ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡಿ: ಸಚಿವ ಮಾಧುಸ್ವಾಮಿ ಸೂಚನೆ

ಸೋಂಕಿತರನ್ನು ಕಡ್ಡಾಯವಾಗಿ ಕೇರ್ ಗೆ ಕಳಿಸಿ

210

Get real time updates directly on you device, subscribe now.

ತುಮಕೂರು: ಕೋವಿಡ್‌-19 ಸೋಂಕು ದೃಢಪಟ್ಟು ಹೋಂ ಕ್ವಾರಂಟೈನ್ ನಲ್ಲಿರುವ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್‌ ಕೇರ್‌ ಸೆಂಟರ್ ಗೆ ಸ್ಥಳಾಂತರಿಸುವಂತೆ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿ, ಅಧಿಕಾರಿಗಳು ಸಮನ್ವಯ ಸಾಧಿಸುವ ಮೂಲಕ ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಸಮರ್ಪಕ ಚಿಕಿತ್ಸೆ ನೀಡಬೇಕು ಎಂದು ನಿರ್ದೇಶಿಸಿದರು.
ಮಾರ್ಗಸೂಚಿಗಳ ಅನ್ವಯ ಆಕ್ಸಿಜನ್‌ ಮತ್ತು ರೆಮ್ಡಿಸಿವಿರ್‌ ನೀಡಬೇಕು. ಸೋಂಕಿತರನ್ನು ಹೊರತುಪಡಿಸಿ ಉಳಿದವರನ್ನು ಕೋವಿಡ್‌ ಕೇರ್‌ ಸೆಂಟರ್‌ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಸೂಚಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ತಾಲೂಕುವಾರು ಕೋವಿಡ್‌ ನಿಯಂತ್ರಣಾ ಮತ್ತು ಚಿಕಿತ್ಸಾ ಕ್ರಮಗಳ ಬಗ್ಗೆ ಸವಿಸ್ತಾರವಾಗಿ ಪರಿಶೀಲನೆ ನಡೆಸಿದರು. ಆಕ್ಸಿಜನ್‌ ಮತ್ತು ರೆಮ್ಡಿಸಿವಿರ್‌ ಪೂರೈಕೆ ಬಗ್ಗೆಯೂ ಸಂಪೂರ್ಣ ಮಾಹಿತಿ ಪಡೆದು, ಕೊರತೆಯಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಪೊಲೀಸರ ಸಹಕಾರ ಪಡೆದು ಕೊರೊನಾ ನಿಯಂತ್ರಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕೆಲವು ನಿರ್ದೇಶನಗಳನ್ನು ನೀಡಿದರು.
ಗುಬ್ಬಿ ತಾಲೂಕಿನ ಕೆಲವು ಕಡೆ ಜಾತ್ರೆ ಮಾಡಿದರೂ ಕ್ರಮ ಕೈಗೊಂಡಿಲ್ಲ. ಕಡ್ಡಾಯವಾಗಿ ಜಾತ್ರೆ ನಿಷೇಧ ಮಾಡದಿದ್ದರೆ ತಹಸೀಲ್ದಾರ್ ಗಳನ್ನೇ ನೇರ ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಚಿತ್ರದುರ್ಗ ಲೋಕಸಭಾ ಸದಸ್ಯ ನಾರಾಯಣಸ್ವಾಮಿ ಮಾತನಾಡಿ, ಹೋಂ ಕ್ವಾರಂಟೈನ್ ನಲ್ಲಿರುವ ಸೋಂಕಿತರ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಹೋಂ ಕ್ವಾರಂಟೈನ್‌ ನಲ್ಲಿರುವ ಸೋಂಕಿತರ ಮನೆಯವರೆಲ್ಲರನ್ನೂ ಕೋವಿಡ್‌ ಪರೀಕ್ಷೆಗೊಳಪಡಿಸಬೇಕು. ಸೋಂಕಿತನಿರುವ ಸುತ್ತಮುತ್ತ ನಾಲ್ಕೈದು ಪ್ರಕರಣ ಕಂಡುಬಂದರೆ ತಕ್ಷಣವೇ ಆ ಬೀದಿಯಲ್ಲಿರುವವರೆಲ್ಲರನ್ನೂ ಕೋವಿಡ್‌ ಪರೀಕ್ಷೆಗೊಳಪಡಿಸಬೇಕು. ಹಾಟ್ ಸ್ಪಾಟ್‌ ಪ್ರದೇಶಗಳಲ್ಲಿ ಹೆಚ್ಚು ನಿಗಾವಹಿಸಬೇಕು. ಹೋಂ ಕ್ವಾರಂಟೈನ್‌ ಸೋಂಕಿತರು ಎಲ್ಲೆಂದರಲ್ಲಿ ತಿರುಗಾಡುವುದಕ್ಕೆ ಕಡಿವಾಣ ಹಾಕಬೇಕು ಎಂದು ಸೂಚಿಸಿದರು.
ತಿಪಟೂರು ತಾಲೂಕು ಬಿ.ಸಿ.ನಾಗೇಶ್‌ ಮಾತನಾಡಿ, ತಾಲೂಕಿನಲ್ಲಿ ಸದ್ಯಕ್ಕೆ ಆಕ್ಸಿಜನ್‌ ಮತ್ತು ರೆಮ್‌ಡಿಸಿವಿರ್‌ ಸಮಸ್ಯೆಯಿಲ್ಲ, ಆದರೆ ತಾಲೂಕಿಗೆ ಹೆಚ್ಚು ಪ್ರಮಾಣದಲ್ಲಿ ಲಸಿಕೆ ಪೂರೈಕೆ ಮಾಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಹೋಂ ಕ್ವಾರಂಟೈನ್ ನಲ್ಲಿರುವ ಸೋಂಕಿತರನ್ನು ಕೋವಿಡ್‌ ಕೇರ್‌ ಸೆಂಟರ್ ಗೆ ಸ್ಥಳಾಂತರಿಸಲಾಗುತ್ತಿದೆ. ಹೆಚ್ಚು ಸೋಂಕಿನ ಪ್ರಕರಣಗಳಿರುವ ಪ್ರದೇಶಗಳನ್ನು ಹಾಟ್‌ ಸ್ಪಾಟ್‌ ಗಳೆಂದು ಗುರುತಿಸಿ ಸೋಂಕಿನ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆಕ್ಸಿಜನ್‌, ರೆಮ್‌ಡಿಸಿವಿರ್‌ ಕೊರತೆಯಾಗದಂತೆ ನಿಗಾವಹಿಸಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಮಾಜಿ ಎಂಎಲ್‌ಸಿ ಹುಲಿನಾಯ್ಕರ್‌, ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್‌, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಉಪವಿಭಾಗಾಧಿಕಾರಿ ಅಜಯ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ, ಪಾಲಿಕೆ ಆಯುಕ್ತೆ ರೇಣುಕಾ ಸೇರಿದಂತೆ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!