ವಾಹನಗಳ ಮೇಲೆ ಕಣ್ಣಿಡಲು ಡ್ರೋನ್‌ ಕ್ಯಾಮೆರಾ ಕಾರ್ಯಾಚರಣೆ

ಡೀಸಿ, ಎಸ್ಪಿಯಿಂದ ಕರ್ಫ್ಯೂ ಪರಿಶೀಲನೆ

97

Get real time updates directly on you device, subscribe now.

ತುಮಕೂರು: ಕೋವಿಡ್‌ ಎರಡನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿಗಳನ್ವಯ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿರುವ ಕರ್ಫ್ಯೂ ಕುರಿತು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಅವರು ತುಮಕೂರು ನಗರದಲ್ಲಿ ಪರಿಶೀಲನೆ ನಡೆಸಿದರು.
ನಗರದ ಶ್ರೀಶಿವಕುಮಾರ ಸ್ವಾಮೀಜಿ ವೃತ್ತ ಸೇರಿದಂತೆ ನಗರದ ವಿವಿಧೆಡೆ ಸಂಚರಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪರಿಶೀಲನೆ ನಡೆಸಿ, ವಾಹನಗಳ ತಪಾಸಣೆ ಮಾಡಿದರು.
ಇದಕ್ಕೂ ಮುನ್ನ ಕರ್ಫ್ಯೂ ಸಮಯದಲ್ಲಿ ಜನರು ಹಾಗೂ ವಾಹನಗಳ ಸಂಚಾರದ ಮೇಲೆ ನಿಗಾ ವಹಿಸಲು ಡ್ರೋನ್‌ ಕ್ಯಾಮೆರಾಕ್ಕೆ ಚಾಲನೆ ನೀಡಿದರು.
ಸರ್ಕಾರ ಕೊರೊನಾ ತಡೆಗೆ ಮಾರ್ಗಸೂಚಿ ನೀಡಿದ್ದು, ಜನರು ಅವುಗಳನ್ನು ಪಾಲಿಸಬೇಕು, ಯಾವುದೇ ಕಾರಣಕ್ಕೂ ಅನಗತ್ಯವಾಗಿ ಮನೆಯಿಂದ ಹೊರಬರಬಾರದು, ಸುಮ್ಮನೆ ಸುತ್ತಾಡಲು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಮತ್ತು ಡೀಸಿ ಜನರಲ್ಲಿ ಮನವಿ ಮಾಡಿದರು.
ಇನ್ನು ಬೆಳಗ್ಗೆ 6 ರಿಂದ 10 ಗಂಟೆ ವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು, ಅದರಂತೆ ಜನರು 10 ಗಂಟೆಯೊಳಗೆ ಅಂಗಡಿಗಳಿಗೆ ತೆರಳಿ ತಮಗೆ ಬೇಕಾದ ವಸ್ತುಗಳನ್ನು ಕೊಂಡು ಮನೆ ಸೇರಿದರು. ನಗರದ ಪ್ರಮುಖ ರಸ್ತೆಗಳು ಖಾಲಿ ಹೊಡೆಯುತ್ತಿದ್ದವು, ಪ್ರಮುಖ ವೃತ್ತಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಅನಗತ್ಯವಾಗಿ ಓಡಾಟ ಮಾಡುವವರನ್ನು ತಡೆದು ಪರೀಶಿಲಿಸುವ ಕಾರ್ಯವು ನಡೆಯಿತು. ಪೊಲೀಸರ ಕಟ್ಟೆಚ್ಚರವನ್ನು ಲೆಕ್ಕಿಸದ ಒಂದಷ್ಟು ಜನ ಇಲ್ಲಸಲ್ಲದ ನೆಪ ಹೇಳಿ ಓಡಾಡುತ್ತಿದ್ದ ದೃಶ್ಯ ಕಂಡು ಬಂತು, ಆಸ್ಪತ್ರೆಗೆ ಹೋಗಬೇಕು, ರೋಗಿಗಳಿಗೆ ಊಟ ಕೊಡಬೇಕು ಹೀಗೆ ತರಹೇವಾರಿ ನೆಪ ಹೇಳಿಕೊಂಡು ಜನರು ಓಡಾಟ ನಡೆಸಿದರು. ಇದೆಲ್ಲಕ್ಕೂ ಪೊಲೀಸರು ಕಡಿವಾಣ ಹಾಕಬೇಕು, ಇಲ್ಲವಾದಲ್ಲಿ ಕೊರೊನಾ ತನ್ನ ಅಟ್ಟಹಾಸ ಮುಂದುವರೆಸುತ್ತೆ ಎಂಬ ಮಾತುಗಳು ಕೇಳಿ ಬಂದವು.

Get real time updates directly on you device, subscribe now.

Comments are closed.

error: Content is protected !!