ಬಯೋಮೆಟ್ರಿಕ್ ರದ್ದತಿಗೆ ಪಡಿತರ ಮಾಲೀಕರ ಸಂಘ ಆಗ್ರಹ

169

Get real time updates directly on you device, subscribe now.

ಕೊರಟಗೆರೆ: ಸರಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಬಯೋ ಮೆಟ್ರಿಕ್‌ ಪದ್ಧತಿಯಿಂದ ಕೊರೊನಾ ರೋಗ ಹರಡುವ ಭೀತಿ ಎದುರಾಗಿದೆ, ಸರಕಾರ ಬಯೊಮೆಟ್ರಿಕ್‌ ರದ್ದು ಪಡಿಸಿ ಓಟಿಪಿ ಅಥವಾ ಚೆಕ್ ಲಿಸ್ಟ್ ನ ಮೂಲಕ ಪಡಿತರ ಪದಾರ್ಥ ವಿತರಣೆಗೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಕೊರಟಗೆರೆ ನ್ಯಾಯಬೆಲೆ ಅಂಗಡಿಗಳ ಮಾಲೀಕರ ಸಂಘ ಶುಕ್ರವಾರ ತಹಶೀಲ್ದಾರ್‌ ಗೋವಿಂದರಾಜು ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಕೊರಟಗೆರೆ ತಾಲೂಕಿನ ನಾಲ್ಕು ಹೋಬಳಿ ವ್ಯಾಪ್ತಿಯಲ್ಲಿ 84 ಸರಕಾರಿ ನ್ಯಾಯಬೆಲೆ ಅಂಗಡಿಗಳಿವೆ, ಅಂತ್ಯೋದಯ, ಬಿಪಿಎಲ್‌ ಮತ್ತು ಎಪಿಎಲ್‌ ಸೇರಿ 40 ಸಾವಿರಕ್ಕೂ ಅಧಿಕ ಪಡಿತರ ಕಾರ್ಡುಗಳಿವೆ, ಜನರು ಪಡಿತರ ಪಡೆಯುವಾಗ ಕಡ್ಡಾಯವಾಗಿ ಬಯೋಮೆಟ್ರಿಕ್‌ ನೀಡಬೇಕಾಗಿದೆ, ಕೊರೊನಾ ರೋಗದ ಸಾಮಾಜಿಕ ಅಂತರ ಮತ್ತು ಹರಡುವಿಕೆ ತಡೆಯಲು ನಮಗೆ ಕಷ್ಟಸಾಧ್ಯವಾಗಿದೆ. ತಕ್ಷಣ ಬಯೋಮೆಟ್ರಿಕ್‌ ರದ್ದು ಪಡಿಸುವಂತೆ ರಾಜ್ಯಸರಕಾರಕ್ಕೆ ಒತ್ತಾಯ ಮಾಡಿದರು.
ಕೊರಟಗೆರೆ ಸರಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಚಿಕ್ಕರಂಗಯ್ಯ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಕೊರೊನಾ ರೋಗದ ಸೋಂಕಿನಿಂದ 83 ಜನ ನ್ಯಾಯಬೆಲೆ ಅಂಗಡಿ ಮಾಲೀಕರು ಮೃತಪಟ್ಟಿದ್ದಾರೆ. ಕೊರೊನಾ ಲಾಕ್ ಡೌನ್‌ ವೇಳೆ ಕರ್ನಾಟಕ ಸರಕಾರ ಹಿಂದಿನ ವರ್ಷ ಬಯೋಮೆಟ್ರಿಕ್‌ ನಿಲ್ಲಿಸಿ ಓಟಿಪಿಗೆ ಅವಕಾಶ ಕಲ್ಪಿಸಿತ್ತು, ಅದೇ ರೀತಿ ಪ್ರಸ್ತುತ ವರ್ಷವು ಓಟಿಪಿಗೆ ಅವಕಾಶ ಕಲ್ಪಿಸಬೇಕಾಗಿದೆ ಎಂದು ಆಗ್ರಹ ಮಾಡಿದರು.
ದಾಸರಹಳ್ಳಿ ಸರಕಾರಿ ನ್ಯಾಯಬೆಲೆ ಅಂಗಡಿ ಮಾಲೀಕ ರಮೇಶ್‌ ಮಾತನಾಡಿ, ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸರಕಾರ ಯಾವುದೇ ಭದ್ರತೆ ಕಲ್ಪಿಸಿಲ್ಲ, ಕೊರಟಗೆರೆ ತಾಲೂಕಿನ 84 ಪಡಿತರ ಕೇಂದ್ರದಲ್ಲಿಯು ಕನಿಷ್ಟ 700 ರಿಂದ 800 ಪಡಿತರ ಕಾರ್ಡುಗಳಿವೆ, ಗ್ರಾಮೀಣ ಜನತೆಯ ನೇರವಾಗಿ ಸಂಪರ್ಕ ನಮಗೆ ಇರುತ್ತದೆ. ನಮಗೆ ಆರೋಗ್ಯ ಭದ್ರತೆಯ ಜೊತೆ ಸರಕಾರದ ವಿಶೇಷ ಸೌಲಭ್ಯ ಘೋಷಣೆ ಮಾಡಬೇಕು ಎಂದು ಹೇಳಿದರು.
ಕೊರಟಗೆರೆ ತಾಹಶೀಲ್ದಾರ್‌ ಗೋವಿಂದರಾಜು ಮಾತನಾಡಿ, ಸರಕಾರಿ ನ್ಯಾಯಬೆಲೆ ಅಂಗಡಿಯ ಮಾಲೀಕರು ಸಲ್ಲಿಸಿರುವ ಮನವಿಯನ್ನು ನಾನು ಕೂಡಲೇ ಜಿಲ್ಲಾಧಿಕಾರಿ ಮತ್ತು ಸರಕಾರಕ್ಕೆ ಪತ್ರ ಬರೆಯುತ್ತೇನೆ, ಜನತೆ ಪಡಿತರ ಪಡೆಯುವಾಗ ಸಾಮಾಜಿಕ ಅಂತರ ಮತ್ತು ಕೊರೊನಾ ರೊಗ ಹರಡುವಿಕೆ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಮನವಿ ಸಂದರ್ಭದಲ್ಲಿ ಕೊರಟಗೆರೆ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ನಿರ್ದೇಶಕ ದಾಸರಹಳ್ಳಿ ರಮೇಶ್‌, ರಂಗರಾಜು, ನಾಗೇಶ್‌, ಆನಂದ್‌, ಸೋಮಶೇಖರ್‌, ರಾಮಚಂದ್ರಪ್ಪ, ಶಿವಣ್ಣ, ರಂಗಧಾಮಯ್ಯ, ನಂದೀಶ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!