ಸರಕಾರಿ ಆಸ್ಪತ್ರೆಗೆ ಆಕ್ಸಿಜನ್ ಸಿಲಿಂಡರ್ ನೀಡಿದ ಮಸಾಲೆ ಪುತ್ರ

432

Get real time updates directly on you device, subscribe now.

ತುರುವೇಕೆರೆ: ತಾಲೂಕಿನ ಜನತೆಗೆ ಆಕ್ಸಿಜನ್ ಕೊರತೆ ನೀಗಿಸಬೇಕೆಂಬ ನಿಟ್ಟಿನಲ್ಲಿ ತುರುವೇಕೆರೆ ಸಾರ್ವಜನಿಕ ಆಸ್ಪತ್ರೆಗೆ ಆಕ್ಸಿಜನ್ ಸಿಲಿಂಡರ್ ಹಾಗೂ ಟ್ರಾಲಿಯನ್ನು ಕೊಡುಗೆಯಾಗಿ ನೀಡಿರುವ ಶಾಸಕ ಮಸಾಲ ಜಯರಾಮ್ ಪುತ್ರ ತೇಜು ಅವರಿಗೆ ತಾಲೂಕಿನ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಬಿಜೆಪಿ ವಕ್ತಾರ ಮುದ್ದೇಗೌಡ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ತಾಲೂಕು ಆಡಳಿತಾಧಿಕಾರಿ ಡಾ.ಸುಪ್ರಿಯಾ ಹಾಗೂ ಆಡಳಿತಾಧಿಕಾರಿ ಶ್ರೀಧರ್ ಅವರಿಗೆ ತಾಲೂಕು ಬಿಜೆಪಿ ಘಟಕದ ವತಿಯಿಂದ ಆಕ್ಸಿಜನ್ ಸಿಲಿಂಡರ್ ಹಸ್ತಾಂತರಿಸಿ ಮಾತನಾಡಿದ ಅವರು ಕೊರೊನಾ ಎರಡನೇ ಅಲೆಗೆ ಸಿಲುಕಿರುವ ಸೋಂಕಿತರನ್ನು ಆಕ್ಸಿಜನ್ ಕೊರತೆ ಬಹುವಾಗಿ ಕಾಡುತ್ತಿದೆ, ಇದನ್ನು ಮನಗಂಡ ಶಾಸಕ ಮಸಾಲ ಜಯರಾಮ್ ಪುತ್ರ ತೇಜುರವರು ನಮ್ಮ ತಾಲೂಕಿನ ಜನತೆಗೆ ಆಕ್ಸಿಜನ್ ಕೊರತೆ ಕಾಡಬಾರದು, ತಾಲೂಕಿನ ಜನತೆಗೆ ಪ್ರಾಣವಾಯು ದೊರೆತು ಅಮೂಲ್ಯ ಜೀವಗಳು ಉಳಿಯಲಿ ಎಂಬ ದೂರದೃಷ್ಟಿ ಚಿಂತನೆ ಸಕಾಲಿಕವಾದದ್ದು, ಮೊದಲ ಹಂತದಲ್ಲಿ 10 ಸಿಲಿಂಡರ್ ಗಳನ್ನು ನೀಡಿದ್ದು ಶೀಘ್ರದಲ್ಲಿ ಮತ್ತಷ್ಟು ಸಿಲಿಂಡರ್ ಗಳನ್ನು ನೀಡಲಿದ್ದಾರೆ ಎಂದರು.
ಶಾಸಕ ಮಸಾಲ ಜಯರಾಮ್ ಈಗಾಗಲೇ ತಾಲೂಕಿನಲ್ಲಿ ಕೊರೊನಾ ಸೋಂಕಿಗೊಳಗಾಗುವವರ ಅಗತ್ಯ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಿದ್ದಾರೆ, ತಾಲೂಕಿನಲ್ಲಿರುವ ಕ್ಯಾನ್ಸರ್, ಹೃದ್ರೋಗಿಗಳಿಗೆ, ಮಾನಸಿಕ ರೋಗಿಗಳಿಗೆ ಕಳೆದ ಬಾರಿ ಕೊರೊನಾ ವೇಳೆ ಉಚಿತವಾಗಿ ಔಷಧಿ ವಿತರಿಸಿದ್ದರು, ಈ ಬಾರಿಯೂ ಉಚಿತ ಔಷಧಿ ವಿತರಣೆ ಕಾರ್ಯ ಮುಂದುವರೆಸಿರುವ ಶಾಸಕರ ಜನಪರ ಕಾಳಜಿ ಮೆಚ್ಚುವಂತದ್ದು, ತಾಲೂಕಿನ ಜನತೆ ಎಂತಹ ಪರಿಸ್ಥಿತಿಯಲ್ಲಿಯೂ ಎದೆಗುಂದದಿರಿ, ನಿಮ್ಮ ನೆರವಿಗೆ ಶಾಸಕರು ಧಾವಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲೂಕು ಘಟಕದ ಅಧ್ಯಕ್ಷ ಹೆಡಗೀಹಳ್ಳಿ ವಿಶ್ವನಾಥ್, ಮಾಜಿ ಅಧ್ಯಕ್ಷ ದುಂಡರೇಣುಕಯ್ಯ, ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ವಿ.ಬಿ.ಸುರೇಶ್, ವಿ.ಟಿ.ವೆಂಕಟರಾಮ್, ಗ್ರಾಪಂ ಸದಸ್ಯ ಕಾಳಂಜಿಹಳ್ಳಿ ಸೋಮಣ್ಣ, ಸಾಗರ್ ಯಾದವ್ ಮತ್ತಿತರಿದ್ದರು.

Get real time updates directly on you device, subscribe now.

Comments are closed.

error: Content is protected !!