ಗುಬ್ಬಿ: ತಾಲೂಕಿನಲ್ಲಿ ಸುಮಾರು 17,000 ದಷ್ಟು ಕೊರೊನಾ ಟೆಸ್ಟಿಂಗ್ ಮಾಡಿಸಿದ್ದರು ಸಹ ಕೇವಲ 2300 ಮಾತ್ರ ಪಾಸಿಟಿವ್ ಪಟ್ಟಿ ತೋರಿಸುತ್ತಿದ್ದು ಇದರಲ್ಲಿ ಸರಿಯಾದ ಸಂಖ್ಯೆ ಬಗ್ಗೆ ಮಾಹಿತಿ ನೀಡುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಾಲೂಕು ಆರೋಗ್ಯಾಧಿಕಾರಿ ವಿರುದ್ಧ ಕಿಡಿಕಾರಿದರು.
ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ನಡೆದ ಕೊರೊನಾ ಸಭೆಯಲ್ಲಿ ಮಾತನಾಡಿದ ಅವರು ರಾತ್ರಿ ಪಾಳಿಯಲ್ಲಿ ಗುಬ್ಬಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಕೆಲಸ ಮಾಡುತ್ತಿಲ್ಲ ಎಂಬ ಆರೋಪ ಬರುತ್ತಲೆ ಇದೆ, ಜಿಲ್ಲೆಯಲ್ಲಿ ಸಾಕಷ್ಟು ಕೊರೊನಾ ಪಾಸಿಟಿವ್ ಸಂಖ್ಯೆ ಏರುತ್ತಾ ಇದ್ದರೂ ಇಲ್ಲಿನ ವೈದ್ಯಾಧಿಕಾರಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ, ಪಾಸಿಟಿವ್ ಆದಂತಹ ಸೋಂಕಿತರ ಪ್ರಾಥಮಿಕ ವರದಿಯನ್ನು ಸಹ ಸರಿಯಾಗಿ ತೆಗೆದುಕೊಳ್ಳದೆ ಇರುವುದರಿಂದ ತಾಲ್ಲೂಕಿನಲ್ಲಿ ಅತ್ಯಂತ ಹೆಚ್ಚು ಪಾಸಿಟಿವ್ ಕೇಸ್‌ಗಳು ಪತ್ತೆಯಾಗುತ್ತಿವೆ, ಹೋಮ್ ಕ್ವಾರಂಟೈನ್ ಆಗಿರುವವರು ಮನೆಯಲ್ಲಿ ಇರದೆ ಅಡ್ಡಾದಿಡ್ಡಿ ಓಡಾಡುತ್ತಿದ್ದಾರೆ, ಇದರಿಂದ ಪಾಸಿಟಿವ್ ಸಂಖ್ಯೆಗಳು ಹೆಚ್ಚಾಗುತ್ತಿವೆ, ಇದರ ಬಗ್ಗೆ ಯಾವುದೇ ಕ್ರಮವನ್ನು ಅಧಿಕಾರಿಗಳು ತೆಗೆದುಕೊಳ್ಳದೆ ಇರುವುದೇ ಸಮಸ್ಯೆಯಾಗಿದೆ, ತಾಲ್ಲೂಕಿನಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು, ಪಾಸಿಟಿವ್ ಬಂದ ಕೂಡಲೇ ಅವರನ್ನು ಹೋಮ್ ಕ್ವಾರಂಟೈನ್ ಮಾಡದೆ ಕೊರೊನಾ ಕೇರ್ ಸೆಂಟರ್‌ಗಳಿಗೆ ದಾಖಲು ಮಾಡಬೇಕು, ಯಾರೂ ದಾಖಲಾಗುವುದಿಲ್ಲ ಎನ್ನುತ್ತಾರೋ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು, ಇಲ್ಲದೇ ಹೋದರೆ ನಾವು ಕೊರೊನ ತಡೆಯಲು ಸಾಧ್ಯವಿಲ್ಲ ಎಂದರು.
ಕೇವಲ ವೈದ್ಯಾಧಿಕಾರಿಗಳು ಮಾತ್ರವಲ್ಲದೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಸಹ ಸ್ಥಳೀಯ ಮಟ್ಟದಲ್ಲಿ ಪಾಸಿಟಿವ್ ಬಂದಿದೆ ಎಂದ ಕೂಡಲೇ ಅದನ್ನು ಸ್ಥಳೀಯ ವೈದ್ಯಾಧಿಕಾರಿಗಳಿಗೆ ತಿಳಿಸಿ ಕೊರೊನ ಕೇರ್ ಸೆಂಟರ್ ಗಳಿಗೆ ಕಳುಹಿಸುವ ಪ್ರಯತ್ನ ಮಾಡಬೇಕು ಎಂದರು.
ಪೊಲೀಸ್ ಅಧಿಕಾರಿಗಳು ಸರಿಯಾಗಿ ಕ್ರಮ ತೆಗೆದುಕೊಂಡಿಲ್ಲ, ರಸ್ತೆಯಲ್ಲಿ ಸಾಕಷ್ಟು ಜನ ಅಡ್ಡಾದಿಡ್ಡಿಯಾಗಿ ತಿರುಗುತ್ತಿದ್ದರೂ ಯಾಕೆ ಓಡಾಡುತ್ತೀರಿ ಎನ್ನುವ ಪ್ರಶ್ನೆಯನ್ನೇ ಪೊಲೀಸರು ಎತ್ತುತ್ತಿಲ್ಲ, ಜನರ ಓಡಾಟ ತಪ್ಪಿಸದ ಹೊರತು ಕೊರೊನಾ ಕೊನೆಗಾಣಿಸಲು ಸಾಧ್ಯವಿಲ್ಲ, ಲಾಕ್ ಡೌನ್ ಗೆ ವಿರುದ್ಧವಾಗಿ ಯಾರೇ ಇದ್ದರೂ ಅವರನ್ನು ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಆರ್ ಟಿ ಪಿ ಸಿ ಆರ್ ಇಷ್ಟು ದಿನ ಬಹಳ ನಿಧಾನವಾಗಿ ಬರುತ್ತಿತ್ತು ಎನ್ನುವ ಮಾತುಗಳು ಕೇಳಿ ಬರುತ್ತಿತ್ತು, ಈಗ ತುಮಕೂರು ಮತ್ತು ತಿಪಟೂರಿನಲ್ಲಿ ಎರಡೂ ಕಡೆ ಲ್ಯಾಬ್ ಮಾಡಿರುವುದರಿಂದ ಆದಷ್ಟು ಬೇಗನೆ ಮಾಹಿತಿಯನ್ನು ತಮ್ಮ ಮೊಬೈಲ್ ಗೆ ಕಳುಹಿಸಲಾಗುತ್ತದೆ, ಹಾಗಾಗಿ ಯಾವುದೇ ಕಾರಣಕ್ಕೂ ಆಸ್ಪತ್ರೆಯ ಮುಂದೆ ಜನಜಂಗುಳಿ ಸೇರಬಾರದು ಮತ್ತು ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳುವಾಗಲೂ ಕೂಡ ಸಾಕಷ್ಟು ಜನ ಗುಂಪುಗೂಡುತ್ತಿರುವುದು ಕಂಡು ಬರುತ್ತಿದೆ, ಇದನ್ನು ಪೊಲೀಸರು ತಡೆಯಬೇಕು ಎಂದು ತಿಳಿಸಿದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ನಾವೇ ಕರೆ ಮಾಡಿ ಹೇಳಿದರೂ ಬೆಡ್ ಗಳು ಸಿಗುತ್ತಿಲ್ಲ, ಕೊರೊನಾ ಕಟ್ಟಿ ಹಾಕಬೇಕು ಎಂದರೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ, ಅನಗತ್ಯವಾಗಿ ಓಡಾಡವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು, ಕೊರೊನಾ ಕೇರ್ ಸೆಂಟರ್ ನಲ್ಲಿ ಪಾಸಿಟಿವ್ ಇರುವವರನ್ನು ದಾಖಲಿಸಿಕೊಂಡು ಅವರಿಗೆ ಎಲ್ಲಾ ರೀತಿಯ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮಾತನಾಡಿ, ಅಧಿಕಾರಿಗಳು ಸ್ಥಳೀಯವಾಗಿಯೇ ಇದ್ದುಕೊಂಡು ಕೆಲಸ ಮಾಡಬೇಕಾಗಿದೆ, ತಾಲ್ಲೂಕು ಆಡಳಿತ ಮತ್ತು ಗ್ರಾಮ ಪಂಚಾಯಿತಿಗಳು ಜಾಗೃತಿ ಮೂಡಿಸಿ ಕೊರೊನಾ ಸೋಂಕು ಎಲ್ಲೆಡೆ ಹರಡುವುದು ತಪ್ಪಿಸುವಂತಹ ಕೆಲಸ ಮಾಡಬೇಕು, ಸಂಕಷ್ಟದ ಸಮಯದಲ್ಲಿ ಜನರು ಬದುಕುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬ ಅಧಿಕಾರಿಯೂ ಸರಿಯಾದ ರೀತಿಯಲ್ಲಿ ಕೆಲಸ ಮಾಡಬೇಕು, ಇಲ್ಲದೆ ಹೋದರೆ ಅಧಿಕಾರಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಹಾಗೂ ಅವರಿಗೆ ಯಾವುದೇ ರೀತಿಯ ಬೇಲ್ ಸಹ ಸಿಗದ ರೀತಿಯಲ್ಲಿ ಕಾನೂನು ಇದೆ ಎನ್ನುವುದನ್ನು ಮರೆಯಬಾರದು ಎಂದರು.
ಮತ್ತೆ ಸೋಮವಾರ 3 ಗಂಟೆಗೆ ಸಭೆಯನ್ನು ಕರೆದಿದ್ದು ಎಲ್ಲಾ ಅಧಿಕಾರಿಗಳು ಸರಿಯಾದ ಮಾಹಿತಿ ತೆಗೆದುಕೊಂಡು ಸಭೆಗೆ ಹಾಜರಾಗಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ.ವಂಶಿಕೃಷ್ಣ, ಎಸಿ ಅಜಯ್, ತಹಶೀಲ್ದಾರ್ ಪ್ರದೀಪ್ ಕುಮಾರ್, ಡಿವೈಎಸ್ಪಿ ಕುಮಾರಪ್ಪ, ಇಒ ನರಸಿಂಹಯ್ಯ ಸೇರಿದಂತೆ ತಾಲ್ಲೂಕಿನ ಎಲ್ಲಾ ಅಧಿಕಾರಿಗಳು ಭಾಗಿಯಾಗಿದ್ದರು.
Get real time updates directly on you device, subscribe now.
Prev Post
Next Post
Comments are closed.