ತುಮಕೂರು: ಕೋವಿಡ್-19 ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರಿಗೆ ಆಮ್ಲಜನಕ ಕೊರತೆಯಾಗದಂತೆ ಪೂರೈಕೆ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಜಿಲ್ಲೆಯ ಕ್ವಾರಿ, ಕ್ರಷರ್, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೋದ್ಯಮಿಗಳ ಧನ ಸಹಾಯದ ನೆರವು ಪಡೆದು ಅಗತ್ಯವಿರುವ ಆಮ್ಲಜನಕ ಸಾಂದ್ರಕಗಳನ್ನು ಖರೀದಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲೆಯ ಸ್ಟೋನ್ ಕ್ರಷರ್ ಮಾಲೀಕರು, ಕ್ವಾರಿ ಮಾಲೀಕರು, ವಸಂತನರಸಾಪುರ ಕೈಗಾರಿಕೋದ್ಯಮಿಗಳ ಸಂಘ, ಗ್ರಾನೈಟ್ ಅಸೋಸಿಯೇಷನ್, ಜಿಲ್ಲಾ ಇಂಡ್‌ಸ್ಟ್ರೀಸ್ ಅಸೋಸಿಯೇಷನ್ ಸೇರಿದಂತೆ ಜಿಲ್ಲೆಯ ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೋದ್ಯಮಿಗಳೊಂದಿಗೆ ಸಭೆ ನಡೆಸಿ ಮಾತನಾಡಿ, ಜಿಲ್ಲೆಗೆ ಅಗತ್ಯವಿರುವ ಆಮ್ಲಜನಕ ಕಾನ್ಸಂಟ್ರೇಟರ್ ಖರೀದಿಗೆ ಹೆಚ್ಚು ಧನ ಸಹಾಯ ಮಾಡುವಂತೆ ಮನವಿ ಮಾಡಿದರು.
ಕೋವಿಡ್ ಸೋಂಕಿತರಿಗೆ ಶೇಕಡಾ 80 ರಷ್ಟು ಆಮ್ಲಜನಕದ ಕೊರತೆ ಕಂಡುಬರುತ್ತಿದೆ, ಆದ್ದರಿಂದ ಆಮ್ಲಜನಕ ಅನಿವಾರ್ಯವಿರುವ ಕಾರಣ ಆಮ್ಲಜನಕದ ಸಾಂದ್ರಕಗಳ ಖರೀದಿಗೆ ತಾವೆಲ್ಲರೂ ನೆರವು ನೀಡಬೇಕು. ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಉದಾರ ಮನೋಭಾವನೆಯಿಂದ ದಾನದ ರೂಪವಾಗಿ ಹಣದ ಸಹಾಯಾಸ್ತ ಮಾಡಬೇಕು. ನಿಮ್ಮಗಳ ನೆರವಿನಿಂದ ಆಮ್ಲಜನಕದ ಸಾಂದ್ರಕಗಳನ್ನು ಖರೀದಿ ಮಾಡಿ ಪ್ರತಿ ತಾಲೂಕುಗಳಲ್ಲಿ ಹತ್ತು ಆಮ್ಲಜನಕದ ಸಾಂದ್ರಕಗಳು ಇರುವಂತೆ ಕಾಯ್ದುಕೊಳ್ಳಲಾಗುವುದು. ಜಿಲ್ಲಾಸ್ಪತ್ರೆಯಲ್ಲಿಯೂ ಆಮ್ಲಜನಕದ ಕೊರತೆಯಾಗದಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಆಮ್ಲಜನಕದ ಸಾಂದ್ರಕವೊಂದಕ್ಕೆ 75 ಸಾವಿರ ರೂ. ವೆಚ್ಚ ತಗುಲುವುದು, ಸುಮಾರು 300 ರಿಂದ 400 ಸಾಂದ್ರಕಗಳ ಖರೀದಿಗೆ ಚಿಂತನೆ ನಡೆಸಲಾಗಿದೆ, ಇದಕ್ಕೆ ಪೂರಕವಾಗಿ ಎಲ್ಲಾ ಮಾಲೀಕರು, ಕೈಗಾರಿಕೋದ್ಯಮಿಗಳು ನೀಡುತ್ತಿರುವ ನೆರವಿನಿಂದಾಗಿ ಸಾವುಗಳ ಪ್ರಮಾಣ ತಗ್ಗಿಸಬಹುದಾಗಿದೆ. ಸುಮಾರು 2 ಕೋಟಿ ರೂ. ಹಣ ದಾನದ ರೂಪವಾಗಿ ಬರುವ ನೀರಿಕ್ಷೆ ಇದೆ ಎಂದು ತಿಳಿಸಿದರು.
ಜಿಲ್ಲೆಗೆ 24 ಕೆಎಲ್ ಆಮ್ಲಜನಕ ಅವಶ್ಯಕತೆ ಇದೆ, ಈಗ ಕೇವಲ 16 ರಿಂದ 17 ಕೆಎಲ್ ಲಭ್ಯವಾಗುತ್ತಿದೆ, ಉಳಿದ 6-7 ಕೆಎಲ್ ಆಮ್ಲಜನಕ ಪೂರೈಕೆಯಾದರೆ ಜಿಲ್ಲೆಯಲ್ಲಿ 300 ಹಾಸಿಗೆಗಳನ್ನು ಆಮ್ಲಜನಕದ ಜೊತೆಗೆ ನಿರ್ವಹಣೆ ಮಾಡಬಹುದು ಎಂದರು.
ಜನತಾ ಕರ್ಫ್ಯೂಗೆ ಮುಂಚಿತವಾಗಿಯೇ ಸೋಂಕಿತರ ಸಂಖ್ಯೆ ಹೆಚ್ಚಿತ್ತು, ಸೋಂಕಿತರು ಹೋಂ ಕ್ವಾರಂಟೈನ್ ನ್ನು ಕಟ್ಟುನಿಟ್ಟಾಗಿ ಪಾಲಿಸಲಿಲ್ಲ, ಅವರು ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುತ್ತಿದ್ದ ಪರಿಣಾಮ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದೆ, ಹಾಗಾಗಿ ಸೋಂಕಿತರನ್ನು ಕೋವಿಡ್ ಕೇರ್ ಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಲಾಕ್ ಡೌನ್ ಮಾಡುವುದು ಸೂಕ್ತ
ಜನತಾ ಕರ್ಫ್ಯೂ ಸರಿಯಾಗಿ ಪಾಲನೆಯಾಗುತ್ತಿಲ್ಲ, ಸಾಮಾಜಿಕ ಅಂತರ ಕಾಪಾಡದೆ, ಮಾಸ್ಕ್ ಧರಿಸದೆ ಇರುವುದು ಎಲ್ಲೆಡೆ ಕಂಡುಬರುತ್ತಿರುವುದರಿಂದ ರಾಜ್ಯ ಸರ್ಕಾರ ಕೈಗೊಂಡಿರುವ ಲಾಕ್ ಡೌನ್ ಸೂಕ್ತವಾಗಿದೆ, ಪರಿಸ್ಥಿತಿ ಕೈ ಮೀರುತ್ತಿದೆ, ಆದ್ದರಿಂದ ಲಾಕ್ ಡೌನ್ ಅನಿವಾರ್ಯವಾಗಿದೆ ಎಂದರು.
ಜಿಲ್ಲೆಯಲ್ಲಿ ಯಾವುದೇ ರೀತಿಯ ಬೆಡ್ ಬ್ಲಾಕಿಂಗ್ ದಂಧೆ ನಡೆಯುತ್ತಿಲ್ಲ, ವಾರ್ ರೂಂ ಮೂಲಕ ಸೋಂಕಿತರಿಗೆ ಸಮಸ್ಯೆಯಾಗದಂತೆ ಹಾಸಿಗೆ ವ್ಯವಸ್ಥೆ ಮಾಡಲಾಗುತ್ತಿದೆ, ತಾಲ್ಲೂಕುಗಳಿಂದ ಬರುವ ಸೋಂಕಿತರಿಗೆ ಗಂಭೀರತೆ ಆಧಾರದ ಮೇಲೆ ಹಾಸಿಗೆ ವ್ಯವಸ್ಥೆ ಮಾಡಲಾಗುವುದು, ಖಾಸಗಿ ಆಸ್ಪತ್ರೆಗಳ ಮೇಲೆಯೂ ನಿಗಾ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿ, ಕೈಗಾರಿಕೋದ್ಯಮಗಳು ಹೆಚ್ಚು ನೆರವು ನೀಡಿದಷ್ಟೂ ಹೆಚ್ಚು ಸೋಂಕಿತರಿಗೆ ನೆರವಾಗಲಿದೆ, ಹೋಂ ಐಸೋಲೇಷನ್ ನಲ್ಲಿರುವವರಿಗೂ ಆಮ್ಲಜನಕದ ಅವಶ್ಯಕತೆಯಿದೆ, ಅಲ್ಲದೆ ಕೋವಿಡ್ ನೆಗೆಟೀವ್ ಇದ್ದು ಶ್ವಾಸಕೋಶದ ಸಮಸ್ಯೆಗಳಿರುವವರಿಗೆ ಆಮ್ಲಜನಕದ ಅವಶ್ಯಕತೆಯಿದೆ, ಹಾಗಾಗಿ ಹೆಚ್ಚು ನೆರವಿನ ಹಸ್ತ ಬೇಕಿದೆ ಎಂದು ಮನವಿ ಮಾಡಿದರು.
ದಿನದಿಂದ ದಿನಕ್ಕೆ ಹೆಚ್ಚು ಸೋಂಕಿನ ಪ್ರಕರಣ ದಾಖಲಾಗುತ್ತಿವೆ, ಆದ್ದರಿಂದ ದಾನಿಗಳು ತುರ್ತಾಗಿ ಧನ ಸಹಾಯ ಮಾಡಿ, ಆಮ್ಲಜನಕ ಸಮಸ್ಯೆ ನಿವಾರಣೆಗೆ ಸಹಕರಿಸಬೇಕು ಎಂದ ಅವರು ಜಿಲ್ಲೆಯಲ್ಲಿ ಯಾವುದೇ ರೀತಿಯಿಂದಲೂ ಹಾಸಿಗೆ ಕೊರತೆಯಾಗದಂತೆ ಸೂಕ್ತ ಕ್ರಮ ಜರುಗಿಸಲಾಗಿದೆ, ಖಾಸಗಿ ಆಸ್ಪತ್ರೆಗಳೊಡನೆ ಸಮನ್ವಯ ಸಾಧಿಸಿ ಸೋಂಕಿತರಿಗೆ ತುರ್ತು ಹಾಸಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ಸಭೆಯಲ್ಲಿ ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜ್, ಮಾಜಿ ಸಚಿವ ಸೊಗಡು ಶಿವಣ್ಣ, ಟೂಡಾ ಅಧ್ಯಕ್ಷ ನಾಗಣ್ಣ, ತುಮಕೂರು ಉಪ ವಿಭಾಗಾಧಿಕಾರಿ ಅಜಯ್, ಜಿಲ್ಲಾ ಕೈಗಾರಿಕಾ ತರಬೇತಿ ಜಂಟಿ ನಿರ್ದೇಶಕ ಪಿ.ನಾಗೇಶ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಜಂಟಿ ನಿರ್ದೇಶಕರು ಸೇರಿದಂತೆ ಜಿಲ್ಲೆಯ ಸ್ಟೋನ್ ಕ್ರಷರ್ ಮಾಲೀಕರು, ಕ್ವಾರಿ ಮಾಲೀಕರು, ವಸಂತನರಸಾಪುರ ಕೈಗಾರಿಕೋದ್ಯಮಿಗಳ ಸಂಘದ ಪದಾಧಿಕಾರಿಗಳು, ಗ್ರಾನೈಟ್ ಅಸೋಸಿಯೇಷನ್ ಪದಾಧಿಕಾರಿಗಳು, ಜಿಲ್ಲಾ ಇಂಡಸ್ಟ್ರೀಸ್ ಅಸೋಸಿಯೇಷನ್ ಪದಾಧಿಕಾರಿಗಳು ಸೇರಿದಂತೆ ಜಿಲ್ಲೆಯ ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೋದ್ಯಮದ ಮಾಲೀಕರು ಹಾಜರಿದ್ದರು.
Comments are closed.