ಅಧಿಕಾರಿ ವರ್ಗ ಕೇಂದ್ರ ಸ್ಥಾನ ಬಿಟ್ಟರೆ ಕ್ರಮ: ಮಾಧುಸ್ವಾಮಿ

106

Get real time updates directly on you device, subscribe now.

ಕೊರಟಗೆರೆ: ರೋಗಿಗಳ ಕೊರೊನಾ ತಪಾಸಣಾ ವರದಿ ಇಲ್ಲದೇ ಚಿಕಿತ್ಸೆ ಮತ್ತು ಮಾತ್ರೆ ನೀಡದಂತೆ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ ಹಾಗೂ ಖಾಸಗಿ ಮೆಡಿಕಲ್ ಗಳಿಗೆ ತಕ್ಷಣ ನೊಟೀಸ್‌ ಜಾರಿ ಮಾಡಿ ಕ್ರಮ ಕೈಗೊಳ್ಳುವಂತೆ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತುಮಕೂರು ಡಿಎಚ್‌ಓ ನಾಗೇಂದ್ರಪ್ಪ ಅವರಿಗೆ ಖಡಕ್‌ ಸೂಚನೆ ನೀಡಿದರು.
ಕೊರಟಗೆರೆ ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಕೋವಿಡ್‌-19 ರೋಗದ ನಿಯಂತ್ರಣ ಮತ್ತು ಅಗತ್ಯ ಮುಂಜಾಗ್ರತಾ ಕ್ರಮದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕೊರೊನಾ ತುರ್ತು ಪರಿಸ್ಥಿತಿ ಎದುರಾಗಿದೆ. ಕೊರೊನಾ ನಿರ್ವಹಣೆಯ ಜವಾಬ್ದಾರಿ ಪಡೆದಿರುವ ಅಧಿಕಾರಿ ವರ್ಗ ಕಡ್ಡಾಯವಾಗಿ ಮುಖ್ಯ ಕೇಂದ್ರದಲ್ಲಿ ಇರಬೇಕಾದ ಅನಿವಾರ್ಯತೆ ಇದೆ, ಅಧಿಕಾರಿಗಳೇ ನೀವಿಲ್ಲದ ವೇಳೆ ಆಸ್ಪತ್ರೆ, ಕೋವಿಡ್‌ ಸೆಂಟರ್‌ ಅಥವಾ ಗ್ರಾಮಗಳಲ್ಲಿ ಏನಾದರೂ ಅವಘಡ ನಡೆದರೆ ಅದಕ್ಕೆ ನೀವೇ ಸಂಪೂರ್ಣಜವಾಬ್ದಾರಿ, ನಿಮ್ಮ ಮೇಲೆ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ ಮಾತನಾಡಿ ನನ್ನ ಕ್ಷೇತ್ರಲ್ಲಿ 45 ಸಾವಿರ ಹಿರಿಯ ನಾಗರಿಕರು ಇದ್ದಾರೆ. ಈಗಾಗಲೇ ಸುಮಾರು 17 ಸಾವಿರ ಜನರಿಗೆ ನೀಡಲಾಗಿದೆ. ಇನ್ನುಳಿದ ಜನರಿಗೆ ತಕ್ಷಣ ಲಸಿಕೆ ಪೂರೈಕೆಯ ಅಗತ್ಯವಿದೆ. ತಾಪಂ ಇಓ ಮತ್ತು ಗ್ರಾಪಂ ಪಿಡಿಓಗಳ ನಡುವೆ ಸಮನ್ವಯ ಕೊರತೆ ಇದೆ. ಕೊರೊನಾ ರೋಗ ಹರಡುವಿಕೆ ತಡೆಗಟ್ಟಲು ಪಿಡಿಓಗಳ ಪಾತ್ರ ಬಹುಮುಖ್ಯಆಗಿದೆ. ಇಓ ಸೂಚಿಸಿದ ಕೆಲಸವನ್ನು ಪಿಡಿಓ ನಿರ್ವಹಣೆ ಮಾಡುತ್ತಿಲ್ಲ ಎಂದು ಜಿಪಂ ಸಿಇಓಗೆ ಕ್ರಮಕ್ಕೆ ಸೂಚಿಸಿದರು.
ತುಮಕೂರು ಸಂಸದ ಬಸವರಾಜು ಮಾತನಾಡಿ, ತುರ್ತು ಚಿಕಿತ್ಸೆಗಾಗಿ ಕೊರಟಗೆರೆಯಿಂದ ರಾತ್ರಿ 1 ಗಂಟೆಗೆ ನನಗೆ ಕರೆ ಬರುತ್ತಿವೆ. ಕೊರೊನಾ ರೋಗಿಗಳ ಆತ್ಮಸ್ಥೆರ್ಯ ಹೆಚ್ಚಿಸಿ ಧೈರ್ಯತುಂಬಿ, ನಮಗಾಗಿ ವೈದ್ಯಕೀಯ ಮತ್ತು ಪೊಲೀಸ್‌ ಇಲಾಖೆ ಹಗಲು ರಾತ್ರಿ ಕೆಲಸ ಮಾಡುತ್ತಿವೆ. ರೋಗ ಲಕ್ಷಣ ಇದ್ದರೆ ತಕ್ಷಣ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಿರಿ ಎಂದು ಮನವಿ ಮಾಡಿದರು.
ಸಭೆಯಲ್ಲಿ ತುಮಕೂರು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌, ಜಿಪಂ ಸಿಇಓ ಡಾ.ಕೆ.ವಿದ್ಯಾಭಾರತಿ, ಡಿಎಚ್ಓ ಡಾ.ಎಂ.ಬಿ.ನಾಗೇಂದ್ರಪ್ಪ, ಮಧುಗಿರಿ ಎಸಿ ಸೋಮಪ್ಪ ಕಡಕೋಳ, ಡಿವೈಎಸ್ಪಿ ರಾಮಕೃಷ್ಣಯ್ಯ, ತಹಶೀಲ್ದಾರ್‌ ಗೋವಿಂದರಾಜು, ತಾಪಂ ಇಓ ಶಿವಪ್ರಕಾಶ್‌, ಟಿಹೆಚ್‌ಓ ರವಿಕುಮಾರ್‌, ಮುಖ್ಯ ವೈದ್ಯಾಧಿಕಾರಿ ಡಾ.ಪ್ರಕಾಶ್‌, ಸಿಡಿಪಿಓ ಅಂಬಿಕಾ, ಸಿಪಿಐ ಸಿದ್ದರಾಮೇಶ್ವರ ಸೇರಿದಂತೆ ಇತರರು ಇದ್ದರು.

ಕೊರಟಗೆರೆ ಕೊರೊನಾ ಅಂಕಿಅಂಶ..
ಕೊರಟಗೆರೆ ಆಸ್ಪತ್ರೆಯಲ್ಲಿ 50 ಆಕ್ಸಿಜನ್‌ ಹಾಸಿಗೆಯಲ್ಲಿ 36 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. 5 ಐಸಿಯು ವೆಂಟಿಲೇಟರ್‌ ಕೇಂದ್ರವಿದೆ. ಪಟ್ಟಣದ ಮೆಟ್ರಿಕ್‌ ಪೂರ್ವ ಬಾಲಕರ ಮತ್ತು ನಂತರ ವಿದ್ಯಾರ್ಥಿ ನಿಲಯದಲ್ಲಿ 100 ಹಾಸಿಗೆಯುಳ್ಳ ಕೊರೊನಾ ಕೇರ್‌ ಸೆಂಟರ್‌ ತೆರೆಯಲಾಗಿದೆ. ಅದರಲ್ಲಿ ಈಗ 6 ಜನ ಮಾತ್ರಇದ್ದಾರೆ. ಏ.1ರಿಂದ ಇಲ್ಲಿಯತನಕ 11715 ಜನರ ಪರೀಕ್ಷೆ ನಡೆಸಲಾಗಿದೆ. ಈಗ ಒಟ್ಟು 523 ಸಕ್ರಿಯ ಪ್ರಕರಣಗಳಿವೆ. 8 ಗ್ರಾಮಗಳಲ್ಲಿ 20ಕ್ಕೂ ಅಧಿಕ ಕೊರೊನಾ ಪ್ರಕರಣಗಳಿವೆ. 45 ವರ್ಷಕ್ಕಿಂತ ಮೇಲ್ಪಟ್ಟ 17326 ಜನರಿಗೆ ಲಸಿಕೆ ಹಾಕಲಾಗಿದೆ.

Get real time updates directly on you device, subscribe now.

Comments are closed.

error: Content is protected !!