ತುಮಕೂರು: ಕೊರೊನಾ 2ನೇ ಅಲೆಯಿಂದಾಗಿ ಜೀವ ಭಯದಲ್ಲಿರುವ ಜನರನ್ನು ಇನ್ನಷ್ಟು ಹೆದರಿಸಿ ಚಿಕಿತ್ಸೆ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳು ಹಾಗೂ ಖಾಸಗಿ ಲ್ಯಾಬ್ ಗಳು, ಸ್ಕ್ಯಾನಿಂಗ್ ಸೆಂಟರ್ಗಳು ಸುಲಿಗೆ ಮಾಡುತ್ತಿವೆ ಎನ್ನುವ ಆರೋಪ ಕೇಳಿ ಬಂದಿವೆ.
ಕೋವಿಡ್-19 ಪತ್ತೆಗೆ ಸಿಟಿ ಸ್ಕ್ಯಾನ್, ಎಂಆರ್‌ಐ ಸ್ಕ್ಯಾನ್ ಮಾಡಿಸುವುದು ಸುಲಭವಾದ ವಿಧಾನ, ಆರ್‌ಟಿಪಿಸಿಆರ್ ಮಾಡಿಸಿದರೆ ಫಲಿತಾಂಶ ತಡವಾಗುವುದರಿಂದ ಸಿಟಿ ಸ್ಕ್ಯಾನ್, ಎಂಆರ್‌ಐ ಸ್ಕ್ಯಾನ್ ಮಾಡುವ ಮೂಲಕ ಕೊರೊನಾ ಸೋಂಕಿಗೆ ತಕ್ಷಣವೇ ಚಿಕಿತ್ಸೆ ನೀಡಬಹುದು ಎಂದು ಬಿಂಬಿಸಲಾಗುತ್ತಿದೆ.
ಕೊರೊನಾ ಲಕ್ಷಣಗಳಿಲ್ಲದ ಅನ್ಯ ಕಾರಣಗಳಿಂದ ಆಸ್ಪತ್ರೆಗೆ ಹೋದವರಿಗೂ, ಆರ್‌ಟಿಪಿಸಿಆರ್ ನಲ್ಲಿ ನೆಗೆಟಿವ್ ಬಂದವರಿಗೂ ಸಿಟಿ ಸ್ಕ್ಯಾನ್ ಮಾಡಿಸಿ, ಸ್ಕ್ಯಾನ್ ವರದಿ ಆಧಾರದ ಮೇಲೆ ಕೊರೊನಾ ಸೋಂಕು ದೃಢಪಡಿಸಲಾಗುತ್ತಿದೆ, ಸಿಟಿ ಸ್ಕ್ಯಾನ್ ಫಲಿತಾಂಶದ ಮೇಲೆಯೇ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.
ಸ್ಕ್ಯಾನ್‌ಗೆ 4 ರಿಂದ 6 ಸಾವಿರ ಫಿಕ್ಸ್: ನಗರದ ಖಾಸಗಿ ಆಸ್ಪತ್ರೆಗಳು ಹಾಗೂ ಲ್ಯಾಬ್ ಗಳು ಕೊರೊನಾ ಹೆಸರಿನಲ್ಲಿ ರೋಗಿಗಳನ್ನು ಅಕ್ಷರಶಃ ಸುಲಿಗೆ ಮಾಡುತ್ತಿವೆ ಎಂದು ರೋಗಿಗಳ ಸಂಬಂಧಿಕರು ದೂರುತ್ತಾರೆ. ನಗರದ ಆಸ್ಪತ್ರೆಯೊಂದರಲ್ಲಿ ಹೊಟ್ಟೆನೋವಿಗಾಗಿ ಹೋದ ರೋಗಿಗೆ ಸಿಟಿ ಸ್ಕ್ಯಾನ್ ನಂತರ ಕೋವಿಡ್ ಸೋಂಕಿದೆ ಎಂದು ವೈದ್ಯಕೀಯ ಕಾಲೇಜಿಗೆ ದಾಖಲಿಸಲು ಶಿಫಾರಸ್ಸು ಮಾಡಿದ್ದಾರೆ.
ಇದೇ ರೀತಿ ನಗರದಲ್ಲಿ ಸಿಟಿ ಸ್ಕ್ಯಾನ್ ಮಾಡಿಸುವುದು ಕಡ್ಡಾಯವಾಗಿ ಮಾರ್ಪಟ್ಟಿದ್ದು, ಕನಿಷ್ಠ 4 ಸಾವಿರದಿಂದ 6 ಸಾವಿರದವರೆಗೆ ಸ್ಕ್ಯಾನಿಂಗ್ ಗೆ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಒಂದೊಂದು ಆಸ್ಪತ್ರೆಯಲ್ಲಿ ಒಂದೇ ಪರೀಕ್ಷೆಗೆ ಬೇರೆ ಬೇರೆ ಶುಲ್ಕ ವಿಧಿಸಲಾಗುತ್ತಿದ್ದು, ಸಿಟಿ ಸ್ಕ್ಯಾನಿಂಗ್ ಹೆಸರಿನಲ್ಲಿ ನಡೆಯುತ್ತಿರುವ ಸುಲಿಗೆಯಿಂದ ಜನರು ರೋಸಿ ಹೋಗಿದ್ದಾರೆ.
ಸ್ಕ್ಯಾನ್ ನಿಂದ ಕೊರೊನಾ ಪತ್ತೆ ಇಲ್ಲ: ಸಿಟಿ ಸ್ಕ್ಯಾನ್ ಸೇರಿದಂತೆ ಬೇರೆ ಯಾವ ಸ್ಕ್ಯಾನಿಂಗ್‌ನಿಂದಲೂ ಕೊರೊನಾ ಸೋಂಕು ತಗುಲಿರುವ ಬಗ್ಗೆ ಖಚಿತಪಡಿಸಲು ಸಾಧ್ಯವಿಲ್ಲ, ಕೇವಲ ಆರ್‌ಟಿಪಿಸಿಆರ್ ವರದಿಯಿಂದ ಮಾತ್ರ ಸೋಂಕು ದೃಢಪಡಿಸಬಹುದಾಗಿದೆ ಎನ್ನುತ್ತಾರೆ ವೈದ್ಯರು, ರಾಜ್ಯ ಹಾಗೂ ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ ರ್ಯಾಟ್ ಅಥವಾ ಆರ್‌ಟಿಪಿಸಿಆರ್‌ನಿಂದ ಮಾತ್ರ ಕೊರೊನಾ ಪತ್ತೆ ಸಾಧ್ಯವಿದ್ದರು ಸಹ ಖಾಸಗಿ ಆಸ್ಪತ್ರೆಗಳು ಹಾಗೂ ಲ್ಯಾಬ್ ಗಳು ಸುಲಿಗೆಗಾಗಿ ಹೊಸ ಪದ್ಧತಿಯನ್ನು ಕೊರೊನಾ ಪತ್ತೆಗೆ ಸೃಷ್ಟಿಸಿದ್ದಾರೆ.
ಕೊರೊನಾ ಸೋಂಕಿನ ಲಕ್ಷಣ ಇಲ್ಲದವರನ್ನೂ ಸೋಂಕಿತರು ಅಥವಾ ಸೋಂಕಿನ ಲಕ್ಷಣಗಳು ಕಂಡುಬರುತ್ತಿವೆ ಎಂದು ಹೇಳಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತಿದೆ. ಲಕ್ಷಣಗಳು ಕಂಡು ಬರುತ್ತಿವೆ ಎಂಬ ಒಂದೇ ಕಾರಣ ಮುಂದಿಟ್ಟುಕೊಂಡು ಆಸ್ಪತ್ರೆಗೆ ದಾಖಲಿಸುವ ಅಗತ್ಯ ಇಲ್ಲದಿದ್ದರೂ ದಾಖಲಿಸಲಾಗುತ್ತಿದೆ. ಇಂತಹವರನ್ನು ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಇಟ್ಟುಕೊಂಡು ದೊಡ್ಡ ಮೊತ್ತದ ಬಿಲ್ ಮಾಡಿ ವಸೂಲಿ ಮಾಡಲಾಗುತ್ತಿದೆ.
ಕೋವಿಡ್ ನಿಂದ ಶ್ವಾಸಕೋಶದ ಮೇಲಾಗಿರುವ ಹಾನಿ ಪತ್ತೆ ಹಚ್ಚಲು ಚೆಸ್ಟ್ ಸ್ಕ್ಯಾನ್ ಮಾಡಿದರೆ ಸಾಕು, ದುಬಾರಿಯಾಗಿರುವ ಸಿಟಿ ಸ್ಕ್ಯಾನ್ ನ ಅಗತ್ಯ ಇಲ್ಲ ಎನ್ನುವ ಅಭಿಪ್ರಾಯವನ್ನು ವೈದ್ಯರು ವ್ಯಕ್ತಪಡಿಸುತ್ತಾರೆ, ಸಿಟಿ ಸ್ಕ್ಯಾನ್‌ನಿಂದ ಶ್ವಾಸಕೋಶದ ಮೇಲಾಗಿರುವ ತೀವ್ರತೆ ಅರಿತು ಶೀಘ್ರ ಚಿಕಿತ್ಸೆ ನೀಡಬಹುದು ಎನ್ನುವ ಕಾರಣವನ್ನು ನೀಡಿ ಬಡ ರೋಗಿಗಳನ್ನು ಸುಲಿಗೆ ಮಾಡಲಾಗುತ್ತಿದೆ, ಇನ್ನಾದರೂ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸ್ಕ್ಯಾನಿಂಗ್ ದಂಧೆಗೆ ಕಡಿವಾಣ ಹಾಕಬೇಕಿದೆ.
Comments are closed.