ಕೋಳಾಲ ಪೊಲೀಸರಿಂದ ಕಳ್ಳರ ಬಂಧನ

ಹಣ ಹಂಚಿಕೆ ವೇಳೆ ಕಳ್ಳರ ಕಿತ್ತಾಟ । 2 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ವಶ

578

Get real time updates directly on you device, subscribe now.

ಕೊರಟಗೆರೆ: ದೊಡ್ಡಬಳ್ಳಾಪುರ ಪಟ್ಟಣದ ಖಾಸಗಿ ಮನೆಯಲ್ಲಿ ಕಳ್ಳತನ ಮಾಡಿದ್ದ ಕಳ್ಳರ ತಂಡ ಕೊರಟಗೆರೆ ತಾಲೂಕಿನ ದೊಡ್ಡಸಾಗ್ಗೆರೆ ತಂಗುದಾಣದ ಬಳಿ ಚಿನ್ನ-ಬೆಳ್ಳಿ ಮತ್ತು ಹಣವನ್ನು ಹಂಚಿಕೊಳ್ಳುವ ವೇಳೆ ಕೋಳಾಲ ಕ್ರೈಂ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಸೋಮವಾರ ನಡೆದಿದೆ.
ಕೊರಟಗೆರೆ ತಾಲೂಕಿನ ದೊಡ್ಡಸಾಗ್ಗೆರೆ ತಂಗುದಾಣದ ಬಳಿ ನಿಂತಿದ್ದ ಅಪರಿಚಿತ ವ್ಯಕ್ತಿಗಳೇ ದೊಡ್ಡಬಳ್ಳಾಪುರದ ಮನೆಯ ಕಳ್ಳತನದ ಆರೋಪಿಗಳು. ಕೋಳಾಲ ಪೊಲೀಸ್‌ ಠಾಣೆಯ ಮುಖ್ಯಪೇದೆ ಮೋಹನಕುಮಾರ್‌ ಮತ್ತು ಜಯಸಿಂಹ ಆರೋಪಿಗಳನ್ನು ಪ್ರಶ್ನಿಸಿ ಪರಿಶೀಲನೆ ನಡೆಸಿದಾಗ ಬ್ಯಾಗಿನಲ್ಲಿದ್ದ ಬೆಳ್ಳಿಯ ಒಡವೆಗಳು ಪತ್ತೆಯಾಗಿವೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು ಮಾವಿನಕೆರೆ ಗ್ರಾಮದ ಅನಿಲ್‌, ಕೊರಟಗೆರೆ ತಾಲೂಕು ದೊಡ್ಡಸಾಗ್ಗೆರೆ ಗ್ರಾಮದ ಆನಂದ ಬಂಧಿತರು. ಇನ್ನೋರ್ವ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಕೃಷ್ಣ ಎಂಬುವನ ಪತ್ತೆಗಾಗಿ ಈಗಾಗಲೇ ಕೋಳಾಲ ಪಿಎಸ್‌ಐ ನವೀನಕುಮಾರ್‌ ನೇತೃತ್ವದ ಪೊಲೀಸರ ತಂಡ ಬಲೆ ಬೀಸಿದೆ.
ದೊಡ್ಡಸಾಗ್ಗೆರೆ ತಂಗುದಾಣದ ಬಳಿ ಆರೋಪಿಗಳಿಂದ 440ಗ್ರಾಂನ ಒಂದು ಜೊತೆ ಬೆಳ್ಳಿ ದ್ವೀಪ, ದೀಪಾಲೆ ಕಂಬ, ಬೆಳ್ಳಿ ಲೋಟ, ಬೆಳ್ಳಿ ಕಳಸ, ಬೆಳ್ಳಿ ಆರತಿ ತಟ್ಟೆ, ಬೆಳ್ಳಿ ತಟ್ಟೆ ಮತ್ತು ತಿಪಟೂರಿನ ಇಂಟೇಲ್‌ ಮನಿ ಪ್ರವೈಟ್‌ ಲೀ. ನಲ್ಲಿ 21 ಗ್ರಾಂ ಚಿನ್ನದ ನೆಕ್ಲೇಸ್‌ ಸೇರಿ ಒಟ್ಟು 2ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣವನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!