ಮಧುಗಿರಿ: ಇತ್ತೀಚೆಗೆ ಕೋವಿಡ್ ಪಾಸಿಟಿವ್ ಬಂದವರನ್ನು ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಿ ಆರೈಕೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ತಾಲೂಕಿನಲ್ಲಿ ಕೊರೊನಾ ವೈರಸ್ ಹರಡದಂತೆ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನಲ್ಲಿ ನಾಲ್ಕು ಗ್ರಾಮ ಪಂಚಾಯತಿ ಮತ್ತು ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ಅಧಿಕ ಸೋಂಕಿತರು ಪತ್ತೆಯಾಗಿರುವುದರಿಂದ ಹಾಟ್ ಸ್ಪಾಟ್ ಗಳೆಂದು ಗುರುತಿಸಲಾಗಿದೆ, ಮಧುಗಿರಿ ಪುರಸಭಾ ವ್ಯಾಪ್ತಿಯ ಶ್ರೀನಿವಾಸ ಬಡಾವಣೆ, ಕೆ.ಆರ್.ಬಡಾವಣೆ, ರಾಘವೇಂದ್ರ ಕಾಲೋನಿ ಮತ್ತು ತಾಲೂಕಿನ ಮಿಡಿಗೇಶಿ ಬ್ಯಾಲ್ಯಾ , ದೊಡ್ಡೇರಿ, ಚಂದ್ರಗಿರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹೆಚ್ಚು ಸೋಂಕಿತರು ಕಂಡು ಬಂದಿರುವುದರಿಂದ ಹಾಟ್ ಸ್ಪಾಟ್ ಗಳಾಗಿ ಘೋಷಿಸಲಾಗಿದ್ದು, ಗ್ರಾಮಾಂತರ ಭಾಗದಲ್ಲಿರುವ ಹಾಟ್ ಸ್ಪಾಟ್ ನಲ್ಲಿರುವ ಸೋಂಕಿತರನ್ನು ತಕ್ಷಣವೇ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆಗಾಗಿ ದಾಖಲಿಸಿ ಮತ್ತು ಸೋಂಕಿತ ವ್ಯಕ್ತಿಗೆ ಸಂಬಂಧಿಸಿದ ಮನೆಯಲ್ಲಿರುವ ಎಲ್ಲರಿಗೂ ಕೋವಿಡ್ ಪರೀಕ್ಷೆ ಮಾಡಿಸುವಂತೆ ಸಚಿವರು ತಿಳಿಸಿದರು.
ಮಧುಗಿರಿ ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ 50 ಹಾಸಿಗೆಯುಳ್ಳ ವಾರ್ಡ್‌ಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ, ಇನ್ನುಳಿದ ವಾರ್ಡ್‌ಗಳಲ್ಲಿ ಇತರೆ ಕಾಯಿಲೆಯ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ, ಖಾಸಗಿ ಆಸ್ಪತ್ರೆಯಾದ ರಾಘವೇಂದ್ರ ಆಸ್ಪತ್ರೆಯನ್ನು ಕೋವಿಡ್ ಕೇರ್ ಗೆ ಬಳಸಿಕೊಳುವಂತೆ ಸಚಿವರು ಸೂಚಿಸಿದರು.
ತಾಲೂಕಿನಲ್ಲಿ 1018 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಈ ಪೈಕಿ 507 ಸಕ್ರಿಯ ಪ್ರಕರಣಗಳಿಗೆ ಪಟ್ಟಣದಲ್ಲಿ 170 ಇವೆ ಎಂದು ಸಚಿವರು ಹೇಳಿದರು.
ಹೊರಗಿನವರ ಬಗ್ಗೆ ಎಚ್ಚರ
ತಾಲೂಕಿಗೆ ಹೊರಗಿನಿಂದ ಮತ್ತು ಆಂಧ್ರದ ಗಡಿಭಾಗಕ್ಕೆ ಹೊಂದಿಕೊಂಡಿರುವುದರಿಂದ ಹೊರಗಿನವರು ಹೆಚ್ಚಾಗಿ ಗ್ರಾಮಗಳಿಗೆ ಪ್ರವೇಶಿಸಿದರೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಅವರನ್ನು 5 ದಿನ ಕಡ್ಡಾಯವಾಗಿ ಮನೆಯಲ್ಲೇ ಇರುವಂತೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಪ್ರಸ್ತುತ ಸಾರ್ವಜನಿಕ ಆಸ್ಪತ್ರೆಯಲ್ಲಿ 33 ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, 12 ಮಂದಿ ಮೃತಪಟ್ಟಿದ್ದಾರೆ.
ಮಧುಗಿರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯ ಸಿಬ್ಬಂದಿಯೂ ಸೇರಿದಂತೆ 16 ಮಂದಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿದೆ, ಇವರೆಲ್ಲ ಚಿಕಿತ್ಸೆಗೆ ಒಳಗಾಗುವುದರಿಂದ ಸಿಬ್ಬಂದಿ ಕೊರತೆಯಿದ್ದು ಇದನ್ನು ತುಂಬಿಕೊಡುವಂತೆ ಡಿಹೆಚ್‌ಒ ಅವರಿಗೆ ವೈದ್ಯ ಡಾ.ಗಂಗಾಧರ್ ಮನವಿ ಮಾಡಿದರು.
ಶೇ.38 ರಷ್ಟು ವ್ಯಾಕ್ಸಿನೇಷನ್
ತಾಲೂಕಿನಲ್ಲಿ ಇಲ್ಲಿಯವರೆಗೂ 33,134 ಕೋವಿಡ್ ವ್ಯಾಕ್ಸಿನೇಷನ್ ಮಾಡಲಾಗಿದ್ದು ಮೊದಲ ಹಂತದಲ್ಲಿ 27758, ಎರಡನೇ ಹಂತದಲ್ಲಿ 5416 ಆಗಿದ್ದು ಶೇಕಡ 38 ರಷ್ಟು ಲಸಿಕೆ ನೀಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ರಮೇಶ್ ಬಾಬು ತಿಳಿಸಿದರು.
ಬೈಕ್, ಕಾರುಗಳಿಗೆ ಕಡಿವಾಣ
ಕಳೆದ ಲಾಕ್ ಡೌನ್ ವೇಳೆ ದ್ವಿಚಕ್ರ ಮತ್ತು ಕಾರುಗಳ ಸಂಚಾರ ಕಟ್ಟುನಿಟ್ಟಾಗಿ ತಡೆಯಲಾಗಿತ್ತು, ಈ ವೇಳೆ ಜಿಲ್ಲಾದ್ಯಂತ ನಿಯಂತ್ರಣಕ್ಕೆ ಬಂದಿಲ್ಲ, ಮುಂದಿನ ಹದಿನೈದು ದಿನಗಳ ಕಾಲ ಕಟ್ಟುನಿಟ್ಟಾಗಿ ಸಂಚಾರ ನಿಯಂತ್ರಣಕ್ಕೆ ಪೊಲೀಸ್ ಇಲಾಖೆಗೆ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚಿಸಿದಾಗ ಮಧುಗಿರಿ ಡಿವೈಎಸ್ಪಿ ಕೆ.ಜಿ.ರಾಮಕೃಷ್ಣ ಇಲ್ಲಿಯವರೆಗೂ 683 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಮನೆಯಲ್ಲಿ ಐಸೋಲೇಷನ್ ನಲ್ಲಿರುವ ಸೋಂಕಿತರಿಗೆ ಊಟದ ವ್ಯವಸ್ಥೆಯನ್ನು ತಾಲೂಕು ಆಡಳಿತ ಸಮರ್ಪಕವಾಗಿ ಮಾಡಬೇಕು, ಇಲ್ಲವಾದರೆ ಸೋಂಕಿತ ಹೊರಗಡೆ ಬಂದು ವೈರಸ್ ಹರಡಲು ಸಹಕಾರಿಯಾಗುತ್ತದೆ, ಕೆಮ್ಮು, ನೆಗಡಿ, ಜ್ವರ, ಉಸಿರಾಟದ ತೊಂದರೆ ಇದ್ದವರಿಗೆ ಮಾತ್ರ ಕೊರೊನಾ ಪರೀಕ್ಷೆ ಮಾಡಿ ಜಿಲ್ಲೆಯಲ್ಲಿ ಪ್ರತಿನಿತ್ಯ 7000 ವರಗೂ ಪರೀಕ್ಷೆ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ ತಾಲೂಕಿನಲ್ಲಿ ಕೋವಿಡ್ ಪ್ರಕರಣ ದಿನೇದಿನೆ ಹೆಚ್ಚಾಗಿ ಕಂಡುಬರುತ್ತಿರುವುದರಿಂದ ಈಗಾಗಲೇ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ, 50 ಆಕ್ಸಿಜನ್ ಬೆಡ್ ಗಳಿದ್ದು, 5 ಐಸಿಯು, ದಿನಕ್ಕೆ ಮೂರು ಬಾರಿ ಆಕ್ಸಿಜನ್ ತುಂಬಲಾಗುತ್ತಿದೆ, ಪ್ರಥಮ ಅಲೆಯ ವೇಳೆ ಆಶಾ ಕಾರ್ಯಕರ್ತರು ಕಾರ್ಯ ನಿರ್ವಹಿಸಿದ ರೀತಿಗೂ ಈಗ ನಿರ್ವಹಿಸುತ್ತಿರುವ ರೀತಿಗೂ ಸಾಕಷ್ಟು ವ್ಯತ್ಯಾಸಗಳಿವೆ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿಬರುತ್ತಿದೆ ಎಂದರು.
ಸರ್ಕಾರಿ ಹಾಸ್ಟೆಲ್ ಗಳನ್ನು ಕೋವಿಡ್ ಕೇರ್ ಸೆಂಟರ್‌ಗಳಾಗಿ ಪರಿವರ್ತಿಸಬೇಕು, ಆ್ಯಂಬುಲೆನ್ಸ್ ಕೊರತೆ ಇರುವುದನ್ನು ಸಭೆಯ ಗಮನಕ್ಕೆ ತಂದಾಗ ಡಿಹೆಚ್‌ಒ ತುರ್ತಾಗಿ ಆ್ಯಂಬುಲೆನ್ಸ್ ನೀಡುವುದಾಗಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಜಿಪಂ ಸಿಇಒ ವಿದ್ಯಾಕುಮಾರಿ, ಡಿಹೆಚ್‌ಒ ನಾಗೇಂದ್ರಪ್ಪ, ಉಪ ವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ಡಿವೈಎಸ್ಪಿ ಕೆ.ಜಿ.ರಾಮಕೃಷ್ಣ, ತಹಶೀಲ್ದಾರ್ ವೈ.ರವಿ, ತಾಪಂ ಇಒ ದೊಡ್ಡಸಿದ್ದಪ್ಪ, ಟಿಹೆಚ್‌ಒ ರಮೇಶ್ ಬಾಬು, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಗಂಗಾಧರ್, ಪುರಸಭಾ ಮುಖ್ಯಾಧಿಕಾರಿ ಅಮರ್ ನಾರಾಯಣ್, ಸಿಪಿಐ ಎಂ.ಎಸ್.ಸರ್ದಾರ್, ಸಿಡಿಪಿಒ ಅನಿತಾ, ಬಿಇಒ ನಂಜುಂಡಯ್ಯ, ಬಿಆರ್‌ಸಿ ಮಂಜುನಾಥ ಸ್ವಾಮಿ, ಆಹಾರ ಶಿರಸ್ತೇದಾರ್ ಗಣೇಶ್, ಪಿಡಿಒಗಳಾದ ಜುಂಜೇಗೌಡ, ಶಿಲ್ಪ ಹಾಜರಿದ್ದರು.
Get real time updates directly on you device, subscribe now.
Comments are closed.