ಮಧುಗಿರಿ: ಕೇಂದ್ರ ಮತ್ತು ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಶಾಪಗ್ರಸ್ಥ ಸರ್ಕಾರ, ಇವರು ಮಾಡುತ್ತಿರುವ ತಾರತಮ್ಯವನ್ನು ಖಂಡಿಸುತ್ತೇನೆ ಎಂದು ಮಾಜಿ ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಇರುವ ಕಾಂಗ್ರೆಸ್ ಸಮಿತಿ ಕಚೇರಿ ಮುಂಭಾಗ ತಾಲ್ಲೂಕಿನಲ್ಲಿರುವ ಸರ್ಕಾರಿ ಆಸ್ಪತ್ರೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಮತ್ತು ಆರೋಗ್ಯ ಇಲಾಖೆಯವರಿಗೆ ಕೊರೊನ ಎದುರಿಸಲು ಬೇಕಾಗಿರುವ ಸಲಕರಣೆ ಮತ್ತು 2 ಆ್ಯಂಬುಲೆನ್ಸ್ ಗಳನ್ನು ತಾಲ್ಲೂಕು ಆಡಳಿತಕ್ಕೆ ವಿತರಿಸಿದ ನಂತರ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಇಳಿವಯಸ್ಸಿನಲ್ಲಿ ನಿರಂತರ ಸಭೆಗಳನ್ನು ನಡೆಸುತ್ತಿದ್ದಾರೆ, ಅವರನ್ನು ಟೀಕಿಸುವುದಿಲ್ಲ, ಆಡಳಿತದ ಮೇಲೆ ಹಿಡಿತ ಇಲ್ಲದಂತೆ ಕಾಣುತ್ತಿದೆ, ದಿಕ್ಕುದೆಸೆಯಿಲ್ಲದೆ ಇಂತಹ ಸರ್ಕಾರ ಕೊನೆಗಾಣಬೇಕು, ಬಿಎಸ್‌ವೈ ಅವರ ಅಸಹಾಯಕತೆಗೆ ಅವರು ಅಣ್ಣಮ್ಮ ದೇವಿಯ ಮೊರೆ ಹೋಗಿರುವುದು ಸಾಕ್ಷಿ ಎಂದರು.
ಸಿಎಂ ಸಿದ್ದರಾಮಯ್ಯ ಅವರು ಜಾರಿಗೆ ತಂದ ಅನ್ನಭಾಗ್ಯ ಯೋಜನೆಯು ಇಂಥ ಕೋವಿಡ್ ಸಂಕಷ್ಟದಲ್ಲಿ ಎರಡು ಕೆಜಿ ಅಕ್ಕಿ ನೀಡುತ್ತಿರುವುದು ಬಡವರ ಅನ್ನ ಕಿತ್ತುಕೊಳ್ಳುವುದರಿಂದ ಶಾಪ ತಟ್ಟದೆ ಇರುವುದಿಲ್ಲ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಹತ್ತು ಕೆಜಿ ಅಕ್ಕಿ ವಿತರಿಸಲಾಗುವುದು ಎಂದರು.
ಸಾರ್ವಜನಿಕರು ತಮ್ಮ ನಡವಳಿಕೆಯಿಂದ ಮಾತ್ರ ಕೊರೊನಾ ವೈರಸ್ ಎಂಬ ಮಹಾಮಾರಿ ರೋಗ ಹರಡದಂತೆ ತಡೆಯಬಹುದು, ನಾವುಗಳು ಉಳಿಯಬೇಕಾದರೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ದೈಹಿಕ ಅಂತರವನ್ನು ಸದಾ ಕಾಲ ಪಾಲಿಸಬೇಕು, ಇದರಿಂದ ಶೇ.90 ರಷ್ಟು ವೈರಸ್ ಹರಡದಂತೆ ತಡೆಗಟ್ಟಬಹುದು, ಸರ್ಕಾರವೇ ಎಲ್ಲಾ ಮಾಡಬೇಕೆಂಬ ನಿರೀಕ್ಷೆ ಇಟ್ಟುಕೊಳ್ಳದೆ ತೀವ್ರ ರೋಗಕ್ಕೆ ತುತ್ತಾಗಿರುವವರು ಮಾತ್ರ ಆಸ್ಪತ್ರೆಗಳಿಗೆ ದಾಖಲಾಗಿ ಬೆಡ್ ಗಳನ್ನು ಹೆಚ್ಚಿಸುವುದರಿಂದ ಯಾವುದೇ ಪ್ರಯೋಜನವಿಲ್ಲ, ಚಿಕಿತ್ಸೆ ನೀಡಲು ಅಗತ್ಯ ವೈದ್ಯಕೀಯ ಸಿಬ್ಬಂದಿ ಕೊರತೆ ಎದುರಾಗುತ್ತದೆ, ಸೋಂಕಿತರು ಹೋಂ ಕ್ವಾರಂಟೈನ್ ಮೂಲಕ ಈ ವೈರಸ್ ಹರಡದಂತೆ ತಡೆಗಟ್ಟಬಹುದು, ಸಾವಿನ ಪ್ರಮಾಣ ತಗ್ಗಿಸಲು ಸಾಧ್ಯವೆಂದು ಅಭಿಮತ ವ್ಯಕ್ತಪಡಿಸಿದರು.
ತಾಲ್ಲೂಕಿನಲ್ಲಿ ಮಾಹಿತಿ ಪ್ರಕಾರ ಇಲ್ಲಿಯವರೆಗೆ 200ಕ್ಕೂ ಹೆಚ್ಚು ಸೋಂಕಿತರು ಮೃತಪಟ್ಟಿದ್ದಾರೆ, ಬಹುತೇಕ ಸಾರ್ವಜನಿಕ ಜೀವನದಲ್ಲಿರುವವರು ಸಾವನ್ನಪ್ಪಿದ್ದು, ಇವರೆಲ್ಲರ ಆತ್ಮಕ್ಕೆ ಶಾಂತಿಕೋರಿ ಇವರ ಅಗಲಿಕೆ ಅವರ ಕುಟುಂಬ ವರ್ಗದವರಿಗೆ ಶಕ್ತಿ ತುಂಬುವುದಕ್ಕೆ ದೇವರು ದಯಪಾಲಿಸಲಿ ಎಂದರು.
ಕೊರೊನ ಮೊದಲ ಅಲೆಗಿಂತ ಭೀಕರವಾಗಿ ಎರಡನೆ ಅಲೆ ತೀವ್ರಗೊಂಡು ಯುವ ಸಮುದಾಯ ಹೆಚ್ಚು ಮೃತ ಪಡುತ್ತಿದ್ದಾರೆ, ಇನ್ನೂ ಮುಂದಿನ ದಿನಗಳಲ್ಲಿ ತೀವ್ರತರದ ಆಘಾತ ಉಂಟು ಮಾಡುತ್ತದೆಂದು ತಜ್ಞರ ಮತ್ತು ಮಾಧ್ಯಮಗಳ ವರದಿಗಳು ಬೆಚ್ಚಿ ಬೀಳಿಸುವಂತ್ತಿದೆಯಾದರೂ ಜನರು ಧೈರ್ಯ ಗುಂದದೆ ಲಸಿಕೆ ಹಾಕಿಸಿಕೊಳ್ಳಿ, ಲಸಿಕೆ ಪೇಟೆಂಟ್ ತೆಗೆದು ಹಾಕಿದ್ದು ಉತ್ಪಾದನೆ ಹೆಚ್ಚಲಿದೆ, ಔಷಧಿ ಮತ್ತು ಲಸಿಕೆ ಬಗ್ಗೆ ಭಯ ಬೇಡವೆಂದರು.
ಪ್ರಸ್ತುತ ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ವೈದ್ಯರು ಕಂದಾಯ ಇಲಾಖೆಯವರು ಆರೋಗ್ಯ ಇಲಾಖೆಯವರು, ಪೊಲೀಸರು, ಪೌರಕಾರ್ಮಿಕರು ತಮ್ಮ ಜೀವ ಪಣಕ್ಕಿಟ್ಟು ಬೇರೆಯವರ ಜೀವ ಉಳಿಸಲು ಹಗಲಿರುಳು ಸೇವೆ ಸಲ್ಲಿಸುತ್ತಿದ್ದು, ಇವರ ಅವಿರತ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಲಾಕ್ ಡೌನ್ ಬಗ್ಗೆ ಗೊಂದಲ: ರಾಜ್ಯದ ಸಿಎಂ ಮತ್ತು ಸಿಎಸ್ ಗಳ ದ್ವಂದ್ವ ನಿಲುವುಗಳ ಹೇಳಿಕೆಗಳು ಲಾಕ್ ಡೌನ್ ಬಗ್ಗೆ ನಾಗರೀಕರಲ್ಲಿ ಗೊಂದಲ ಉಂಟಾಗಿದೆ, ಭಾಗಶಃ ಅಥವಾ ಪೂರ್ಣ ಲಾಕ್ ಡೌನ್ ಎಂಬುದರ ಬಗ್ಗೆ ಗೊಂದಲ ನಿವಾರಣೆಯಾಗಬೇಕೆಂದರು.
ನ್ಯಾಯಾಲಯದ ತೀರ್ಪಿಗೆ ಸ್ವಾಗತ: ರಾಜ್ಯದ ಜನತೆಯ ಪರವಾಗಿ ಸುಪ್ರೀಂಕೋರ್ಟ್ ಆಕ್ಸಿಜನ್ ವಿಚಾರವಾಗಿ ನೀಡಿದ್ದ ತೀರ್ಪು ಎತ್ತಿ ಹಿಡಿದಿರುವುದು ನ್ಯಾಯಲಯದ ಬಗ್ಗೆ ನಂಬಿಕೆ ಹೆಚ್ಚಿಸಿದೆ. ಅದೇ ನಮೋ ಗುಜರಾತ್ ರಾಜ್ಯಕ್ಕೆ ಮಾತ್ರ ಆಕ್ಸಿಜನ್ ಮತ್ತು ಔಷಧಿಗಳನ್ನು ವಿಶೇಷವಾಗಿ ನೀಡುತ್ತಾರೆ, ಇದು ಸರಿಯೇ ಎಂದರು.
ಮಧುಗಿರಿ ಬ್ಲಾಕ್ ಕಾಂಗ್ರೆಸ್, ಕೆ.ಎನ್.ರಾಜಣ್ಣ ಅಭಿಮಾನಿ ಬಳಗ ಮತ್ತು ಆರ್.ರಾಜೇಂದ್ರ ಅಭಿಮಾನಿ ಬಳಗದ ವತಿಯಿಂದ ಸರ್ಕಾರಿ ಆಸ್ಪತ್ರೆಗೆ ಹತ್ತು ಆಕ್ಸಿಜನ್ ಸಿಲಿಂಡರ್, ಪಿಪಿಇ ಕಿಟ್- 100, ಪೊಲೀಸ್ ಇಲಾಖೆಗೆ ಸ್ಯಾನಿಟೈಸರ್, ಫೇಸ್ ಶೀಲ್ಡ್, ಕಂದಾಯ ಇಲಾಖೆಗೆ ಪಿಪಿಇ ಕಿಟ್ 800, ವಾಟರ್ ಫಿಲ್ಟರ್- 2, ಬೆಡ್ ಶೀಟ್ ನೂರು, ಆರೋಗ್ಯ ಇಲಾಖೆಗೆ 2 ಆ್ಯಂಬುಲೆನ್ಸ್ ನ್ನು ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿತರಿಸಿದರು.
ಈ ವೇಳೆ ಕ್ರಿಬ್ಕೊ ನಿರ್ದೇಶಕ ಆರ್.ರಾಜೇಂದ್ರ, ಉಪವಿಭಾಗಾಧಿಕಾರಿ ಸೋಮಪ್ಪಕಡಕೊಳ, ತಹಶೀಲ್ದಾರ್ ವೈ.ರವಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಮೇಶ್ ಬಾಬು, ಡಿವೈಎಸ್ಪಿ ಕೆ.ಜಿ.ರಾಮಕೃಷ್ಣ, ಸಿಪಿಐ ಎಂ.ಎಸ್.ಸರ್ದಾರ್, ಪಿಎಸೈ ಮಂಗಳಗೌರಮ್ಮ, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಗಂಗಾಧರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು, ಪುರಸಭಾ ಮಾಜಿ ಅಧ್ಯಕ್ಷರಾದ ಎಂ.ಕೆ.ನಂಜುಂಡಯ್ಯ, ಎನ್.ಗಂಗಣ್ಣ, ಮಹಮ್ಮದ್ ಅಯೂಬ್, ಯುವ ಕಾಂಗ್ರೆಸ್ ಅಧ್ಯಕ್ಷ ಎಸ್‌ಡಿಕೆ ವೆಂಕಟೇಶ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸಿದ್ಧಾಪುರ ರಂಗಶಾಮಣ್ಣ, ಬಾಬಾಪಕೃದ್ದೀನ್ ಇದ್ದರು.
Comments are closed.