ಸಿದ್ದರಬೆಟ್ಟದ ಶ್ರೀಗಳ ಕಾರ್ಯಕ್ಕೆ ಭಕ್ತರ ಜೈಕಾರ

ಪ್ರಾಣಿ, ಪಕ್ಷಿಗಳಿಗೆ ನೀರುಣಿಸುವ ಸ್ವಾಮೀಜಿ

281

Get real time updates directly on you device, subscribe now.

ಮಧುಗಿರಿ: ಪ್ರಾಣಿ, ಪಕ್ಷಿಗಳಿಗೆ ಸಿದ್ದರಬೆಟ್ಟದ ವೀರಭದ್ರಶಿವಚಾರ್ಯ ಸ್ವಾಮಿಗಳಿಂದ ನೀರುಣಿಸುವ ಕಾರ್ಯ ನಡೆಯುತ್ತಿದೆ.
ವಸುಂಧರೆ ಈ ಹೊತ್ತಿನ ಬೇಸಿಗೆಗೆ ಕಾದು ಕೆಂಡವಾಗಿದ್ದಾಳೆ, ನಾಡಿನಲ್ಲಿ ಕೊರೊನಾ ಮಾರಕ ರೋಗದಿಂದ ಜನ ತತ್ತರಿಸುತ್ತಿದ್ದಾರೆ, ಕಾಡಿನಲ್ಲಿ ಗಿಡ ಮರಗಳ ವರ್ಣಗಳೆಲ್ಲ ಖಡಕ್‌ ರೊಟ್ಟಿಯಂತಾಗಿದೆ, ಬಯಲು ಸೀಮೆಯ ಓಯಸಿಸ್‌ನಂತಿರುವ ತುಮಕೂರು ಜಿಲ್ಲೆಯ ಸಿದ್ದರಬೆಟ್ಟದ ಕುರುಚಲು ಕಾಡು ಅಸ್ತಿ ಪಂಜರದಂತೆ ಮೈಚೆಲ್ಲಿ ಆಕಾಶದತ್ತ ಬಾಯ್ದೆರೆದು ವರುಣನ ಕೃಪೆಗೆ ಹಾತೊರೆಯುತ್ತಿದೆ.
ಈ ಕುರುಚಲು ಕಾಡನ್ನೇ ನಂಬಿಕೊಂಡು ಬದುಕುತ್ತಿರುವ ಚಿರತೆ, ಕರಡಿ, ಜಿಂಕೆ, ನವಿಲು ಸೇರಿದಂತೆ ಬಾನಾಡಿಗಳು, ವನ್ಯಜೀವಿಗಳು ಬಾಯಾರಿಕೆ ಇಂಗಿಸಿಕೊಳ್ಳಲು ಪರಿತಪಿಸುತ್ತಿರುವ ಈ ಹೊತ್ತಿನಲ್ಲಿ ಸಿದ್ದರಬೆಟ್ಟದ ಸ್ವಾಮಿಗಳು ಆ ಪ್ರಾಣಿಗಳಿಗೆ ನೀರುಣಿಸುವ ಸುದ್ದಿ ಅಂತರ್ಜಾಲದಲ್ಲಿ ಹರಿದಾಡುತ್ತಿದೆ, ಅಲ್ಲದೆ ಮೆಚ್ಚುಗೆಗೂ ಪಾತ್ರವಾಗಿದೆ.
14-15 ವರ್ಷಗಳ ಹಿಂದೆ ಸಿದ್ದರಬೆಟ್ಟದಲ್ಲಿ ಮಠವೇ ಇಲ್ಲದ ನೆಲದಲ್ಲಿ ಆಸ್ತಿ, ಅಂತಸ್ತು ಇಲ್ಲದ ಮಠವೊಂದರ ಸ್ಥಾಪನೆಗೈದು ಸಮಾಜ ಸೇವೆಗಾಗಿ ಮುಂದಡಿ ಇಟ್ಟ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ತಮ್ಮ ಸುತ್ತಲಿನ ಹಳ್ಳಿಗಳಿಗೆ ಒದಗಿ ಬಂದ ಅನೇಕ ಸಂಕಷ್ಟಗಳಿಗೆ ಪರಿಹಾರದ ಬೆನ್ನೆಲುಬಾಗಿ ನಿಂತವರು, ಜೊತೆಗೆ ಉತ್ತರ ಕರ್ನಾಟಕದಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ಪ್ರವಾಹಕ್ಕೆ ಒಳಗಾಗಿ ಸಂಕಷ್ಟದ ಸ್ಥಿತಿ ಅರಿತು ಮಧುಗಿರಿ ನಾಗರಿಕ ಹಿತಾ ರಕ್ಷಣಾ ವೇದಿಕೆ ಮತ್ತು ಕೊರಟಗೆರೆಯ ಸಹೃದಯದ ನಾಗರಿಕರೊಂದಿಗೆ ಬೀದಿ ಬಿದಿಗಯಲ್ಲಿ ಭಿಕ್ಷಾಟನೆ ಮಾಡಿ ಆಹಾರ ಧಾನ್ಯಗಳ ಜೊತೆಗೆ ವಸ್ತುಗಳನ್ನು ಸಂಗ್ರಹಿಸಿ ಬಾಗಲಕೋಟೆ ಜಿಲ್ಲೆಯ ತೇರದಾಳ ಮತ್ತಿತರ ಕಡೆ ಎರಡು ಬಾರಿ ವಿತರಿಸಿದ ನೇತೃತ್ವ ವಹಿಸಿದ್ದನ್ನು ಸಹಾ ಮರೆಯುವಂತಿಲ್ಲ.
ಹೇಮಾವತಿ ನೀರನ್ನು ತುಮಕೂರು ತಾಲ್ಲೂಕಿನ ಕೆರೆಗಳಿಗೆ ಹರಿಸುವ ಹೋರಾಟದಲ್ಲಿ ಧುಮುಕಿ, ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡು ಧರ್ಮ ನಿರಪೇಕ್ಷ ಸ್ವಾಮಿ ಎನಿಸಿಕೊಂಡ ಇವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೋವಿಡ್‌- 19 ರ ಲಾಕ್ಡೌನ್‌ ಸಂಕಷ್ಟದಲ್ಲಿ ಜಾತಿ, ಮತದ ಹಂಗಿಲ್ಲದೆ ಹಸಿದು ಬಂದವರಿಗೆ ಅನ್ನ ದಾಸೋಹ ಏರ್ಪಡಿಸಿದ್ದು ಚರಿತ್ರಾರ್ಹ, ಈ ಮಠಕ್ಕೆ ಯಾವುದೇ ಆದಾಯವೂ ಇಲ್ಲ, ಭಕ್ತರ ನೆರವಿನಿಂದ ನಿತ್ಯಾನ್ನ ದಾಸೋಹ ಹಾಗೂ ಕಾಡಿನ ಪ್ರಾಣಿ, ಪಕ್ಷಿ ಸಂಕುಲಕ್ಕೂ ವಿಸ್ತರಿಸಿದ್ದು ನಿಜಕ್ಕೂ ಪ್ರಶಂಸನೀಯವೆಂದು ಮಠದ ಭಕ್ತರ ಅಂಬೋಣವಾಗಿದೆ.

Get real time updates directly on you device, subscribe now.

Comments are closed.

error: Content is protected !!