ಎಗ್ಗಿಲ್ಲದೆ ಸಾಗಿದೆ ವಾಹನ ಸವಾರರ ಓಡಾಟ- ಇಲ್ಲಸಲ್ಲದ ನೆಪ ಹೇಳಿ ಆಡ್ತಾರೆ ಆಟ

ತುಮಕೂರಿನಲ್ಲಿ ಕೊರೊನಾ ಕರ್ಫ್ಯೂ ಮುಗಿತಾ?

199

Get real time updates directly on you device, subscribe now.

ತುಮಕೂರು: ತುಮಕೂರು ನಗರದಲ್ಲಿ ಕೊರೊನಾ ಕರ್ಫ್ಯೂ ಮುಗಿತಾ… ಇಂಥದೊಂದು ಪ್ರಶ್ನೆ ಜನರಲ್ಲಿ ಎದುರಾಗಿದೆ, ಯಾಕಂದ್ರೆ ರಸ್ತೆಯಲ್ಲಿ ಯಾವುದೇ ಅಡೆತಡೆ ಇಲ್ಲದೆ ವಾಹನಗಳು ಓಡಾಟ ನಡೆಸುತ್ತಿವೆ.
ಹೌದು, ವಾಹನಗಳಲ್ಲಿ ಜನರ ಓಡಾಟ ನೋಡ್ತಾ ಇದ್ರೆ ಕೊರೊನಾ ಕರ್ಫ್ಯೂವನ್ನು ಸರ್ಕಾರ ವಾಪಸ್‌ ತೆಗೆದುಕೊಂಡು ಬಿಡ್ತಾ ಎಂಬ ಪ್ರಶ್ನೆ ಎದುರಾಗಲಿದೆ.
ಕೊರೊನಾ ರಾಜ್ಯದಲ್ಲಿ ಜನರಿಗೆ ನರಕ ದರ್ಶನ ಮಾಡಿಸುತ್ತಿದೆ, ದಿನವೊಂದಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರನ್ನು ಆವರಿಸಿ ಆಸ್ಪತ್ರೆ ಸೇರುವಂತೆ ಮಾಡುತ್ತಿದೆ, ಎಷ್ಟೋ ಜನರು ಚಿಕಿತ್ಸೆ ಫಲಿಸದೆ ಸಾವಿನ ಮನೆ ಸೇರಿದ್ದಾರೆ, ಇಂಥ ಪರಿಸ್ಥಿತಿ ನಡುವೆಯೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ, ತುಮಕೂರು ಜಿಲ್ಲೆಯಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಏರುತ್ತಿದೆ, ಸಾವಿನ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಇದೆ, ಇದರ ಮಧ್ಯೆ ಜನರ ಓಡಾಟ ಮಾತ್ರ ನಿಂತಿಲ್ಲ.
ಕಟ್ಟುನಿಟ್ಟಾಗಿ ಕರ್ಫ್ಯೂ ಜಾರಿಗೊಳಿಸಲಾಗುತ್ತೆ ಎಂದು ಸರ್ಕಾರವೇನೋ ಹೇಳಿದೆ, ಜನರು ಅನಗತ್ಯವಾಗಿ ಓಡಾಡದ್ರೆ ಯಾವುದೇ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ, ಆದರೆ ಜನರ ಓಡಾಟ ಮಾತ್ರ ಎಗ್ಗಿಲ್ಲದೆ ಸಾಗಿದ್ದರೂ ಪೊಲೀಸರು ಯಾವುದೇ ಕ್ರಮ ಗೊಳ್ಳುತ್ತಿಲ್ಲ.
ರಸ್ತೆಗಿಳಿಯುವ ವಾಹನ ಸವಾರರು ನಾನಾ ನಮೂನೆ ಕಾರಣಗಳನ್ನು ನೀಡುತ್ತಿದ್ದಾರೆ, ಇಷ್ಟೇ ಅಲ್ಲದೆ ಉತ್ಪಾದನಾ ವಲಯಕ್ಕೂ ಸರ್ಕಾರ ವಿನಾಯಿತಿ ನೀಡಿರುವುದರಿಂದ ಜನರು ಸಬೂನು ಹೇಳಿಕೊಂಡು ರಸ್ತೆಗೆ ಇಳಿಯುತ್ತಿದ್ದಾರೆ, ನಗರದ ಪ್ರಮುಖ ವೃತ್ತಗಳಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿಕೊಂಡು ವಾಹನ ಸವಾರರನ್ನು ಪರಿಶೀಲಿಸುತ್ತಿದ್ದಾರೆ, ಆದರೆ ಜನರು ಆಸ್ಪತ್ರೆಗೆ ಹೋಗಬೇಕು, ಮಾತ್ರೆ ತೆಗೆದುಕೊಳ್ಳಬೇಕು, ಊಟ ಕೊಡಬೇಕು, ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಬೇಕು, ಫ್ಯಾಕ್ಟರಿಗೆ ಹೋಗಬೇಕು.. ಹೀಗೆ ನಾನಾ ಸಬೂಬು ಹೇಳುತ್ತಿದ್ದಾರೆ, ಜೊತೆಗೆ ಅದಕ್ಕೆ ತಕ್ಕಂತೆ ಐಡಿ ಕಾರ್ಡ್‌ಗಳನ್ನು ತೋರಿಸುತ್ತಿದ್ದಾರೆ, ವಿಧಿ ಇಲ್ಲದೆ ಪೊಲೀಸರು ಕೂಡ ವಾಹನ ಸವಾರರನ್ನು ಬಿಟ್ಟು ಕಳಿಸುವ ಅನಿವಾರ್ಯತೆ ಎದುರಾಗಿದೆ.
ಇನ್ನು ಒಂದಷ್ಟು ಮಂದಿ ಸುಮ್ಮನೆ ಸುತ್ತಾಟಕ್ಕೆ ಬರುವುದು ಉಂಟು, ಅವರನ್ನು ಕೇಳಿದರೆ ಇಲ್ಲಸಲ್ಲದ ಸಬೂಬು ಹೇಳಿ ಪೊಲೀಸರಿಂದ ಫೈನ್‌ ಹಾಕಿಸಿಕೊಳ್ಳುತ್ತಿದ್ದಾರೆ, ಕೊರೊನಾ ಮಾರಿ ಜನರಿಗೆ ಹೊಡೆತ ಕೊಡುತ್ತಿದ್ದರೂ ಎಚ್ಚೆತ್ತಕೊಳ್ಳದೆ ಓಡಾಟ ನಡೆಸುವುದು ತರವಲ್ಲ ಎಂದು ಪ್ರಜ್ಞಾವಂತರು ಎಚ್ಚರಿಸಿದ್ದಾರೆ, ಇನ್ನಾದರೂ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಎಚ್ಚೆತ್ತುಕೊಂಡು ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಿದರೆ ಮಾತ್ರ ಕೊರೊನಾ ಓಟಕ್ಕೆ ಬ್ರೇಕ್‌ ಹಾಕಲು ಸಾಧ್ಯ, ಇಲ್ಲವಾದರೆ ಮಹಾಮಾರಿ ಮತ್ತಷ್ಟು ಆರ್ಭಟ ಶುರು ಮಾಡಿ ಜನರ ಜೀವ ಮತ್ತು ಜೀವನಕ್ಕೆ ಆಪತ್ತು ತರುವುದರಲ್ಲಿ ಅನುಮಾನ ಇಲ್ಲ.

Get real time updates directly on you device, subscribe now.

Comments are closed.

error: Content is protected !!