ದೇವಸ್ಥಾನದ ಬಾವಿ ಬಳಿ ಕುಡುಕರ ಸಾಮ್ರಾಜ್ಯ

158

Get real time updates directly on you device, subscribe now.

ಹುಳಿಯಾರು: ಪಟ್ಟಣದಲ್ಲಿ ಲಾಕ್ ಡೌನ್ ಜಾರಿಗೆ ಬಂದ ಮೇಲೆ ಬಯಲು ಕುಡಿತ ಹೆಚ್ಚಿದೆ, ಮದ್ಯದ ಅಂಗಡಿಯಿಂದ ಮದ್ಯ ಖರೀದಿಸಿ ಬಯಲಲ್ಲೇ ಕುಡಿದು ತೂರಾಡುವವರ ಸಂಖ್ಯೆ ಹೆಚ್ಚುತ್ತಿದ್ದು ಇದಕ್ಕೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬೆಳಗ್ಗೆ 6 ಗಂಟೆಗೆ ಬಾರ್ ಬಾಗಿಲು ತೆರೆಯಲು ಅನುಮತಿ ಕೊಟ್ಟಿರುವುದರಿಂದ ಬೆಳಗ್ಗೆ 5 ಗಂಟೆಯಿಂದಲೇ ಕಾಯ್ದು ಮದ್ಯ ಖರೀದಿಸುತ್ತಿದ್ದರೆ. ಖರೀದಿಸಿದ ಮದ್ಯ ಸೇವನೆಗೆ ಸ್ಥಳವಕಾಶ ಸಿಗದೆ ಬಾರ್ ಸಮೀಪದ ಬಾವಿ ಕಟ್ಟೆ ಮತ್ತು ಕೆರೆ ಏರಿಯ ಬೈರವ ದೇವಸ್ಥಾನದ ಬಳಿ ಕುಡಿಯುತ್ತಿದ್ದಾರೆ, ಬಸ್ ನಿಲ್ದಾಣ ಹಾಗೂ ಜನಸಂದಣಿ ಹೆಚ್ಚಿರುವ ಪ್ರದೇಶದಲ್ಲಿ ರಾಜಾರೋಷವಾಗಿ ಕುಡಿಯುತ್ತಿದ್ದರೂ ಕ್ರಮ ಕೈಗೊಳ್ಳದಿದ್ದರಿಂದ ಬಯಲ ಕುಡಿತ ಮೇರೆ ಮೀರಿದೆ.
ಕೊರೊನಾ ಮೊದಲ ಅಲೆ ಸಂದರ್ಭದಲ್ಲಿ ಡಾಬಾಗಳಲ್ಲಿ ಮದ್ಯ ಮಾರಾಟಕ್ಕೆ ತೆರೆ ಎಳೆಯಲಾಗಿತ್ತು, ಬಾರ್ ಗಳಲ್ಲೂ ಸಹ ಪಾರ್ಸಲ್ ಗೆ ಮಾತ್ರ ಅವಕಾಶ ಕೊಡಲಾಗಿತ್ತು. ಈ ಸಂದರ್ಭದಲ್ಲಿ ಬಯಲು ಕುಡುಕರ ಸಂಖ್ಯೆ ಗಣನೀಯವಾಗಿ ಹೆಚ್ಚಿತ್ತು. ಆ ಸಂದರ್ಭದಲ್ಲಿ ಕುಡುಕರು ಬಯಲಿಗೆ ಬಂದಿದ್ದರು. ಈಗ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯಿಸಿದ್ದ ಪರಿಣಾಮ ಬಯಲು ಕುಡಿತ ಸಾಂಗವಾಗಿ ನಡೆಯುತ್ತಿದೆ. ಬಯಲು ಕುಡುಕರು ಮದ್ಯದೊಂದಿಗೆ ಸ್ನ್ಯಾಕ್ಸ್, ನೀರಿನ ಬಾಟಲ್ ತಂದು ಕುಡಿದ ಬಳಿಕ ಎಲ್ಲ ವಸ್ತುಗಳನ್ನೂ ಅಲ್ಲೇ ಬಿಟ್ಟು ತೆರಳುತ್ತಿದ್ದಾರೆ.
ಅಲ್ಲದೆ ಕೆರೆಯ ಏರಿಯ ಮೇಲಿನ ಭೈರವ ದೇವಸ್ಥಾನದ ಬಳಿ ಬಯಲು ಕುಡಿತ ಏರಿ ಮೇಲೆ ಓಡಾಡುವ ಮಹಿಳೆಯರು ಮತ್ತು ಮಕ್ಕಳಲ್ಲಿ ಭಯದ ವಾತಾವರಣ ನಿರ್ಮಿಸಿದೆ. ಕುಡಿದು ಕಿತ್ತಾಡುವ, ಅಶ್ಲೀಲ ಸಂಭಾಷಣೆ ನಡೆಸುವ ಯುವತಿಯರನ್ನು ಚುಡಾಯಿಸುವ ಪ್ರಕರಣಗಳೂ ನಡೆಯುತ್ತಿವೆ. ಇಂತಹ ಅನಾಗರಿಕ ವಾತಾವರಣ ನಿರ್ಮಾಣ ಮಾಡಿರುವ ಬಯಲು ಕುಡಿತವನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಟ್ಟಹಾಕಬೇಕು ಎಂಬುದು ಜನರ ಆಗ್ರಹವಾಗಿದೆ.

Get real time updates directly on you device, subscribe now.

Comments are closed.

error: Content is protected !!