ಕುಣಿಗಲ್: ಕೋವಿಡ್ ಸೋಂಕು ವ್ಯಾಪಕವಾಗುತ್ತಿದೆ, ಭವಿಷ್ಯದಲ್ಲಿ ಮಾನವನ ರಕ್ತಕ್ಕೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಲಿದೆ, ರಕ್ತಕ್ಕೆ ಪರ್ಯಾಯ ಇನ್ನೊಂದಿಲ್ಲದ ಕಾರಣ ವ್ಯಾಕ್ಸಿನ್ ಪಡೆಯುವ ಮುನ್ನ ಯುವ ಜನತೆ ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವದಾನ ಮಾಡಲು ಮುಂದೆ ಬರಬೇಕೆಂದು ಶಾಸಕ ಡಾ.ರಂಗನಾಥ ತಿಳಿಸಿದರು.
ಮಂಗಳವಾರ ಪಟ್ಟಣದ ಮಹಾತ್ಮಗಾಂಧಿ ಪ.ಪೂ.ಕಾಲೇಜಿನ ಆವರಣದಲ್ಲಿ ದಯಭವನ ಸಂಸ್ಥೆಯು ಸೇವಾಭಾಗ್ಯ ಫೌಂಡೇಶನ್, ಶ್ರೀರಾಮ ಸೇವಾ ಸಮಿತಿ, ರೆಡ್‌ಕ್ರಾಸ್, ಲಯನ್ಸ್ ಸಂಸ್ಥೆ, ಜಿಲ್ಲಾರಕ್ತನಿಧಿ, ಸಂಜೀವಿನಿ ಬ್ಲಡ್ ಬ್ಯಾಂಕ್ ಇತರೆ ಸಂಘಗಳ ಸಂಯುಕ್ತಾಶ್ರಯದಲ್ಲಿ ಹಲವು ಎಡರು ತೊಡರುಗಳ ನಡುವೆ ಕೋವಿಡ್ ನಿಯಮಾವಳಿ ಪಾಲಿಸಿಕೊಂಡು ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿ, ಕೋವಿಡ್ ಹೊರತಾಗಿಯೂ ಹಲವು ಗಂಭೀರ ಸ್ವರೂಪದ ರೋಗಗಳಿಗೆ ರಕ್ತ ಅತ್ಯಾವಶ್ಯವಾಗಿದೆ. ಈ ಮಧ್ಯೆ ಕೊವಿಡ್ ವ್ಯಾಕ್ಸಿನ್ ಪಡೆದ ನಂತರ ಸುಮಾರು ದಿನಗಳ ಕಾಲ ರಕ್ತದಾನ ಮಾಡುವುದು ನಿರ್ಬಂಧಿಸುವ ಕಾರಣ ಅಗತ್ಯವುಳ್ಳ ರೋಗಿಗಳಿಗೆ ರಕ್ತದ ಬೇಡಿಕೆ ಪೂರೈಕೆ ಮಾಡಲು ಹೆಚ್ಚಿನದಾಗಿ ಯುವಕರು ಮುಂದೆ ಬಂದು ರಕ್ತದಾನ ಮಾಡುವ ಮೂಲಕ ತಮ್ಮ ಕೊಡುಗೆ ನೀಡಬೇಕೆಂದರು.
ದಯಭವನ ಸಂಸ್ಥೆಯ ಸಂಯೋಜನಾಧಿಕಾರಿ ರಮೇಶ್ ಮಾತನಾಡಿ, ಸಂಸ್ಥೆಯು 18 ವರ್ಷಗಳಿಂದ ರಕ್ತದಾನ ಶಿಬಿರ ಸೇರಿದಂತೆ ಕೋವಿಡ್ ಲಾಕ್ ಡೌನ್ ಸಮಯದಲ್ಲಿ ನಿರ್ಗತಿಕರಿಗೆ ಆಹಾರ ವಿತರಣೆ ಕಾರ್ಯಕ್ರಮ ಮಾಡುತ್ತಿದೆ, ಕೊವಿಡ್ ಸೋಂಕಿನ ಹೊರತು ಪಡಿಸಿ ಬೇರೆ ಬೇರೆ ಕಾರಣಗಳಿಗೆ ರಕ್ತದ ಅಗತ್ಯ ಇರುವ ರೋಗಿಗಳಿಗೆ ರಕ್ತದ ಅಗತ್ಯತೆ ಪೂರೈಕೆ ಮಾಡುವುದು ಬಹು ದೊಡ್ಡ ಸವಾಲಿನ ಕೆಲಸವಾಗಿದೆ, ಇಂತಹ ದಿನಗಳಲ್ಲಿ ಯುವಕರು ರಕ್ತದಾನದ ಮಹತ್ವ ಅರಿತು ರಕ್ತ ನೀಡುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕೆಂದರು.
ಶ್ರೀರಾಮ ಸೇವಾ ಸಮಿತಿಯ ಆಡಿಟರ್ ಸುರೇಶ್ ಅವರ ಪ್ರೇರಣೆಯಿಂದ ಹದಿನೈದಕ್ಕು ಹೆಚ್ಚು ಯುವಕರು ಮೊದಲ ಬಾರಿಗೆ ರಕ್ತದಾನ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ನಿಯಮಿತ ರಕ್ತದಾನ ಮಾಡುವ ಸಂಕಲ್ಪ ಕೈಗೊಂಡರು, ದಯಾಭವನ ಸಂಸ್ಥೆಯ ಫಾದರ್ ಜೀನೇಶ್‌ವರ್ಕಿ, ಪ್ರಮುಖರಾದ ದಿನೇಶ್, ಅರುಣ್‌ಕುಮಾರ, ಕರವೇ ಅಧ್ಯಕ್ಷ ಮಂಜುನಾಥ, ಕೇಶವಮೂರ್ತಿ, ದಿನೇಶ್‌ಕುಮಾರ, ವಿನೋದ್‌ಗೌಡ, ಅಜಯ್, ಕುಮಾರ ಇತರರು ಇದ್ದರು. ಶಿಬಿರದಲ್ಲಿ 80 ಯುನಿಟ್ ರಕ್ತ ಸಂಗ್ರಹವಾಯಿತು.
ರಕ್ತದಾನ ಮಾಡಿ ಮತ್ತೊಬ್ಬರ ಜೀವ ಉಳಿಸಿ: ಡಾ.ರಂಗನಾಥ್
Get real time updates directly on you device, subscribe now.
Prev Post
Next Post
Comments are closed.