ಕೊರೊನಾ ಲಾಕ್‌ಡೌನ್‌ ನೆಪ- ಅಗತ್ಯ ವಸ್ತುಗಳ ಬೆಲೆ ಏರಿಕೆ

ಅಂಗಡಿಗಳವರ ಹಣ ಲೂಟಿಗೆ ಕಡಿವಾಣ ಹಾಕಿ

114

Get real time updates directly on you device, subscribe now.

ತುಮಕೂರು: ಕೊರೊನಾ ಮಹಾಮಾರಿ 2ನೇ ಅಲೆ ಅಪ್ಪಳಿಸಿ ಇಡೀ ದೇಶವನ್ನೇ ತಲ್ಲಣಗೊಳಿಸಿದೆ, ಯಾವ ಆಸ್ಪತ್ರೆ ನೋಡಿದರೂ ಕೊರೊನಾ ಸೋಂಕಿತರ ದಂಡೇ ಕಾಣ ಸಿಗುತ್ತಿದೆ, ಸಾವಿರಾರು ಮಂದಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ, ಎಷ್ಟೋ ಸೋಂಕಿತರಿಗೆ ಬೆಡ್‌ಗಳು ದೊರೆಯುತ್ತಿಲ್ಲ, ಸರಿಯಾದ ಸಮಯಕ್ಕೆ ಚಿಕಿತ್ಸೆ ಎಷ್ಟೋ ಸೋಂಕಿತರು ಪ್ರಾಣ ಬಿಟ್ಟಿದ್ದಾರೆ, 2ನೇ ಅಲೆ ಶರವೇಗದಲ್ಲಿ ಜನರನ್ನು ಆವರಿಸುತ್ತಿದ್ದು, ತನ್ನ ಅಟ್ಟಹಾಸ ಮೆರೆಯುತ್ತಿದೆ.
ಇದರ ಮಧ್ಯೆ ಆಸ್ಪತ್ರೆಗಳು ಕೊರೊನಾವನ್ನೇ ನೆಪ ಮಾಡಿಕೊಂಡು ಸುಲಿಗೆಗೆ ಇಳಿದಿವೆ, ಬೆಡ್‌ ಕೊಡುವಲ್ಲಿ, ಚಿಕಿತ್ಸೆ ನೀಡುವಲ್ಲಿ ಲಾಭಿ ಮಾಡುತ್ತಾ ಸೋಂಕಿತರಿಂದ ಲಕ್ಷ ಲಕ್ಷ ಹಣ ಪೀಕುತ್ತಿವೆ, ಇತ್ತ ಸರ್ಕಾರಿ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ, ಆದರೂ ಸರ್ಕಾರ ಕೊರೊನಾ ಮಾರಿ ತಡೆಯಲು ಹರ ಸಾಹಸ ಮಾಡುತ್ತಿದೆ, ಆದರೂ ಅದು ಸಾಧ್ಯವಾಗುತ್ತಿಲ್ಲ, ಕೊರೊನಾ ತನ್ನ ರಾಕ್ಷಸ ಸ್ವರೂಪವನ್ನು ತೋರುತ್ತಲೇ ಸಾಗಿದೆ.
ಇನ್ನು ಕೊರೊನಾ ತಡೆಗೆ ಸರ್ಕಾರ 14 ದಿನ ಕೊರೊನ ಕರ್ಫ್ಯೂ ಘೋಷಿಸಿರುವುದರಿಂದ ಜನರು ತತ್ತರಿಸಿದ್ದಾರೆ, ಅಲ್ಲದೆ ನಗರ ಪ್ರದೇಶಗಳಲ್ಲಿದ್ದ ಹಲವು ಮಂದಿ ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ, 14 ದಿನಗಳ ಕಾಲ ಪ್ರತಿದಿನ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಮಾತ್ರ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಿರುವುದರಿಂದ ಜನರು ತಮಗೆ ಬೇಕಾದ ವಸ್ತು ಕೊಳ್ಳಲು ಮುಗಿ ಬಿದ್ದಿದ್ದಾರೆ, ಇರುವ ಅಲ್ಪ ಸಮಯದಲ್ಲಿ ಬೇಕಾದ ಎಲ್ಲಾ ವಸ್ತು ಕೊಳ್ಳಲು ಆಗದ ಕಾರಣ ಅಗತ್ಯ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದೆ, ಇದನ್ನೇ ಲಾಭ ಮಾಡಿಕೊಳ್ಳುವಲ್ಲಿ ಅಂಗಡಿ ಮಾಲೀಕರು ಮುಂದಾಗಿದ್ದು ದಿಢೀರ್‌ ಬೆಲೆ ಏರಿಕೆ ಮಾಡಿ ಹಣ ಲೂಟಿಗೆ ಮುಂದಾಗಿದ್ದಾರೆ.
ಪ್ರತಿನಿತ್ಯ ಬೇಕಾಗುವ ತರಕಾರಿ, ದಿನಸಿ ಬೆಲೆಯನ್ನು ಅಂಗಡಿ ಮಾಲೀಕರು ಏರಿಸಿದ್ದಾರೆ, ಹಣ್ಣುಗಳ ಬೆಲೆಯೂ ದುಬಾರಿಯಾಗಿದೆ, ಇನ್ನು ಸಿಗರೇಟ್‌, ಗುಟ್ಕಾ ಬೆಲೆಯೂ ದುಪ್ಪಟ್ಟಾಗಿದೆ, ಡೀಲರ್‌ಗಳು ದುಪ್ಪಟ್ಟು ಬೆಲೆಗೆ ಸಿಗರೇಟ್‌, ಗುಟ್ಕಾ ಮಾರಾಟಕ್ಕೆ ಮುಂದಾಗಿದ್ದಾರೆ, ಇಷ್ಟೇ ಅಲ್ಲದೆ ಮದ್ಯ ಪಾರ್ಸೆಲ್ ಗೆ ಅವಕಾಶ ನೀಡಿರುವುದರಿಂದ ಮದ್ಯಪ್ರಿಯರಿಗೆ ಬಾರ್‌, ವೈನ್‌ ಶಾಪ್ ನವರು ಎಂ ಆರ್ ಪಿ ಬೆಲೆಗಿಂತ ದುಪ್ಪಟ್ಟು ಹಣ ಪೀಕುತ್ತಿದ್ದಾರೆ, ಕೊರೊನಾ ಲಾಕ್ ಡೌನ್‌ ನೆಪ ಮಾಡಿಕೊಂಡಿರುವ ಅಂಗಡಿ ಮಾಲೀಕರು, ಬಾರ್ ನವರು ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ, ಇದಕ್ಕೆ ಕಡಿವಾಣ ಹಾಕುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ.
ಇನ್ನು ಬೆಲೆ ಏರಿಕೆ ಬಗ್ಗೆ ನಿಗಾ ವಹಿಸಬೇಕಾದ ಆಡಳಿತ ಕೊರೊನಾ ತಡೆ, ಚಿಕಿತ್ಸೆ ಬಗ್ಗೆ ತಲೆ ಕೆಡಿಸಿಕೊಂಡು ಕಾರ್ಯಪ್ರವೃತ್ತವಾಗಿದೆ, ಇದನ್ನೇ ಬಂಡವಾಳ ಮಾಡಿಕೊಂಡಿರುವ ವರ್ತಕರು, ಅಂಗಡಿಗಳವರು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಸಿಕ್ಕಷ್ಟು ಪೀಕುವ ಕೆಲಸಕ್ಕೆ ಮುಂದಾಗಿದ್ದಾರೆ, ಮೊದಲೇ ಕೊರೊನಾ ಜೀವನವನ್ನು ಹೈರಾಣು ಮಾಡಿದೆ, ಜನ ಬದುಕುವುದೇ ದುಸ್ತರವಾಗಿದೆ, ಇಂಥ ಸಂದರ್ಭದಲ್ಲಿ ಮಾನವೀಯತೆ ಮೆರೆಯಬೇಕಾದ ಅಂಗಡಿಗಳವರು ಬೆಲೆ ಏರಿಕೆ ಮಾಡಿ ಸುಲಿಗೆಗೆ ಇಳಿದಿರುವುದು ಅಕ್ಷಮ್ಯ, ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಬೆಲೆ ಏರಿಕೆ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕಾಗಿದೆ, ಇಲ್ಲವಾದರೆ ಜನರು ಮತ್ತಷ್ಟು ಸಂಕಷ್ಟ ಅನುಭವಿಸುವುದರಲ್ಲಿ ಅನುಮಾನವಿಲ್ಲ, ಜಿಲ್ಲಾಡಳಿತ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ.

Get real time updates directly on you device, subscribe now.

Comments are closed.

error: Content is protected !!