ಗುಬ್ಬಿ: ಕೊರೊನಾದ ಎರಡನೇ ಅಲೆ ಮತ್ತೊಮ್ಮೆ ರೈತರ ಬದುಕನ್ನು ಮಕಾಡೆ ಮಲಗಿಸಲು ಮುಂದಾಗಿದೆ, ಸರಕಾರದ ಕರ್ಪ್ಯೂ, ನೀತಿ, ನಿಯಮಗಳು ಹತ್ತಾರು ಸಮಸ್ಯೆ ತಂದೊಡ್ಡಿದ್ದು ಬೆಳಗ್ಗೆ 6 ರಿಂದ ಹತ್ತು 10 ಗಂಟೆಯ ವರೆಗೆ ಮಾತ್ರ ಮಾರುಕಟ್ಟೆ ಮತ್ತು ಇನ್ನಿತರೆ ಭಾಗಗಳಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ರೈತರು ವರ್ಷ ಪೂರ್ತಿ ಕಷ್ಟಪಟ್ಟು ಬೆಳೆದಿರುವ ಯಾವುದೇ ಬೆಳೆ ಮಾರಾಟವಾಗದೆ ಇತ್ತ ಲಾಭ ಗಳಿಸಲು ಸಾಧ್ಯವಾಗದೆ ನಷ್ಟದ ಹಾದಿ ತುಳಿಯುವಂತಾಗಿದೆ.
ಗುಬ್ಬಿ ತಾಲ್ಲೂಕಿನ ಕಡಬಾ ಹೋಬಳಿಯ ಬಿ.ಕೋಡಿಹಳ್ಳಿ ಗ್ರಾಮದ ತಾತಯ್ಯ ಎಂಬ ರೈತ ಸುಮಾರು ಹತ್ತು ಎಕರೆ ಜಾಗದಲ್ಲಿ 13 ಲಕ್ಷ ಹಣ ಖರ್ಚು ಮಾಡಿ ರಂಜಾನ್ ಹಬ್ಬಕ್ಕೆ ಒಳ್ಳೆಯ ದರ ಬರುತ್ತದೆ ಎಂದು ಅಂದಾಜಿಸಿ ತೈವಾನ್ ತಳಿಯ ರೆಡ್ ಲೇಡಿ ಎಂಬ ಪಪ್ಪಾಯಿ ಬೆಳೆ ಬೆಳೆದಿದ್ದಾರೆ, ಹತ್ತು ತಿಂಗಳ ಹಿಂದೆ ಹಾಕಿರುವ ಗಿಡಗಳು ಸೊಗಸಾಗಿ ಬಂದಿದ್ದು ಪ್ರತಿ ಗಿಡದಲ್ಲಿ 80 ರಿಂದ 100 ಕೆಜಿ ಯಷ್ಟು ಪಪ್ಪಾಯಿ ಹಣ್ಣು ಗಿಡದಲ್ಲಿ ಬಂದು ನಿಂತಿದೆ, ಪ್ರತಿನಿತ್ಯ 2 ಟನ್ ಹಣ್ಣನ್ನು ಸದ್ಯಕ್ಕೆ ಕೀಳುತ್ತಿದ್ದಾರೆ, ಆದರೆ ಮಾರುಕಟ್ಟೆ ಇಲ್ಲದೆ ಎಲ್ಲಿ ಮಾರಾಟ ಮಾಡಬೇಕು ಎಂಬುದು ಗೊತ್ತಿಲ್ಲದೆ ಕಂಗಾಲಾಗಿದ್ದಾರೆ.
ಹಿಂದೆ ಬೆಂಗಳೂರು, ತುಮಕೂರು, ಬಾಂಬೆ ಭಾಗಗಳಿಂದ ಹೆಚ್ಚಿನ ಬೇಡಿಕೆ ಇದ್ದ ಕಾರಣ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಪಪ್ಪಾಯಿ ಹಣ್ಣು ಬೆಳೆಯಲಾಗಿದೆ. ಕೊರೊನಾ ಹಿನ್ನಲೆಯಲ್ಲಿ ಮಾರುಕಟ್ಟೆಗಳು ಬಂದ್ ಆಗಿರುವ ಕಾರಣ ಮಹಾರಾಷ್ಟ್ರ ಭಾಗದಿಂದ ಬೇಡಿಕೆ ಸಂಪೂರ್ಣ ಕುಸಿತವಾಗಿದೆ.
ಇನ್ನೂ ಕರ್ನಾಟಕದಲ್ಲಿಯೂ ಕರ್ಪ್ಯೂ ಜಾರಿಯಲ್ಲಿರುವುದರಿಂದ ಮಾರುಕಟ್ಟೆಗಳು ಸರಿಯಾಗಿ ಕೆಲಸ ನಿರ್ವಹಣೆ ಮಾಡುತ್ತಿಲ್ಲ, ಬೆಂಗಳೂರು ತುಮಕೂರು ಮಾರುಕಟ್ಟೆಗಳಲ್ಲಿ ಬೇಡಿಕೆ ಇದ್ದರೂ ಸಹ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ಈ ಸಮಯದಲ್ಲಿ ಮಾರುಕಟ್ಟೆಗಳಲ್ಲಿ ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ, ಜನ ಬರುವುದು ಸಹ ಕಡಿಮೆಯಾಗಿದೆ, ಮಧ್ಯವರ್ತಿಗಳು ಸಹ ತೆಗೆದುಕೊಂಡು ಹೋಗಲು ಮನಸ್ಸು ಮಾಡುತ್ತಿಲ್ಲ, ಹಾಗಾಗಿ ಮರಗಳಲ್ಲೇ ಹಣ್ಣು ಕೊಳೆಯುತ್ತಿವೆ.
ರೈತರೆ ನೇರವಾಗಿ ಖುದ್ದು ತುಮಕೂರು ಮಾರುಕಟ್ಟೆಗೆ ಬೆಳಗ್ಗೆ ವ್ಯಾಪಾರಕ್ಕೆ ಹೋದರು 10 ಗಂಟೆಯ ವೇಳೆಗೆ 2 ಟನ್ ಹಣ್ಣು ಖಾಲಿಯಾಗದೆ ಮಾರುಕಟ್ಟೆಯಿಂದ ಪಪ್ಪಾಯ ಮತ್ತೆ ಮನೆಯ ಪಡಸಾಲೆಗೆ ಬಂದು ಸೇರಿದೆ, ಸರಕಾರ ತೋಟಗಾರಿಕೆ ಇಲಾಖೆ ಮೂಲಕ ರೈತರು ಬೆಳೆದಿರುವ ಬೆಳೆಗಳಿಗೆ ಮಾರುಕಟ್ಟೆ ಒದಗಿಸಿ ನಷ್ಟದಿಂದ ಪಾರು ಮಾಡಬೇಕು ಎಂದು ಯುವ ರೈತ ಸ್ವಾಮಿ ಮನವಿ ಮಾಡಿದ್ದಾರೆ.
13 ಲಕ್ಷ ಬಂಡವಾಳ ಹಾಕಿದ್ದು ಕನಿಷ್ಟ 5 ಲಕ್ಷವು ಸಹ ಇದರಿಂದ ಬರುತ್ತಿಲ್ಲ, 6 ತಿಂಗಳಿನಿಂದ ಹತ್ತಕ್ಕೂ ಹೆಚ್ಚು ಕೂಲಿ ಕಾರ್ಮಿಕರನ್ನು ಬಳಸಿಕೊಂಡು ಹೆಚ್ಚಿನ ಲಾಭ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ನಮಗೆ ಕೊರೊನಾ ಮಹಾಮಾರಿ ದೊಡ್ಡ ಮಟ್ಟದ ಆಘಾತವನ್ನೇ ನೀಡಿದೆ, ರಂಜಾನ್ ಸಂದರ್ಭದಲ್ಲಿ ಹೆಚ್ಚು ಪಪ್ಪಾಯ ಮಾರಾಟವಾಗಬೇಕಿತ್ತು, ಇದರ ಬಗ್ಗೆ ತೋಟಗಾರಿಕೆ ಇಲಾಖೆಯವರು ಸಹ ಮಾಹಿತಿ ನೀಡಿದ್ದರು, ಆದರೆ ಇದೇ ಸಂದಭರ್ದಲ್ಲೆ ಕೊರೊನ ಎರಡನೆಯ ಅಲೆ ಅಧಿಕವಾಗಿರುವುದು ರೈತರ ಪಾಲಿಗೆ ದುಸ್ವಪ್ನವಾಗಿ ಕಾಡುತ್ತಿದೆ, ಬೆಳೆದ ಪಪ್ಪಾಯ ಲಾಭ ತಂದುಕೊಡುತ್ತಿಲ್ಲ, ಒಟ್ಟಾರೆ ಕೊರೊನಾ ಅನ್ನೋ ಮಾರಿ ರೈತರ ಬದುಕಿಗೂ ಕೊಳ್ಳಿ ಇಟ್ಟಿದೆ.
ಕೊರೊನಾ ಮಹಾಮಾರಿ ಬಹುತೇಕರ ಜೀವನವನ್ನೇ ಹಾಳು ಮಾಡಿದೆ, ರೈತರು ಬೆಳೆದ ಯಾವುದೇ ಬೆಳೆಗಳಿಗೂ ಕೂಡ ಮಾರುಕಟ್ಟೆಗಳು ಸಿಗದೆ ಹೈರಾಣಾಗಿದ್ದೇವೆ, ವರ್ಷ ಪೂರ್ತಿ ನೀರಾವರಿ, ಗೊಬ್ಬರ, ಕೂಲಿ ಆಳುಗಳನ್ನು ಬಳಸಿಕೊಂಡು ಬೆಳೆದ ಪಪ್ಪಾಯ ಬೆಳೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಸೀಗದೆ ಹೋಗಿರುವುದು ಬೇಸರ ತರಿಸಿದೆ, ಸರಕಾರ, ತೋಟಗಾರಿಕಾ ಇಲಾಖೆಯವರು ರೈತರು ಬೆಳೆದಿರುವ ಬೆಳೆಗಳಿಗೆ ಮಾರುಕಟ್ಟೆಯ ದಾರಿ ಮಾಡಬೇಕು.
ಕೆ.ಆರ್.ತಾತಯ್ಯ, ಪಪ್ಪಾಯ ಬೆಳೆಗಾರ.
ಕೊರೊನಾ ಎರಡನೇ ಅಲೆ ಹೆಚ್ಚಿದ್ದು ಕಳೆದ ವರ್ಷದಂತೆ ಈ ಬಾರಿಯು ರೈತರಿಗೆ ನೆರವು ನೀಡಲು ತೋಟಗಾರಿಕಾ ರೈತ ಸಹಾಯವಾಣಿಯನ್ನು ಏಪ್ರಿಲ್ 30 ರಿಂದ ಆರಂಭ ಮಾಡುತ್ತಿದ್ದು ರೈತರು ಬೆಳೆದ ತರಕಾರಿ, ಹಣ್ಣು, ಹೂವು, ಮಾರುಕಟ್ಟೆ ಸಾಗಾಣೆ ಇನ್ನಿತರೆ ಸಮಸ್ಯೆಗಳಿಗೆ ತೋಟಗಾರಿಕಾ ಇಲಾಖೆಯನ್ನು ಸಂಪರ್ಕ ಮಾಡುವಂತೆ ಮನವಿ ಮಾಡಿದ್ದಾರೆ ಹಾಗೂ ದೂರವಾಣಿ ಸಂಖ್ಯೆಗಳನ್ನು ಒದಗಿಸಲಾಗಿದೆ.
ರಘು, ಉಪ ನಿರ್ದೇಶಕರು, ತೋಟಗಾರಿಕಾ ಇಲಾಖೆ, ತುಮಕೂರು.
Comments are closed.