ಕುಣಿಗಲ್‌ನಲ್ಲಿ ಮೊದಲ ದಿನದ ಲಾಕ್‌ಡೌನ್‌ ಯಶಸ್ವಿ

141

Get real time updates directly on you device, subscribe now.

ಕುಣಿಗಲ್‌: ಕೊವಿಡ್‌ ಎರಡನೆ ಅಲೆ ನಿಯಂತ್ರಣಕ್ಕೆ ರಾಜ್ಯಸರ್ಕಾರ ಜಾರಿಗೊಳಿಸಿದ ಲಾಕ್‌ ಡೌನ್‌ ಮೊದಲ ದಿನ ಸಾರ್ವಜನಿಕರೆ ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡು ನಿಯಮಾವಳಿ ಪಾಲಿಸುವ ಮೂಲಕ ಲಾಕ್‌ ಡೌನ್‌ ಯಶಸ್ವಿಗೊಳಿಸಿದರು.
ಮಾವಿನಕಾಯಿ ಸೀಸನ್‌ ಪ್ರಾರಂಭವಾಗಿರುವ ಕಾರಣ ಮಂಡಿ ಮಾಡಿಕೊಂಡಿರುವವರು ಸಮರ್ಪಕ ಆದೇಶ ಇಲ್ಲದೆ ಏನು ಮಾಡಲು ತೋಚದೆ ಪರದಾಡಿದರು. ಬ್ಯಾಂಕುಗಳು ಕಾರ್ಯ ನಿರ್ವಹಿಸಿದರೂ ಜನರು ಬಾರದ ಕಾರಣ ಕೆಲಸ ಕಡಿಮೆ ಇತ್ತು. ಬಟ್ಟೆ ಅಂಗಡಿ, ಸ್ಟೇಷನರಿ ಅಂಗಡಿಯನ್ನು ಬೆಳಗ್ಗೆ ನಿಗದಿತ ಅವಧಿಗೆ ತೆಗೆಯಲು ಅನುಕೂಲ ಮಾಡಿಕೊಡದ ಸರ್ಕಾರ ನಿರ್ಧಾರದ ವಿರುದ್ಧ ಮಳಿಗೆ ಮಾಲೀಕರು ಆಕ್ರೋಶ ಹೊರ ಹಾಕಿದರೆ, ಜುವೆಲರಿ ಮಳಿಗೆಯವರು ಕೆಲ ಮದುವೆಗೆ ಆರ್ಡರ್‌ ಒಪ್ಪಿಕೊಂಡ ಕಾರಣ ತಮ್ಮ ವಹಿವಾಟುಗಳನ್ನು ಬೀದಿ, ಮನೆಯ ಮುಂಭಾಗದಲ್ಲಿ ನಡೆಸುವಂತಾಯಿತು.
ಮದ್ಯದಂಗಡಿಗಳನ್ನೂ ಬೆಳಗ್ಗೆ ಆರು ಗಂಟೆಗೆ ತೆಗೆಯಲು ಅನುಮತಿ ನೀಡಿದ ಕಾರಣ ಮದ್ಯ ಪ್ರಿಯರು ಬೆಳ್ಳಂಬೆಳಗ್ಗೆ ಖರೀದಿಗೆ ಮುಗಿಬಿದ್ದರು, ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿನ ಅನಾರೋಗ್ಯ ಪಿಡೀತರು ಚಿಕಿತ್ಸೆಗೆ ಪಟ್ಟಣದ ಆಸ್ಪತ್ರೆಗಳ ಕಡೆ ಮುಖ ಮಾಡಿದ ಪರಿಣಾಮ ಖಾಸಗಿ ಸೇರಿದಂತೆ ಸಾರ್ವಜನಿಕ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿತ್ತು, ಲಾಕ್‌ಡೌನ್‌ ನಡುವೆ ಅನಗತ್ಯ ಓಡಾಟ ಮಾಡುತ್ತಿದ್ದವರಿಗೆ ಗಸ್ತು ತಿರುಗುತ್ತಿದ್ದ ಪೊಲೀಸರು ಕೆಲವರಿಗೆ ಬುದ್ಧಿವಾದ ಹೇಳಿದರೆ ಮತ್ತೆ ಕೆಲವರಿಗೆ ಕಾನೂನು ಜಾರಿ ಮಾಡುವ ಎಚ್ಚರಿಕೆ ನೀಡಿದರು.
ಲಾಕ್‌ಡೌನ್‌ ಜಾರಿ ಮುನ್ನ ದಿನ ಮಂಗಳವಾರ ರಾತ್ರಿ ಶಾಸಕ ಡಾ.ರಂಗನಾಥ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿ ಸೋಂಕಿತರ ಸಂಖ್ಯೆ ಸ್ಥಿತಿಗತಿಗಳ ಮಾಹಿತಿ ಪಡೆದರು. ಡಿವೈಎಸ್ಪಿ ರಮೇಶ್‌, ಸಿಪಿಐ ರಾಜು, ಪುರಸಭೆ ಅಧ್ಯಕ್ಷ ನಾಗೇಂದ್ರ, ಮುಖ್ಯಾಧಿಕಾರಿ ರವಿಕುಮಾರ್‌ ಅವರೊಂದಿಗೆ ಚರ್ಚೆ ನಡೆಸಿದರು. ಬುಧವಾರ ಪುರಸಭೆ ಅಧ್ಯಕ್ಷ ನಾಗೇಂದ್ರ, ಮುಖ್ಯಾಧಿಕಾರಿ ರವಿಕುಮಾರ್‌ ಪೌರ ಕಾರ್ಮಿಕರಿಗೆ ಸ್ಯಾನಿಟೈಸರ್‌, ಮಾಸ್ಕ್ ವಿತರಣೆ ಮಾಡಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಕಿವಿಮಾತು ಹೇಳಿದರು. ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಂಕಿತರ ವಾರ್ಡ್‌ಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಹಣ್ಣು ವಿತರಿಸಿದರು.

Get real time updates directly on you device, subscribe now.

Comments are closed.

error: Content is protected !!