ಆಮ್ಲಜನಕ, ಬೆಡ್ ಗೆ ಆಗ್ರಹಿಸಿ ಡಾ.ರಂಗನಾಥ್‌ ಮುಷ್ಕರ

449

Get real time updates directly on you device, subscribe now.

ಕುಣಿಗಲ್‌: ರಾಜ್ಯಸರ್ಕಾರ ತಾಲೂಕಿಗೆ ಬೇಕಾದಷ್ಟು ಆಮ್ಲಜನಕ, ಬೆಡ್‌ ಹಾಗೂ ಲಸಿಕೆ ಸರಿಯಾಗಿ ಪೂರೈಕೆ ಮಾಡದೆ ನಿರ್ಲಕ್ಷ್ಯ ಧೋರಣೆ ಮಾಡುತ್ತಿದೆ ಎಂದು ಆರೋಪಿಸಿ ಶಾಸಕ ಡಾ.ರಂಗನಾಥ ಗುರುವಾರ ಸಾರ್ವಜನಿಕ ಆಸ್ಪತ್ರೆಯಲ್ಲಿ ಉಪವಾಸ ಮುಷ್ಕರ ನಡೆಸಿದರು.
ರಾಜ್ಯಸರ್ಕಾರ ತಾಲೂಕಿನ ಸಮಸ್ಯೆಗೆ ಸ್ಪಂದಿಸುತ್ತಿಲ್ಲ, ಸರ್ಕಾರದ ನಿರ್ಲಕ್ಷ್ಯಧೋರಣೆಯಿಂದ ತಾಲೂಕಿನಲ್ಲಿ ಸೋಂಕು ಹೆಚ್ಚಾಗುತ್ತಿದೆ, ಸರ್ಕಾರ ಸ್ಪಂದನೆ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವರು ತಾಲೂಕಿಗೆ ಆಗಮಿಸಿ ಸಮಸ್ಯೆ ಆಲಿಸಿ ಪರಿಹಾರ ನೀಡಬೇಕೆಂದು ಉಪವಾಸ ಮುಷ್ಕರ ಆರಂಭಿಸಿದರು. ಇದಕ್ಕೆ ಪುರಸಭಾಧ್ಯಕ್ಷ ನಾಗೇಂದ್ರ, ಸದಸ್ಯರಾದ ರಂಗಸ್ವಾಮಿ, ಉದಯ್‌, ಶ್ರೀನಿವಾಸ, ಸಮೀವುಲ್ಲಾ ಹಾಗೂ ಮುಖಂಡರು ಬೆಂಬಲಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಿದರೂ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದೆ ನೇರವಾಗಿ ತಾಪಂ ಸಭಾಂಗಣಕ್ಕೆ ತೆರಳಿದರು. ಸ್ಥಳಕ್ಕೆ ಆಗಮಿಸಿದ ಸಂಸದ ಡಿ.ಕೆ.ಸುರೇಶ್‌, ಉಸ್ತುವಾರಿ ಸಚಿವರ ಸಭೆಯಲ್ಲಿ ಸಮಸ್ಯೆ ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳೋಣ ಎಂದು ಹೇಳಿ ಶಾಸಕರನ್ನು ಕರೆದೊಯ್ದರು. ಈ ವೇಳೆ ಕೆಲವರು ತಾಲೂಕಿನಲ್ಲಿ ದಿನಾಲೂ ಕೊವಿಡ್‌ ಸೋಂಕಿನಿಂದ ಐದರಿಂದ 12 ಮಂದಿ ಸಾಯುತ್ತಿದ್ದರೂ ಸರಿಯಾಗಿ ಮಾಹಿತಿ ನೀಡುತ್ತಿಲ್ಲ, ಸೋಂಕಿತರಿಗೆ ಆಮ್ಲಜನಕ, ಐಸಿಯು ವ್ಯವಸ್ಥೆ ಮಾಡುತ್ತಿಲ್ಲ ಎಂದು ಸಂಸದರಲ್ಲಿ ಅಳಲು ತೋಡಿಕೊಂಡರು.
ಸಂಸದರು ಮಾತನಾಡಿ, ಆಮ್ಲಜನಕ ಉತ್ಪಾದನೆಯಿಂದ ಹಿಡಿದು ಸಾಗಾಣೆಯಲ್ಲಿ ಸಾಕಷ್ಟು ಕೊರತೆ ಇದೆ, ರಾಜ್ಯಸರ್ಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ, ಆಮ್ಲಜನಕ ಸಾಗಾಣೆ ಮಾಡಲು ವಾಹನಗಳ ಕೊರತೆ ಇದೆ, ವಾಹನ ಸಿದ್ಧಪಡಿಸಲು ಎರಡರಿಂದ ಮೂರು ತಿಂಗಳು ಹಿಡಿಯುತ್ತೆ, ಸಾವಿನ ಲೆಕ್ಕಾಚಾರದಲ್ಲೂ ಸರ್ಕಾರ ಮೋಸ ಮಾಡುತ್ತಿದೆ, ಐದು ಮಂದಿ ಸತ್ತರೂ ಒಂದು ಎನ್ನುತ್ತದೆ, ಒಟ್ಟಾರೆ ಸರ್ಕಾರ ನೀಡುವ ಮಾಹಿತಿಗಿಂತ ಐದು, ಆರು ಪಟ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ, ಸರ್ಕಾರ ಧೋರಣೆ ಸರಿ ಇಲ್ಲ, ಮುಂದಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಸಮಸ್ಯೆ ಭೀಕರವಾಗಲಿದೆ, ಗ್ರಾಮಾಂತರ ಪ್ರದೇಶದ ಯುವ ಜನತೆ ಎಚ್ಚರದಿಂದ ಇದ್ದು ಸೋಂಕು ನಿಯಂತ್ರಣ ನಿಟ್ಟಿನಲ್ಲಿ ಸೋಂಕಿತರ ತಪಾಸಣೆ, ಚಿಕಿತ್ಸೆ ನಿಟ್ಟಿನಲ್ಲೂ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ ಎಂದರು.

Get real time updates directly on you device, subscribe now.

Comments are closed.

error: Content is protected !!