ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಕಟ್ಟುನಿಟ್ಟಿನ ಸೂಚನೆ

ಕರ್ಫ್ಯೂ ಮಾರ್ಗಸೂಚಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿ

159

Get real time updates directly on you device, subscribe now.

ತುಮಕೂರು: ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಏಪ್ರಿಲ್‌ 27ರ ರಾತ್ರಿ 9 ಗಂಟೆಯಿಂದ ಮಾರ್ಚ್‌ 12ರ ಬೆಳಗ್ಗೆ 6 ಗಂಟೆಯವರೆಗೆ ಜಾರಿಗೊಳಿಸಿರುವ ಕರ್ಫ್ಯೂ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್‌ ಮೂಲಕ ತಹಸೀಲ್ದಾರರು ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕಿನ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿ ಸೂಚನೆ ನೀಡಿದರು.
ಕರ್ಫ್ಯೂ ಅವಧಿಯಲ್ಲಿ ಮಾರ್ಗಸೂಚಿಗಳು ಉಲ್ಲಂಘನೆಯಾಗದಂತೆ ಯಾವ್ಯಾವ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆಯೋ ಅವುಗಳಿಗೆ ಅವಕಾಶ ಮಾಡಿಕೊಡಿ, ಅನಗತ್ಯವಾಗಿ ತಿರುಗಾಡುವವರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ ಎಂದು ನಿರ್ದೇಶಿಸಿದರು.
ಯಾವುದೇ ಕಾರಣಕ್ಕೂ ಯಾವುದಕ್ಕೂ ಯಾರಿಗೂ ಪಾಸ್‌ ವಿತರಿಸುವುದಿಲ್ಲ, ಹಾಗಾಗಿ ಅನುಮತಿ ಕಲ್ಪಿಸಲಾಗಿರುವ ಚಟುವಟಿಕೆಗಳಿಗೆ ತೆರಳುವವರಿಗೆ ಅವರ ಐಡಿ ಕಾರ್ಡ್‌ ನೋಡಿ ಅವಕಾಶ ಮಾಡಿಕೊಡಬೇಕು, ಮದುವೆಗೆ ತೆರಳುವವರಿಗೂ ಆಮಂತ್ರಣ ಪತ್ರ ಆಧಾರದ ಮೇಲೆ ತೆರಳಲು ಅವಕಾಶ ಕಲ್ಪಿಸಿಕೊಡಬೇಕು ಎಂದು ತಿಳಿಸಿದರು.
ಖಾಸಗಿ ಮತ್ತು ಸರ್ಕಾರಿ ಬಸ್‌ಗಳ ಸಂಚಾರ ಸಂಪೂರ್ಣವಾಗಿ ಬಂದ್‌ ಆಗಲಿವೆ, ತುರ್ತು ಸೇವೆಗೆ ವಾಹನಗಳ ಸಂಚಾರಕ್ಕೆ ಅನುಮತಿಯಿದ್ದು, ಸೂಕ್ತವಾಗಿ ಪರಿಶೀಲಿಸಿ ಅವರಿಗೆ ಅವಕಾಶ ನೀಡಬೇಕು, ಯಾವುದೇ ಕಾರಣಕ್ಕೂ ದೂರುಗಳು ಕೇಳಿಬರದಂತೆ ಮಾರ್ಗಸೂಚನೆಗಳನ್ನು ಜಾರಿಗೊಳಿಸಬೇಕು ಎಂದು ಹೇಳಿದರು.
ಕೋವಿಡ್‌ ಹಿನ್ನೆಲೆಯಲ್ಲಿ ಎಲ್ಲಾ ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡುವಂತೆ ಆದೇಶ ನೀಡಲಾಗಿದ್ದು, ಅದರಂತೆ ಜಿಲ್ಲೆಯಲ್ಲಿ ನಡೆಯಲಿರುವ ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ರಕ್ತ ಕೊರತೆಯಾಗಬಾರದು, ಆದ್ದರಿಂದ ಮಾರ್ಗಸೂಚಿಯನ್ವಯ ರಕ್ತದಾನಿಗಳಿಗೆ ರಕ್ತದಾನ ಮಾಡಲು ಅವಕಾಶ ಮಾಡಿಕೊಡಿ, ಆದರೆ ಯಾವುದೇ ಕಾರಣಕ್ಕೂ ಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಡಬೇಡಿ, ಮದುವೆಗಳು ನಿಯಮ ಉಲ್ಲಂಘನೆಯಾಗದಂತೆ ನಿಗಾವಹಿಸಿ ಜಾತ್ರೆ, ಸಭೆ, ಸಮಾರಂಭ ಹಾಗೂ ಗುಂಪು ಸೇರುವುದಕ್ಕೆ ಅವಕಾಶ ಮಾಡಿಕೊಡಬೇಡಿ, ಈ ಬಗ್ಗೆ ಹೆಚ್ಚಿನ ಗಮನವಹಿಸಿ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಕರ್ಫ್ಯೂ ಯಶಸ್ವಿಗೊಳಿಸಿ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಹಾಸಿಗೆ ಮತ್ತು ಆಮ್ಲಜನಕ, ರೆಮ್‌ಡಿಸಿವಿಯರ್‌ ಕೊರತೆ ಉಂಟಾಗದಂತೆ ಸದಾ ಜಾಗರೂಕರಾಗಿರಬೇಕು, ಆಮ್ಲಜನಕ ಶೇ.25 ರಷ್ಟು ಖಾಲಿಯಾಯಿತು ಎನ್ನುವಷ್ಟರಲ್ಲೇ ಮತ್ತೆ ಖಾಲಿಯಾದ ಆಮ್ಲಜನಕವನ್ನು ತುಂಬಿಸಿಕೊಳ್ಳುವ ಕಾರ್ಯ ಮಾಡಬೇಕು, ಆಮ್ಲಜನಕ ಸಿಗದೆ ಸೋಂಕಿತ ಸಾವನ್ನಪ್ಪಿದ ಎಂಬ ದೂರುಗಳು ಕೇಳಿಬರಬಾರದು, ಅದರಂತೆಯೇ ಸೋಂಕಿತರ ಪತ್ತೆ ಕಾರ್ಯ ಕಡಿಮೆ ಇರುವ ತಾಲೂಕುಗಳು ಪತ್ತೆ ಕಾರ್ಯ ಹೆಚ್ಚಿಸಬೇಕು, ನಿರ್ಲಕ್ಷ್ಯ ತೋರದೆ ಕೇಂದ್ರ ಸ್ಥಳದಲ್ಲಿಯೇ ವಾಸ್ತವ್ಯವಿದ್ದು, ಕೋವಿಡ್‌ ಕೆಲಸಕ್ಕೆ ಮೊದಲಾದ್ಯತೆ ನೀಡಬೇಕು ಎಂದು ತಿಳಿಸಿದರು.
ಕರ್ಫ್ಯೂ ಇದೆ ಎಂಬ ಕಾರಣಕ್ಕೆ ಲಸಿಕೆ ಹಾಕುವ ಪ್ರಮಾಣ ಕಡಿಮೆಯಾಗಬಾರದು, ಹಾಗಾಗಿ ಗ್ರಾಮಗಳಿಗೆ ಒಂದೊಂದು ದಿನಾಂಕ ನಿಗದಿಪಡಿಸಿ ಆ ಸಮಯದಲ್ಲಿ ವೈದ್ಯರೊಂದಿಗೆ ತೆರಳಿ ಲಸಿಕೆ ಹಾಕಬೇಕು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಮಾತನಾಡಿ, ಯಾರೂ ನಿರ್ಲಕ್ಷ್ಯ ತೋರದೆ ಕೋವಿಡ್‌ ಕಾರ್ಯಕ್ಕೆ ಸಹಕರಿಸಿ, ಕರ್ಫ್ಯೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತನ್ನಿ ಎಂದು ನಿರ್ದೇಶಿಸಿದರು.
ಕರ್ಫ್ಯೂ ಸಮಯದಲ್ಲಿ ನೀಡಲಾಗಿರುವ ಅನುಮತಿಗಳಿಗೆ ಅವಕಾಶ ಮಾಡಿಕೊಟ್ಟು, ಅನಗತ್ಯವಾಗಿ ಸಂಚರಿಸುವವರಿಗೆ ಕಡಿವಾಣ ಹಾಕಬೇಕು, ಹೋಟೆಲ್‌, ರೆಸ್ಟೋರೆಂಟ್‌ನಲ್ಲಿ ಪಾರ್ಸಲ್ ಗೆ ಅನುಮತಿಯಿದ್ದು, ಅವು ಕಾರ್ಯ ನಿರ್ವಹಿಸಲಿವೆ. ಆರೋಗ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಅನುಮತಿಯಿದೆ. ಸಾಂತ್ವಾನ ಕೇಂದ್ರಗಳು ಎಂದಿನಂತೆ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಗೂಡ್ಸ್ ವಾಹನಗಳ ಸಂಚಾರಕ್ಕೆ ಅನುಮತಿಯಿದೆ ಅವುಗಳ ಸಂಚಾರಕ್ಕೆ ತಡೆ ಮಾಡಬಾರದು. ಅದರಂತೆಯೇ ಆರೋಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ತುರ್ತು ಸಂದರ್ಭದ ಹಿನ್ನೆಲೆಯಲ್ಲಿ ತೆರಳುವ ವಾಹನಗಳಿಗೆ ಅನುಮತಿಯಿದೆ ಎಂದು ತಿಳಿಸಿದರು.
ಕಟ್ಟಡ ನಿರ್ಮಾಣ ಕಾಮಗಾರಿಗೆ ತೆರಳುವವರಿಗೆ ಮತ್ತು ಕಟ್ಟಡಕ್ಕೆ ಸಂಬಂಧಿಸಿದ ಅಂಗಡಿ ತೆರೆಯುವುದಕ್ಕೂ ಅನುಮತಿಯಿದ್ದು, ಇದಕ್ಕೆ ನಿರ್ಬಂಧ ಮಾಡಬಾರದು, ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಕಾಮಗಾರಿ ತೆರಳುವವರ ಸಂಚಾರಕ್ಕೆ ಅನುಮತಿಯಿದ್ದು, ವಾರಾಂತ್ಯದ ಕರ್ಫ್ಯೂನಲ್ಲಿ ಸಂಚಾರಕ್ಕೆ ಅನುಮತಿಯಿಲ್ಲ. ಆದರೆ, ಕಾಮಗಾರಿ ನಡೆಯುವ ಸ್ಥಳದಲ್ಲೇ ಇದ್ದು, ಕೆಲಸ ಮಾಡಲು ಅನುಮತಿಯಿದೆ ಎಂದರು.
ಗಾರ್ಮೇಂಟ್ಸ್ ತೆರೆಯುವುದಕ್ಕೆ ಅನುಮತಿಯಿಲ್ಲ, ಗಾರ್ಮೆಂಟ್ಸ್ ಹೊರತುಪಡಿಸಿ ಉಳಿದೆಲ್ಲಾ ಕಾರ್ಖಾನೆಗಳು ಕಾರ್ಯನಿರ್ವಹಿಸಲು ಅನುಮತಿ ಕಲ್ಪಿಸಲಾಗಿದೆ, ಹಾಗಾಗಿ ಇವುಗಳಿಗೆ ತೆರಳುವ ಉದ್ಯೋಗಸ್ಥರು ಐಡಿ ತೋರಿಸಿ ತೆರಳಬೇಕು. ಉಳಿದಂತೆ ಅಗತ್ಯ ಸೇವೆಗೆ 6-10 ಗಂಟೆಯವರೆಗೂ ಅನುಮತಿಯಿದ್ದು, ಇದರ ಜೊತೆಗೆ ಮದ್ಯ ಮಾರಾಟಕ್ಕೂ ಅನುಮತಿ ಕಲ್ಪಿಸಲಾಗಿದೆ. ಆದರೆ, ಪಾರ್ಸೆಲ್‌ಗೆ ಮಾತ್ರ ಅನುಮತಿಯಿದೆ ಎಂದು ತಿಳಿಸಿದರು.
ಮದುವೆ ಮತ್ತು ಅಂತ್ಯಕ್ರಿಯೆಗಳ ಮೇಲೆ ಹೆಚ್ಚು ನಿಗಾವಹಿಸಬೇಕು. ಮಾರ್ಗಸೂಚಿಗಳ ಅನ್ವಯ ಕರ್ಫ್ಯೂ ಅನುಷ್ಠಾನಗೊಳಿಸಬೇಕು. ಯಾವುದಕ್ಕೆಲ್ಲಾ ಅನುಮತಿಯಿದೆಯೋ ಅದಕ್ಕೆ ಅವಕಾಶ ನೀಡಿ, ಅನುಮತಿ ಇಲ್ಲದೇ ಇರುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಿ ಎಂದು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ವಿದ್ಯಾಕುಮಾರಿ ಮಾತನಾಡಿ, ನರೇಗಾ ಕಾಮಗಾರಿಗೆ ಅನುಮತಿಯಿದ್ದು, ನರೇಗಾ ಕಾಮಗಾರಿಗೆ ಯಾವುದೇ ನಿರ್ಬಂಧವಿರುವುದಿಲ್ಲ. ಆದ್ದರಿಂದ ನರೇಗಾ ಕಾಮಗಾರಿ ಅದರಲ್ಲೂ ವೈಯಕ್ತಿಕ ಕಾಮಗಾರಿಗೆ ಹೆಚ್ಚಿನ ಒತ್ತು ಕೊಡಬೇಕು. ಕೋವಿಡ್‌ ಮಾರ್ಗಸೂಚಿಗಳ ಅನ್ವಯ ಕಾಮಗಾರಿ ನಡೆಸಬೇಕು ಎಂದು ತಿಳಿಸಿದರು.
ಕರ್ಫ್ಯೂ ಹಿನ್ನೆಲೆಯಲ್ಲಿ ಸಾಕಷ್ಟು ಜನ ಗ್ರಾಮಕ್ಕೆ ವಾಪಾಸಾಗುತ್ತಿದ್ದಾರೆ. ಹಾಗಾಗಿ ಪಿಡಿಒಗಳು ನರೇಗಾ ಕಾಮಗಾರಿಗಳ ಅನುಷ್ಟಾನಕ್ಕೆ ಹೆಚ್ಚು ಆದ್ಯತೆ ಕೊಡಬೇಕು. ಯಾರಿಂದಲೂ ಕಾಮಗಾರಿಗೆ ಅನುಮತಿ ಕೊಟ್ಟಿಲ್ಲ ಎಂಬ ದೂರು ಕೇಳಿಬರಬಾರದು. ಒಂದೇ ಕಾಮಗಾರಿಗೆ ಆದ್ಯತೆ ಕೊಟ್ಟು ಎಲ್ಲರೂ ಒಂದೆಡೆ ಕೆಲಸ ಮಾಡುವಂತೆ ಮಾಡಬಾರದು. ಜನ ಪ್ರತ್ಯೇಕವಾಗಿ ಕೆಲಸ ಮಾಡಬೇಕು. ಇದರಿಂದ ಕೋವಿಡ್‌ ಹರಡುವುದನ್ನು ತಡೆಗಟ್ಟಬಹುದು, ಹಾಗಾಗಿ ಇಂಗುಗುಂಡಿ, ಕಲ್ಯಾಣಿ ಪುನಶ್ಚೇತನ, ಕೃಷಿ, ತೋಟಗಾರಿಕೆ ಕಾಮಗಾರಿಗಳಿಗೆ ಆದ್ಯತೆ ಕೊಡಬೇಕು ಎಂದು ಸೂಚಿಸಿದರು.
ಹೋಂ ಐಸೋಲೇಷನ್‌ ಮತ್ತು ಕ್ವಾರಂಟೈನ್‌ನಲ್ಲಿರುವವರು ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿದೆ. ಆದ್ದರಿಂದ ಹೋಂ ಐಸೋಲೇಷನ್ ನಲ್ಲಿರುವವರು ಹೊರಗಡೆ ತಿರುಗಾಡದಂತೆ ಹೆಚ್ಚು ನಿಗಾವಹಿಸಬೇಕು. ನಿರ್ಲಕ್ಷ್ಯ ತೋರಿ ಓಡಾಡುವವರಿಗೆ ದಂಡ ವಿಧಿಸಿ ಕೇಸ್‌ ಬುಕ್‌ ಮಾಡುವಂತೆ ತಿಳಿಸಿದರು.
ವೀಡಿಯೋ ಕಾನ್ಪರೆನ್ಸ್ ನಲ್ಲಿ ಉಪವಿಭಾಗಾಧಿಕಾರಿ ಅಜಯ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ ಎಂ.ಬಿ. ಜಿಲ್ಲಾ ಔಷಧ ನಿಯಂತ್ರಕಿ ಮಮತಾ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!