ಮೈ ಮರೆತರೆ ವೈರಾಣು ಮನೆ ಬಾಗಿಲಿಗೆ ಬರುತ್ತೆ: ಸಿ.ಟಿ.ರವಿ

ಕೊರೊನಾ ರೆಸ್ಟ್ ತಗೋಳಲ್ಲ ಎಚ್ಚರ..

579

Get real time updates directly on you device, subscribe now.

ತುಮಕೂರು: ನಗರದ ಜಿಲ್ಲಾಸ್ಪತ್ರೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಭೇಟಿ ನೀಡಿ ಕೋವಿಡ್‌- 19 ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮ ಹಾಗೂ ಸೋಂಕಿತರಿಗೆ ನೀಡುತ್ತಿರುವ ಚಿಕಿತ್ಸೆ ಕುರಿತು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌, ಡಿಹೆಚ್‌ಓ ಡಾ.ನಾಗೇಂದ್ರ ಅವರೊಂದಿಗೆ ಚರ್ಚೆ ನಡೆಸಿದರು. ಪಿಪಿಇ ಕಿಟ್‌ ಧರಿಸಿ ಕೋವಿಡ್‌ ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕರ್ನಾಟಕದ ಆಕ್ಸಿಜನ್‌ ಕೋಟಾವನ್ನು ಹೆಚ್ಚಳ ಮಾಡಿದೆ, 300 ಮೆಟ್ರಿಕ್‌ ಟನ್‌ ನಿಂದ 800 ಮೆಟ್ರಿಕ್‌ ಟನ್‌ಗೆ ಹೆಚ್ಚಿಗೆ ಮಾಡಿದೆ, ಅದೇ ರೀತಿ ರೆಮ್‌ಡಿಸಿವಿರ್‌ ನ್ನು 1,22,000 ಕ್ಕೆ ಹೆಚ್ಚಿಸಿದೆ, ಆದರೂ ಬೇಡಿಕೆ ಜಾಸ್ತಿ ಇದೆ ಎಂದರು.
ಕರ್ನಾಟಕದಲ್ಲಿ 2- 3 ಪಟ್ಟು ಸೋಂಕು ಹೆಚ್ಚಾಗುವ ಸೂಚನೆಯನ್ನು ತಜ್ಞರು ನೀಡಿದ್ದರು, ಆದರೆ ಈ ಪ್ರಮಾಣದಲ್ಲಿ ಹೆಚ್ಚಳವಾಗುತ್ತೆ ಎಂಬುದು ಗೊತ್ತಿರಲಿಲ್ಲ, ಮೊದಲ ಅಲೆಗಿಂತ 2ನೇ ಅಲೆ 15 ಪಟ್ಟು ಹೆಚ್ಚಳವಾಗಿದೆ, ಮೂರು ಪಟ್ಟು ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದೆವು, ಆದರೆ ಈ ಪ್ರಮಾಣದಲ್ಲಿ ಏರಿಕೆಯಾಗುತ್ತೆ ಅಂತಾ ಯಾರೂ ಊಹಿಸಿರಲಿಲ್ಲ, ಮುಂದಿನ ದಿನಗಳಲ್ಲಿ ಎದುರಿಸಲು ತಯಾರಿ ಮಾಡಿಕೊಂಡಿದ್ದೇವೆ ಎಂದು ಹೇಳಿದರು.
ಜನತಾ ಕರ್ಫ್ಯೂ ಮಾಡಿದ್ದೇನೊ ಸರಿ ಇದೆ, ಅದು ನಮಗೆ ನಾವು ರೆಸ್ಟ್ ‌ ತೆಗೆದುಕೊಂಡ ಹಾಗೆ, ಆದರೆ ಕೊರೊನಾ ರೆಸ್ಟ್ ‌ ತಗೋಳಲ್ಲ, ಸಿಕ್ಕಿದ ನಾಲ್ಕು ಗಂಟೆಯಲ್ಲಿ ವಸ್ತುಗಳನ್ನು ಕೊಂಡು ಕೊಳ್ಳಲು ಜನ ಮುಗಿ ಬೀಳ್ತಾರೆ, ಎಲ್ಲವನ್ನೂ ಅವಶ್ಯ ವಸ್ತುವಂತೆ ಜನರು ನೋಡುತಿದ್ದಾರೆ, ಸರ್ಕಾರ ಜನರಿಗೆ ಮಾಸ್ಕ್ ಹಾಕಿಸೋಕೆ ಆಗಲ್ಲ, ಮಾಸ್ಕ್ ಹಾಕಿ ಅಂತ ಹೇಳಬಹುದು, ಮೈಮರೆತು ಮಲಗಿದ್ರೆ ಹೊರಗಡೆ ಇರುವ ವೈರಾಣು ಮನೆ ಬಾಗಿಲಿಗೆ ಬರುತ್ತೆ, ವೈರಸ್‌ ಬರದಂತೆ ನೋಡಿಕೊಳ್ಳೋದು ವ್ಯಕ್ತಿಗತ ಜವಾಬ್ದಾರಿ ಎಂದರು.
ಭಾರತ ಬೇರೆ ದೇಶಕ್ಕೆ ವ್ಯಾಕ್ಸಿನ್‌ ಕಳುಹಿಸಿದಾಗ ಕೆಲವರು ವ್ಯಂಗ್ಯವಾಡಿದರು, ಆದರೆ ಈಗ 48 ದೇಶಗಳು ನಮ್ಮ ನೆರವಿಗೆ ಬಂದಿವೆ, ನಾನು ನಿನಗಾದರೆ ನೀನು ನನಗೆ ಎಂಬ ತತ್ವ ಇದು, ನಾವು ಅವರ ಕಷ್ಟಕ್ಕೆ ಆಗಿದ್ವಿ, ಈಗ ಅವರು ನಮ್ಮ ಕಷ್ಟಕ್ಕೆ ಆಗುತ್ತಿದ್ದಾರೆ ಎಂದು ಹೇಳಿದರು.
ಮಾಜಿ ಸಚಿವ ಎಸ್‌.ಶಿವಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಸುರೇಶ್‌ಗೌಡ, ಎಸ್ಪಿ ಡಾ.ಕೆ.ವಂಶಿಕೃಷ್ಣ, ಜಿಲ್ಲಾ ಶಸ್ತ್ರಚಿಕಿತ್ಸ ಡಾ.ಸುರೇಶ್‌ಬಾಬು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!