ರಾಜೇಶ್ ಗೌಡರಿಂದ ಕೋವಿಡ್‌ ಆಸ್ಪತ್ರೆಗೆ 50 ಆಕ್ಸಿಜನ್‌ ಹಾಸಿಗೆ

101

Get real time updates directly on you device, subscribe now.

ಶಿರಾ: ಜಿಲ್ಲೆಯಲ್ಲಿ ಕೋವಿಡ್‌ 19 2ನೇ ಅಲೆಯಿಂದಾಗಿ ಜನರು ತತ್ತರಿಸುತ್ತಿದ್ದು, ಆಕ್ಸಿಜನ್ ಗಾಗಿ ಸೋಂಕಿತರು ಪರದಾಡುತ್ತಿದ್ದು, ಶಿರಾ ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ ಅವರು ಶಿರಾ ಕೋವಿಡ್‌ ಆಸ್ಪತ್ರೆಗೆ ಹೆಚ್ಚುವರಿಯಾಗಿ 50 ಆಕ್ಸಿಜನ್‌ ಹಾಸಿಗೆಯನ್ನು ಸ್ವಂತ ಹಣದಲ್ಲಿ ಅಳವಡಿಸಲು ಮುಂದಾಗಿದ್ದಾರೆ.
ತುಮಕೂರು ನಗರವನ್ನು ಹೊರತುಪಡಿಸಿದರೆ ಸಿರಾ ತಾಲ್ಲೂಕಿನ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಸಿರಾ ತಾಲ್ಲೂಕು ಆಸ್ಪತ್ರೆಯಿಂದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಕೋವಿಡ್‌ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿರಿಸಲಾಗಿದ್ದು, ಸರ್ಕಾರದಿಂದ 50 ಆಕ್ಸಿಜನ್‌ ಹಾಸಿಗೆಗಳ ವ್ಯವಸ್ಥೆಯನ್ನು ಮಾಡಿದ್ದು, ಸೋಂಕಿತರಿಗೆ ಸಮಸ್ಯೆಯಾಗಬಾರದು ಎನ್ನುವ ಮುಂದಾಲೋಚನೆಯಿಂದ ಶಾಸಕರು ಹೆಚ್ಚುವರಿಯಾಗಿ 50 ಆಕ್ಸಿಜನ್‌ ಹಾಸಿಗೆ ಅಳವಡಿಸಲು ಬೆಂಗಳೂರಿನ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿ, ಹಾಸಿಗೆ ಅಳವಡಿಸಲು ಸಂಸ್ಥೆಯವರೊಂದಿಗೆ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಶಾಸಕ ರಾಜೇಶ್‌ಗೌಡ ಅವರು, ಕೋವಿಡ್‌ 2ನೇ ಅಲೆಯಿಂದಾಗಿ ಸಾಮಾನ್ಯ ಜನರು ಕಷ್ಟವನ್ನು ಎದುರಿಸುತ್ತಿದ್ದು, ಮಹಾಮಾರಿಯಿಂದ ಸಂದ್ಧಿಗ್ನ ಪರಿಸ್ಥಿತಿ ಉಂಟಾಗಿದ್ದು, ಆಕ್ಸಿಜನ್‌ ಕೊರತೆ ಉಂಟಾಗದಂತೆ ಬೆಂಗಳೂರಿನ ಬೆನಕ ಮೆಡಿಟೆಕ್‌ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಮುಂಜಾಗ್ರತೆಯಾಗಿ ಹೆಚ್ಚುವರಿಯಾಗಿ 50 ಆಕ್ಸಿಜನ್‌ ಬೆಡ್ ಗಳನ್ನು ಅಳವಡಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ತಾಲ್ಲೂಕು ಆಸ್ಪತ್ರೆಯಲ್ಲಿ ಹೊರ ರೋಗಿಗಳೊಂದಿಗೆ ಬರುವ ಸಂಬಂಧಿಕರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು, ರೋಗಿಗಳೊಂದಿಗೆ ಬರುವವರಿಗೆ ತೊಂದರೆಯಾಗಬಾರದು ಎನ್ನುವ ದೃಷ್ಠಿಯಿಂದ ವ್ಯವಸ್ಥೆ ಮಾಡಲಾಗಿದ್ದು, ಕೋವಿಡ್‌ ವಾರಿಯರ್ಸ್ ಗೆ ಸ್ಯಾನಿಟೈಸರ್‌, ಮಾಸ್ಕ್ ಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.
ಆಂಬ್ಯುಲೆನ್ಸ್ ಕೊಡುಗೆ: ಕೋವಿಡ್‌ ಸೋಂಕಿತರಿಗೆ ಸಮಸ್ಯೆಯಾಗಬಾರದು ಎನ್ನುವ ದೃಷ್ಟಿಯಿಂದ ಶಿರಾ ತಾಲ್ಲೂಕು ಆಸ್ಪತ್ರೆಗೆ ವೈಯಕ್ತಿಕವಾಗಿ ಎರಡು ಆ್ಯಂಬುಲೆನ್ಸ್ ಗಳನ್ನು ನೀಡಿದ್ದು, ಕೋವಿಡ್‌ ಸಮಸ್ಯೆ ಎದುರಿಸಲು ಶಿರಾ ತಾಲ್ಲೂಕು ಜನರೊಂದಿಗೆ ನಿಲ್ಲುವುದಾಗಿ ತಿಳಿಸಿದರು.
ಕೋವಿಡ್‌ ಸೋಂಕಿಗೆ ಒಳಗಾಗಿ ಐಸೋಲೇಷನ್ ನಲ್ಲಿ ಇರುವವರು ವೈದ್ಯರು ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸಬೇಕು, ಜನರು ಸಹ ಕೋವಿಡ್‌ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಕೋವಿಡ್‌ ನಿಯಂತ್ರಣಕ್ಕೆ ಸಹಕರಿಸುವಂತೆ ಮನವಿ ಮಾಡಿದರು.

Get real time updates directly on you device, subscribe now.

Comments are closed.

error: Content is protected !!