ರಕ್ತದಾನ ಮಾಡಿ ಲಸಿಕೆ ಪಡೆದರೆ ಒಳಿತು

112

Get real time updates directly on you device, subscribe now.

ಗುಬ್ಬಿ: ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮೇ 1 ರಿಂದ 18 ವರ್ಷದಿಂದ 45 ವರ್ಷದ ಒಳಗಿರುವ ಯುವ ಜನರಿಗೆ ಕೊರೊನಾ ಲಸಿಕೆ ಹಾಕಿಸುವ ಕಾರ್ಯಕ್ರಮವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಯೋಜನೆ ಮಾಡಿದೆ, ಲಸಿಕೆ ಹಾಕಿಸಿಕೊಂಡ ಯುವಕರು ಕನಿಷ್ಟ 60 ದಿನಗಳ ಕಾಲ ರಕ್ತದಾನ ಮಾಡಲು ಸಾಧ್ಯವಾಗುವುದಿಲ್ಲ ಹಾಗಾಗಿ ರಕ್ತದಾನ ಮಾಡಿ ಲಸಿಕೆ ಪಡೆದರೆ ಸಾವಿರಾರು ಜನರು ಜೀವ ಉಳಿಸಬಹುದಾಗಿದೆ.
ತುಮಕೂರು ಜಿಲ್ಲೆಯಲ್ಲಿ ದಿನ ಒಂದಕ್ಕೆ 90 ರಿಂದ 100 ಯುನಿಟ್ಸ್ ರಕ್ತದ ಅವಶ್ಯಕತೆ ಹಿಂದೆ ಇತ್ತು, ಈಗ ಕೊರೊನಾ ಹಿನ್ನಲೆಯಲ್ಲಿ ಅದರ ಪ್ರಮಾಣ ತುಸು ಕಡಿಮೆ ಇದ್ದರು ಸಹ ಅವಶ್ಯಕತೆಯಂತು ಇದ್ದೆ ಇದೆ, ಜಿಲ್ಲಾ ಆಸ್ಪತ್ರೆಯೊಂದರಲ್ಲೆ ದಿನಕ್ಕೆ ಸದ್ಯದ ಮಟ್ಟಿಗೆ ಕನಿಷ್ಠ 20 ರಿಂದ 25 ಯುನಿಟ್ಸ್ ಬೇಕಾಗಿದ್ದು ಹಲವು ಸಮಸ್ಯೆಗಳಿಂದ ಬರುವಂತ ರೋಗಿಗಳಿಗೆ ನೀಡಲಾಗುತ್ತಿದೆ, ಇನ್ನೂ 10 ತಾಲೂಕಿನ ಆಸ್ಪತ್ರೆಗಳಲ್ಲಿ ಕನಿಷ್ಠ 30 ರಿಂದ 40 ಯುನಿಟ್ಸ್ ರಕ್ತದ ಅವಶ್ಯಕತೆ ಇದ್ದು ಮೇ ತಿಂಗಳ ನಂತರದಲ್ಲಿ ರಕ್ತದ ಕೊರತೆ ಸೃಷ್ಟಿಯಾಗುವ ಆತಂಕ ಎದುರಾಗುತ್ತಿದೆ, ಈಗಾಗಲೆ ಕೊರೊನಾ ಬಂದ ನಂತರದ ದಿನದಿಂದ ಎಲ್ಲಿಯು ರಕ್ತದಾನ ಶಿಬಿರ ಹೆಚ್ಚು ನಡೆಯುತ್ತಿಲ್ಲ, ಕಡಿಮೆ ಪ್ರಮಾಣದಲ್ಲಿ ಅಲ್ಲೊಂದು ಇಲ್ಲೊಂದು ನಡೆಯುತ್ತಿದ್ದು ರಕ್ತ ಕೊಡಲು ಯುವಕರು ಸಹ ಕೊರೊನಾ ಭಯದಿಂದ ಮುಂದೆ ಬರುತ್ತಿಲ್ಲ, ಇನ್ನೂ ಕೊವಿಡ್ ಲಸಿಕೆ ಪಡೆಯಲು ಏಕಾಕಾಲದಲ್ಲಿ ಯುವಶಕ್ತಿ ಮುಂದಾದರೆ ಇನ್ನೂ ರಕ್ತದ ಸಮಸ್ಯೆ ಉಲ್ಬಣವಾಗುತ್ತ ಸಾಗುತ್ತದೆ ಎಂದು ವೈದ್ಯಾಧಿಕಾರಿಗಳು ಆತಂಕ ವ್ಯಕ್ತ ಪಡಿಸುತ್ತಿದ್ದಾರೆ.
ಬಹುತೇಕ ರಕ್ತದಾನ ಮಾಡುವವರೇ ಯುವಕರು, ಅದರಲ್ಲೂ 18 ರಿಂದ 40 ವರ್ಷದವರೇ ಆಗಿರುತ್ತಾರೆ, ಅವರೆ ಕೊರೊನಾ ಲಸಿಕೆ ಹಾಕಿಸಿಕೊಳ್ಳುವುದರಿಂದ ಸುಮಾರು 2 ಡೋಸ್ಗಳಿಂದ 60 ದಿನಗಳ ಕಾಲ ಅವರು ರಕ್ತದಾನ ಮಾಡಲು ಸಾಧ್ಯವಾಗುವುದಿಲ್ಲ, ಹಾಗಾಗಿ ಮುಂದಿನ ದಿನಗಳಲ್ಲಿ ರಕ್ತದ ಸಮಸ್ಯೆ ಎದುರಾಗುವ ಸಾದ್ಯತೆ ಇದೆ, ಹಾಗಾಗಿ ಹಲವು ಡಾಕ್ಟರ್ ಗಳು ಸಾಮಾಜಿಕ ಜಾಲತಾಣದಲ್ಲಿ ಇನ್ನಿತರೆ ಭಾಗಗಳಿಂದ ಲಸಿಕೆಗೂ ಮುನ್ನ ರಕ್ತದಾನ ಮಾಡಿ ಎಂದು ಜಾಗೃತಿ ಮೂಡಿಸುವ ಕೆಲಸವನ್ನು ಸಹ ಮಾಡುತ್ತಿರುವುದು ಕಂಡು ಬರುತ್ತಿದೆ.
ಹಾಗಂತ ಎಲ್ಲರೂ ಒಟ್ಟಿಗೆ ರಕ್ತದಾನಕ್ಕೆ ಮುಂದಾದರೆ ಅದನ್ನು ಸಂಗ್ರಹಣೆ ಮಾಡುವುದು ಸಹ ಕಷ್ಟವೇ, ಸಂಗ್ರಹದ 35 ದಿನದಲ್ಲಿ ಅದು ಬಳಕೆಯಾಗಬೇಕು, ಇಲ್ಲದೆ ಹೋದರೆ ವ್ಯರ್ಥವಾಗುತ್ತದೆ, ಹಾಗಾಗಿ ಸದ್ಯದ ಪರಿಸ್ಥಿತಿಯಲ್ಲಿ ರಕ್ತದ ಸಮಸ್ಯೆ ಉಂಟಾಗುವ ಲಕ್ಷಣವಿದೆ, ಕೊರೊನಾ ಸಮಸ್ಯೆ ಇಲ್ಲದೆ ಹೋಗಿದ್ದರೆ ಸಾಕಷ್ಟು ಸಂಘ ಸಂಸ್ಥೆಗಳು ಕಾಲೇಜುಗಳಲ್ಲಿ ರಕ್ತದಾನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿತ್ತು, ಇದರಿಂದ ಸಾಕಷ್ಟು ರಕ್ತ ಸಂಗ್ರಹವಾಗುತ್ತಿತ್ತು, ಆದರೆ ಕೊರೊನಾ ಹಿನ್ನಲೆಯಲ್ಲಿ ಇಂತಹ ಯಾವುದೇ ರಕ್ತದಾನ ಶಿಬಿರ ನಡೆಯದೆ ಇರುವುದರಿಂದ ಸಾಕಷ್ಟು ರಕ್ತದ ಸಮಸ್ಯೆ ಮುಂದಿನ ದಿನಗಳಲ್ಲಿ ಎದುರಾಗುವ ಆತಂಕವಿದೆ.
ಯಾರಿಗೆಲ್ಲ ಬೇಕು ರಕ್ತ
ಬಹಳ ಮುಕ್ಯವಾಗಿ ಅಪಘಾತ ಸಂಭವಿಸಿದಾಗ ತುರ್ತು ಅವಶ್ಯಕತೆ ಬೀಳುತ್ತದೆ, ಹೆರಿಗೆ ಸಮಯದಲ್ಲಿ, ರಕ್ತಹೀನತೆಯಿಂದ ಬಳಲುತ್ತಿರುವವರಿಗೆ, ಎಚ್ ಐ ವಿ ಚಿಕಿತ್ಸೆಯಲ್ಲಿರುವವರಿಗೆ ತಲೆಸೀನಿಯಾ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ, ಅನಿಮಿಯಾ ರೋಗಿಗಳಿಗೆ, ಕ್ಯಾನ್ಸರ್ ರೋಗಿಗಳಿಗೆ ಅವಶ್ಯಕತೆಯಾಗಿ ರಕ್ತದ ಅವಶ್ಯಕತೆ ಇದೆ.

ಇದುವರೆಗೂ ಸಮಸ್ಯೆಕಂಡು ಬಂದಿಲ್ಲ, ಕೋವಿಡ್ ಹಿನ್ನಲೆಯಲ್ಲಿ ಸರ್ಜರಿಗಳು ಸಾಕಷ್ಟು ಕಡಿಮೆ ಇರುವುದರಿಂದ ಮುಂದೆ ಮೇ ತಿಂಗಳ ನಂತರ ಯುವಕರು ರಕ್ತ ನೀಡಲು ಬರದೆ ಇದ್ದಲ್ಲಿ ಸಮಸ್ಯೆ ಎದುರಾಗುವುದು ಖಂಡಿತ, ಹಾಗಾಗಿ ಆದಷ್ಟು ಲಸಿಕೆ ಪಡೆಯುವ ಮೊದಲೇ ರಕ್ತದಾನ ಮಾಡಿ ಇನ್ನೊಂದು ಬದುಕಿಗೆ ಜೀವ ತುಂಬುವ ಕೆಲಸ ಮಾಡಬೇಕಾಗಿದೆ.
ಡಾ.ವೀಣಾ.ಎ.ಎಸ್., ಬ್ಲಡ್ ಬ್ಯಾಂಕ್ ಮೆಡಿಕಲ್ ಅಧಿಕಾರಿ, ಜಿಲ್ಲಾಸ್ಪತ್ರೆ, ತುಮಕೂರು.

Get real time updates directly on you device, subscribe now.

Comments are closed.

error: Content is protected !!