ಶಿರಾ: ಕೊರೊನಾ ಸೊಂಕು ಉಲ್ಬಣವಾಗುತ್ತಿದ್ದು ಶಿರಾ ಜನತೆಯ ಆರೋಗ್ಯ ದೃಷ್ಟಿಯಿಂದ ಸರ್ಕಾರದ ಮೇಲೆ ಒತ್ತಡ ಹಾಕಿ ಶಿರಾ ನಗರದಲ್ಲಿ ಆಕ್ಸಿಜನ್ ಉತ್ಪಾದನ ಘಟಕ ಮಂಜೂರು ಮಾಡಿಸಿದ್ದೇನೆ, ಜೂನ್ 1ರ ಹೊತ್ತಿಗೆ ಘಟಕ ಜೀವವಾಯು ಉತ್ಪಾದನೆ ಮಾಡುವ ಕೆಲಸ ಚಾಲನೆ ಮಾಡಲಿದ್ದು, ಪ್ರತಿ ನಿಮಿಷಕ್ಕೆ 390 ಲೀಟರ್ ಉತ್ಪಾದನೆಯಾಗಲಿದೆ. ಇದಲ್ಲದೇ ಈಗಾಗಲೇ ಶಿರಾ ಕೊವೀಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಇರುವ 50 ಬೆಡ್ಗಳು ಲಭ್ಯವಿದ್ದವು, ತದನಂತರ ನನ್ನ ಸ್ವಂತ ವೆಚ್ಚದಿಂದ 50 ಬೆಡ್ ಗಳನ್ನು ಸಿದ್ಧಪಡಿಸಿದೆ, ಇದೀಗಾ ಮುಂಜಾಗ್ರತ ಕ್ರಮವಾಗಿ ಮತ್ತೆ ಆರೋಗ್ಯ ಸಚಿವ ಡಾ.ಸುಧಾಕರ್ ಅವರಿಗೆ ಮನವಿ ಮಾಡಿದ ಕಾರಣ ಮತ್ತೆ 50 ಬೆಡ್ಗಳು ಮಂಜೂರಾಗಿದ್ದು ಸೋಂಕಿತರು ಚಿಕಿತ್ಸೆ ಪಡೆಯಲು ಅನುಕೂಲವಾಗಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ಶಿರಾ ತಾಲೂಕಿನ ದೊಡ್ಡಬಾಣಗೆರೆ ಗ್ರಾಮದ ಮೈಕ್ರೊ ಕಂಟೈನ್ ಜೋನ್ ಗೆ ಗುರುವಾರ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿ ಜಾಗೃತರಾಗಿರುವಂತೆ ಮನವಿ ಮಾಡಿ ಮಾತನಾಡಿ, ಸೋಂಕಿತರು ಬಿಸಿ ಆಹಾರ ಸೇವನೆ ಮಾಡಬೇಕು, ಪೌಷ್ಠಿಕತೆ ಉಳ್ಳ ಮೊಳಕೆ ಕಟ್ಟಿದ ಸಾಂಬಾರು ಸೇರಿದಂತೆ ಶುಚಿತ್ವ ಕಾಪಾಡಿಕೊಂಡು ಮನೆಯಲ್ಲಿ ಪ್ರತ್ಯೇಕವಾಗಿ ಇದ್ದರೆ ಸೋಂಕು ಗುಣವಾಗಲಿದೆ, ಕುಟುಂಬದ ಇತರೆ ಸದಸ್ಯರ ಆರೋಗ್ಯ ದೃಷ್ಟಿಯಿಂದ ಸೋಂಕು ಹರಡದಂತೆ ಹೆಚ್ಚು ನಿಗಾ ವಹಿಸಬೇಕೆಂದರು.
ಜೀವವಾಯು ಕೊಡುಗೆ ನೀಡಿದ ಅಮೆಜಾನ್: ಪ್ರಸಕ್ತ ಸ್ಥಿತಿಯಲ್ಲಿ ಮನುಷ್ಯನ ಜೀವ ಉಳಿಸುವ ಪುಟ್ಟ ಕಾಣಿಕೆಯು ದೊಡ್ಡ ಮಟ್ಟದಲ್ಲಿ ಗೋಚರಿಸುತ್ತದೆ, ಪ್ರತಿಷ್ಟಿತ ಅಮೆಜಾನ್ ಕಂಪನಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರ ಜನಪರ ಕಾಳಜಿ ನೋಡಿ 1.5 ಲಕ್ಷ ರೂಪಾಯಿ ವೆಚ್ಚದ 5 ಆಕ್ಸಿಜನ್ ಸಾಂದ್ರಕ ಶಿರಾ ಕೊವಿಡ್ ಆಸ್ಪತ್ರೆ ಕೊಡುಗೆ ನೀಡಿದರು. ಆಮ್ಲಜನಕ ಸಾಂದ್ರತೆಯು ಗಾಳಿಯಲ್ಲಿ ತೆಗೆದುಕೊಂಡು ಆಮ್ಲಜನಕ ಬೇರ್ಪಡಿಸುತ್ತದೆ ಮತ್ತು ಮೂಗಿನ ಮೂಲಕ ಮೂಲಕ ರೋಗಿಗೆ ತಲುಪುತ್ತದೆ. ಗಾಳಿಯು ಶೇ.79 ರಷ್ಟು ಮತ್ತು ಶೇ. 21 ರಷ್ಟು ಆಮ್ಲಜನಕವಾಗಿದೆ, ವಿದ್ಯುತ್ ಮೂಲಕ ಪ್ಲಗ್ ಮಾಡುವ ಮೂಲಕ ಕಾರ್ಯ ನಿರ್ವಹಿಸುವ ಸಾಂದ್ರತೆ ಶೇ. 95 ಆಕ್ಸಿಜನ್ ನೀಡುತ್ತದೆ. ಪ್ರತಿ ಗಂಟೆಗೆ 2 ರಿಂದ 5 ಲೀಟರ್ ಆಕ್ಸಿಜನ್ ಉತ್ಪಾದಿಸಿ ನೀಡಲಿದೆ. ಇದರಿಂದ ಉಸಿರಾಟದ ಸಮಸ್ಯೆ ಇರುವ ರೋಗಿಗೆ ತಕ್ಷಣವೇ ಆಕ್ಸಿಜನ್ ನೀಡಲು ಸಹಕಾರಿಯಾಗಲಿದೆ.
ಶಿರಾ ಆಸ್ಪತ್ರೆಗೆ ಬೆಡ್ ಗಳ ಕೊರತೆ ಇದೆ ಎಂಬ ಮಾಜಿ ಸಚಿವರ ಆರೋಪದಲ್ಲಿ ಹುರುಳಿಲ್ಲ, ಶಿರಾ ಜನತೆಯ ಆರೋಗ್ಯ ಕಾಪಾಡುವ ಉದ್ದೇಶದಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಸುಧಾಕರ್, ಜಿಲ್ಲಾ ಉಸ್ತವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಲ್ಲಿ ಮನವಿ ಮಾಡಿದ ಕಾರಣ ಇದೀಗಾ ಶಿರಾ ಆಸ್ಪತ್ರೆಗೆ ಆಕ್ಸಿಜನ್ ಉತ್ಪಾದನಾ ಘಟಕದ ಜೊತೆ 50 ಬೆಡ್ಗಳು ಲಭಿಸಿವೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಸ್ಪಷ್ಟ ಪಡಿಸಿದರು.
Comments are closed.