆಕ್ಸಿಜನ್ ಕೊರತೆ ಇಲ್ಲ, ತ್ವರಿತವಾಗಿ ಕೋವಿಡ್ ಪರೀಕ್ಷೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಸಂಪೂರ್ಣವಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರು ಹಾಗೂ ಸಾಮಾನ್ಯ ರೋಗಿಗಳಿಗೆ ಪ್ರತ್ಯೇಕ ಚಿಕಿತ್ಸೆ ಹಾಗೂ ತಪಾಸಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ, ಸಾರ್ವಜನಿಕರು ರೋಗ ಲಕ್ಷಣ ಕಂಡುಬಂದ ತಕ್ಷಣ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯಬೇಕು.
-ಡಾ.ಸಿ.ಎಂ.ರಾಜೇಶ್ ಗೌಡ, ಶಾಸಕ
ಶಿರಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋರೊನಾ ಸೋಂಕಿತರಿಗೆ ಚಿಕಿತ್ಸೆಗೆ ಮಾಡಿರುವ ವ್ಯವಸ್ಥೆಯನ್ನು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ, ತಹಶೀಲ್ದಾರ್ ಮಮತ ವೀಕ್ಷಣೆ ಮಾಡಿದರು.
ಶಿರಾ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರು ತಮ್ಮ ಸ್ವಂತ ಹಣದಿಂದ 40 ಬೆಡ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
Comments are closed.