ಕುಣಿಗಲ್: ರಾಜ್ಯಸರ್ಕಾರ ತಾಲೂಕಿಗೆ ಆಮ್ಲಜನಕ, ಐಸಿಯು ಬೆಡ್ ನೀಡುವಲ್ಲಿ ವಿಫಲವಾಗಿದೆ, ತಾಲೂಕಿನ ಬೇಡಿಕೆ ಅನುಸಾರ ವ್ಯವಸ್ಥೆ ಮಾಡದೆ ಇದ್ದಲ್ಲಿ ಸರ್ಕಾರದ ವಿರುದ್ಧ ಸೋಂಕಿತರು, ಕುಟುಂಬದವರೊಂದಿಗೆ ಸೇರಿ ನನ್ನ ಪ್ರಾಣವನ್ನು ಲೆಕ್ಕಿಸದೆ ಧರಣಿ ನಡೆಸಬೇಕಾಗುತ್ತದೆ ಎಂದು ಶಾಸಕ ಡಾ.ರಂಗನಾಥ್ ಎಚ್ಚರಿಕೆ ನೀಡಿದರು.
ಬುಧವಾರ ಮಧ್ಯಾಹ್ನ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸೋಂಕಿತರ ಸಮಸ್ಯೆ ಆಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ನಗರ ಪ್ರದೇಶದಿಂದ ಹೆಚ್ಚಿನ ಮಂದಿ ತಾಲೂಕಿಗೆ ವಲಸೆ ಬಂದ ಕಾರಣ ಗ್ರಾಮಾಂತರ ಪ್ರದೇಶದಲ್ಲೂ ವಯಸ್ಕರು, ಯುವಕರಲ್ಲಿ ಸೋಂಕು ತೀವ್ರವಾಗುತ್ತಿದೆ. ಸೋಂಕಿತರ ಚಿಕಿತ್ಸೆಗೆ ಆಮ್ಲಜನಕ ಸರಿಯಾದ ಪ್ರಮಾಣದಲ್ಲಿ ನೀಡದೆ ಸರ್ಕಾರ ಪಡಿತರ ವಿತರಣೆಯಂತೆ ನಿಗದಿಮಾಡಿದೆ. ಸರಿಯಾಗಿ ಆಮ್ಲಜನಕ ಸಿಗದೆ ತಾಲೂಕಿನ ಜನರು ಸಾವನ್ನಪ್ಪುತ್ತಿರುವುದು ನೋಡಲಾಗುತ್ತಿಲ್ಲ, ಸೋಂಕು ಪತ್ತೆಯನ್ನು ಸರ್ಕಾರ ಬೇಕೆಂದೆ ಕಡಿಮೆ ಮಾಡಿ ಜನರ ಸಾವಿಗೆ ಕಾರಣವಾಗುತ್ತಿದೆ. ಒಂದೆಡೆ ಸರಿಯಾದ ಆಮ್ಲಜನಕ, ಮತ್ತೊಂದೆಡೆ ಸರಿಯಾದ ಸೋಂಕು ಪತ್ತೆ ಮಾಡದೆ ಜನರನ್ನು ಮೃತ್ಯುಕೂಪಕ್ಕೆ ಸರ್ಕಾರ ತಳ್ಳುವ ಮೂಲಕ ಕೊಲೆಗಾರನಾಗಿದೆ ಎಂದರು.
ದಿನಕ್ಕೆ ಸಾವಿರ ಸೋಂಕು ತಪಾಸಣೆ ಮಾಡಿಸುತ್ತಿದ್ದ ಸರ್ಕಾರ ಇದೀಗ ಮುನ್ನೂರಕ್ಕೆ ಇಳಿಸಿದೆ, ಇದರಿಂದಾಗಿ ಮುಂದಿನ ದಿನಗಳಲ್ಲಿ ಹಳ್ಳಿಹಳ್ಳಿಗಳಲ್ಲಿ ಜನ ಚಿಕಿತ್ಸೆ ಸಿಗದೆ ಸಾವನ್ನಪ್ಪುವ ಸಂಭವ ಇದೆ. ಸರ್ಕಾರ ಜನರ ಪ್ರಾಣ ರಕ್ಷಣೆ ಮಾಡುವ ಬದಲು ಭಕ್ಷಣೆಗೆ ನಿಂತಿದೆ. ಸರ್ಕಾರದ ಭಕ್ಷಣಾ ವ್ಯವಸ್ಥೆಯಿಂದ ಚಾಮರಾಜನಗರದಲ್ಲಿ 28 ಅಮಾಯಕರ ಸಾವಿಗೆ ಕಾರಣವಾಗಿದೆ ಎಂದರು.
ಬಿಬಿಎಂಪಿಯಲ್ಲಿ ಬೆಡ್ ಲಾಕ್ ದಂಧೆಯಲ್ಲಿ ಅವರದೆ ಪಕ್ಷದ ಸಂಸದ ತೇಜಸ್ವಿಯವರು ವ್ಯವಸ್ಥೆ ಸರಿ ಮಾಡದೆ ಪುಕ್ಕಟ್ಟೆ ಪ್ರಚಾರ ಗಿಟ್ಟಿಸಿಕೊಳ್ಳಲು ಯತ್ನಿಸಿದ್ದು ಸರಿಯಲ್ಲ, ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳು ಕೊವಿಡ್ ಎರಡನೆ ಅಲೆ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಕೊವಿಡ್ ಎರಡನೇ ಅಲೆ ಭೀತಿ ಇದ್ದರೂ ಕೇಂದ್ರ ಸರ್ಕಾರ ಕುಂಭಮೇಳಕ್ಕೆ ಅನುಮತಿ ನೀಡಿದ್ದು ಯಾಕೆ, ದೇಶದ ಪ್ರಧಾನಿ ಒಮ್ಮೆಯೂ ಸೋಂಕಿತರ ಭೇಟಿಗೆ ಆಸ್ಪತ್ರೆಗೆ ಭೇಟಿ ನೀಡಿಲ್ಲ. ರಾಜ್ಯದಲ್ಲಿ ಜನತೆಗೆ ಆಮ್ಲಜನಕ ನೀಡದೆ ಸರ್ಕಾರ ಜನರ ಸಾಯಿಸುತ್ತಿದೆ. 3500 ಕೋಟಿ ವೆಚ್ಚ ಮಾಡಿ ಪ್ರತಿಮೆ ನಿರ್ಮಾಣ ಮಾಡುವ ಕೇಂದ್ರ ಸರ್ಕಾರ ರಾಷ್ಟ್ರದ ಆರೋಗ್ಯ ವ್ಯವಸ್ಥೆ ಸುಧಾರಣೆ ಮಾಡುವಲ್ಲಿ ವಿಫಲವಾಗಿದೆ. ಕಾಂಗ್ರೆಸ್ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನಿಸುವ ಬಿಜೆಪಿ ಸರ್ಕಾರದ ಸಚಿವರು ಇದೆ ಕಾಂಗ್ರೆಸ್ ಸರ್ಕಾರ ಸ್ಥಾಪಿಸಿದ ಮೆಡಿಕಲ್ ಕಾಲೇಜಿನಲ್ಲಿ ಓದಿ ಸಚಿವರಾಗಿದ್ದೇವೆ ಎಂಬುದ ಮರೆತಿದ್ದಾರೆ.
ರಾಜ್ಯದಲ್ಲಿ 1400 ಮೆಟ್ರಿಕ್ ಟನ್ ಆಮ್ಲಜನಕ ಉತ್ಪಾದಿಸಿದರೂ ಹೊರ ರಾಜ್ಯಕ್ಕೆ ನೀಡುವ ಮೂಲಕ ರಾಜ್ಯ, ಕೇಂದ್ರ ಸರ್ಕಾರ ರಾಜ್ಯದ ಜನತೆಗೆ ಅನ್ಯಾಯ ಮಾಡುತ್ತಿವೆ. ತಾಲೂಕಿನಲ್ಲೆ ಆಮ್ಲಜನಕ ಘಟಕ ಇದ್ದರೂ ತಾಲೂಕಿನ ಜನತೆಗೆ ಆಮ್ಲಜನಕ ನೀಡಲು ಸರ್ಕಾರ ಮನಸು ಮಾಡುತ್ತಿಲ್ಲ, ಇದು ಸರ್ಕಾರದ ಜನವಿರೋಧಿ ನೀತಿ, ಕೂಡಲೆ ತಾಲೂಕಿಗೆ ಅಗತ್ಯ ಇರುವ ಆಮ್ಲಜನಕ ನೀಡದೆ ಇದ್ದಲ್ಲಿ ಸೋಂಕಿತರು ಕುಟುಂಬದವರೊಂದಿಗೆ ಸೇರಿ ಅನಿರ್ಧಿಷ್ಟ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೋವಿಡ್ ಸೋಂಕು ಹೆಚ್ಚಾದಾಗಿನಿಂದ ರಾತ್ರಿ ನಿದ್ದೆಯೆ ಇಲ್ಲ…
ಸ್ವತಹ ವೈದ್ಯನಾಗಿರುವ ನನಗೆ ಜನರ ಕಷ್ಟ ಅರ್ಥವಾಗುತ್ತಿದೆ, ರಾತ್ರಿ ಆದರೆ ಗ್ರಾಮಾಂತರ ಪ್ರದೇಶದಿಂದ ಸೋಂಕಿತರು ಕರೆ ಮಾಡಿ ಐಸಿಯು ಬೆಡ್ ಗೆ ಅಂಗಲಾಚುತ್ತಾರೆ, ವ್ಯವಸ್ಥೆ ಮಾಡಲಾಗದು, ಕಷ್ಟಪಟ್ಟು ಆಸ್ಪತ್ರೆಗೆ ಸೇರಿದಂತೆ ಸೇರಿಸುವಾಗಲೆ ಸಾವಿರಗಟ್ಟಲೆ ಹಣ ಕೇಳುತ್ತಾರೆ. ಸರ್ಕಾರ ಕೊವಿಡ್ ಚಿಕಿತ್ಸೆ ನಿಟ್ಟಿನಲ್ಲಿ ಯಾವುದೇ ಸಮರ್ಪಕ ಚಿಕಿತ್ಸಾ ವೆಚ್ಚ ಮಾಡಿಲ್ಲ. ರಾಜ್ಯಸರ್ಕಾರ ಜನರ ಆರೋಗ್ಯ ಸಮಸ್ಯೆ ನಿವಾರಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ನಮ್ಮ ಕಣ್ಣುಮುಂದೆಯೆ 26 ವರ್ಷದ ಯುವಕನಿಗೆ ಐಸಿಯು ಬೆಡ್ ವ್ಯವಸ್ಥೆ ಮಾಡದೆ ಸಾವು ಬದುಕಿನ ನಡುವೆ ಹೋರಾಡಿ ಸೋಲನ್ನಪ್ಪುವುದು ಕಂಡು ಕರುಳು ಕಿತ್ತು ಬರುತ್ತದೆ. ಪರಿಸ್ಥಿತಿ ಮುಂದಿನ ದಿನಗಳಲ್ಲಿ ಭೀಕರವಾಗಲಿದೆ, ಇನ್ನಾದರೂ ಸರ್ಕಾರ ಸ್ಪಂದನೆ ನೀಡಲಿ ಎಂದರು.
Comments are closed.