ಕುಣಿಗಲ್: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾಂಗ್ರೆಸ್ ಪಕ್ಷದವರಿಗೆ ಮಾತ್ರ ಕೊವಿಡ್ ಚಿಕಿತ್ಸೆ ಸಿಗುತ್ತಿದೆ, ಬೇರೆಯವರು ಸಾಮಾನ್ಯ ಜನರು ಪರದಾಡುವಂತಾಗಿದೆ, ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಕೂಡಲೆ ಗಮನಹರಿಸಿ ವ್ಯವಸ್ಥೆ ಸರಿಪಡಿಸಬೇಕೆಂದು ವಕೀಲ ಕೆ.ಬಿ.ಗಂಗಾಧರ ಆಗ್ರಹಿಸಿದರು.
ಶನಿವಾರ ಸಂಜೆ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆಸ್ಪತ್ರೆಯ ಕೊವಿಡ್ ವಾರ್ಡ್ ನಲ್ಲಿ ಶಾಸಕ ಡಾ.ರಂಗನಾಥ್ ಅವರ ಆಪ್ತ ಸಹಾಯಕ ಚಂದ್ರು ಎಂಬಾತ ಯಾವುದೇ ಪಿಪಿಇ ಕಿಟ್ ಧರಿಸದೆ ಕಾರ್ಯ ನಿರ್ವಹಿಸುತ್ತಾರೆ. ದಿನಾಲೂ ಕೊವಿಡ್ ವಾರ್ಡ್ ನಿಂದ ಹೊರಗೂ ಒಳಗೂ ಓಡಾಡುತ್ತಾ ಸಾವಿರಾರು ಜನರಿಗೆ ಸೋಂಕು ಹತ್ತಿಸಲು ಕಾರಣವಾಗಿದ್ದಾರೆ, ಸರ್ಕಾರವೆ ರಚಿಸಿರುವ ನಿಯಮಗಳ ಪ್ರಕಾರ ಕೊವಿಡ್ ವಾರ್ಡ್ ನಲ್ಲಿ ಕೆಲಸ ಮಾಡಿದ ಮೇಲೆ ನಾಲ್ಕುದಿನ ಕ್ವಾರಂಟೈನ್ ಆಗಬೇಕು, ಆದರೆ ಆಸ್ಪತ್ರೆಯ ಆಡಳಿತ ಸಿಬ್ಬಂದಿ ಯಾವುದೇ ಗಮನ ಹರಿಸದೆ ಶಾಸಕರ ಪಿಎ ಸೂಕ್ತ ಸುರಕ್ಷತಾ ಕ್ರಮಕೈಗೊಳ್ಳದೆ ಓಡಾಡಲು ಬಿಟ್ಟಿರುವ ಮೂಲಕ ಕೊವಿಡ್ ನಿಯಮಾವಳಿ ಉಲ್ಲಂಘಿಸಿದ್ದಾರೆ.
ಸೋಂಕಿತರನ್ನು ಆಸ್ಪತ್ರೆಗೆ ಕರೆತಂದರೆ ವೈದ್ಯರೆ ನೇರವಾಗಿ ಶಾಸಕರ ಪಿಎ ಅವರನ್ನು ಕಾಣಿ ಎನ್ನುತ್ತಾರೆ, ಸರ್ಕಾರಿ ಆಸ್ಪತ್ರೆಯಲ್ಲಿ ಸೋಂಕಿತರ ದಾಖಲಿಸಲು ಶಾಸಕರ ಪಿಎ ಯನ್ನು ಯಾಕೆ ಕಾಣಬೇಕು. ಇದನ್ನು ಪ್ರಶ್ನೆ ಮಾಡಿದರೆ ನಾವು ಕೊರೊನ ವಾರಿಯರ್, ನಮಗೆ ಬೆದರಿಕೆ ಹಾಕುತ್ತಿದ್ದೀರಾ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿ ಜನಸಾಮಾನ್ಯರು ಪ್ರಶ್ನಿಸುವ ಹಕ್ಕನ್ನೆ ಕಸಿದುಕೊಂಡಿದ್ದಾರೆ, ಕೊವಿಡ್ ವಾರ್ಡ್ ನಲ್ಲಿ ಸೋಂಕಿತರ ಜೊತೆಯಲ್ಲಿ ಅವರ ಕುಟುಂಬದ ಮೂರು, ನಾಲ್ಕು ಮಂದಿ ಇರುತ್ತಾರೆ, ಇದರಿಂದ ಸೋಂಕು ಪ್ರಸರಣ ಹೆಚ್ಚಾಗುತ್ತಿದೆ, ಸೋಂಕಿತರಿಗೆ ಬೆಡ್ ಸಿಗಲು, ಆಮ್ಲಜನಕ ಸಿಗಲು ಶಾಸಕರು, ಪಿಎ ಸೇರಿದಂತೆ ಪ್ರಭಾವಿಗಳ ಒತ್ತಡ ಇರಬೇಕು, ಇಲ್ಲವಾದಲ್ಲಿ ಯಾವುದೇ ಸೌಲಭ್ಯ ಸಿಗಲ್ಲ, ಜನಸಾಮಾನ್ಯರಿಗೆ ನಿಯಮಾನುಸಾರ ಚಿಕಿತ್ಸೆ ಸಿಗುತ್ತಿಲ್ಲ, ಜಿಲ್ಲಾ ಆರೋಗ್ಯಾಧಿಕಾರಿಗಳು ಆಸ್ಪತ್ರೆ ವ್ಯವಸ್ಥೆ ಸುಧಾರಿಸಲು ಸಮಿತಿ ರಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು, ಕೊವಿಡ್ ವಾರ್ಡ್ ನಲ್ಲಿ ಅನಧಿಕೃತ ವ್ಯಕ್ತಿಗಳ ಪ್ರವೇಶ ನಿಷೇಧಿಸುವ ಮೂಲಕ ಸೋಂಕು ಹರಡುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು, ಕೊವಿಡ್ ನಿಯಮ ಉಲ್ಲಂಘಿಸಿ ಸೋಂಕು ಹೆಚ್ಚಳಕ್ಕೆ ಕಾರಣವಾಗಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಶಾಸಕರ ಪಿಎ ಮೇಲೆ ಕೇಸ್ ದಾಖಲು
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಬೆಡ್ ಕೊಡಿಸಲು ಶಾಸಕರ ಆಪ್ತ ಸಹಾಯಕ ಮತ್ತು ಆತನ ಸ್ನೇಹಿತರಿಂದ ಹಣಕ್ಕೆ ಬೇಡಿಕೆ, ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದು ಹಲ್ಲೆ ಮಾಡಿವರ ಮೇಲೆ ಕ್ರಮ ಕೈಗೊಳ್ಳುವಂತೆ ಬೇಗೂರು ಗ್ರಾಮದ ಶಿವಣ್ಣ ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಶುಕ್ರವಾರ ಮಧ್ಯಾಹ್ನ ತಮ್ಮ ಸಂಬಂಧಿಕರೊಬ್ಬರಿಗೆ ಕೊರೊನ ಸೋಂಕು ತಗುಲಿದ್ದು ಚಿಕಿತ್ಸೆಗೆ ಪಟ್ಟಣದ ಆಸ್ಪತ್ರೆಗೆ ಬಂದಾಗ ಆಸ್ಪತ್ರೆ ಬಳಿ ಇದ್ದ ಶಾಸಕರ ಆಪ್ತ ಸಹಾಯಕ ಚಂದ್ರಶೇಖರ, ಸಹಚರ ನಾಗೇಶ ಏಕೆ ಇಲ್ಲಿಗೆ ಬಂದಿದ್ದೀರಾ ಎಂದು ಪ್ರಶ್ನೆ ಮಾಡಿದಾಗ, ನಮ್ಮ ಸಂಬಂಧಿಕರಿಗೆ ಸೋಂಕು ತಗುಲಿದ್ದು ಬೆಡ್ ವ್ಯವಸ್ಥೆ ಮಾಡಲು ಬಂದಿದ್ದೇನೆ ಎಂದು ಉತ್ತರಿಸಿದಾಗ ಇಬ್ಬರೂ ಸೇರಿ ಐದು ಸಾವಿರ ನೀಡಿದರೆ ಬೆಡ್ ಕೊಡಿಸುವುದಾಗಿ ತಿಳಿಸಿದ್ದು, ಇದನ್ನು ಖಂಡಿಸಿ ಸರ್ಕಾರಿ ಆಸ್ಪತ್ರೆ ನಾನೇಕೆ ಐದು ಸಾವಿರ ಕೊಡಬೇಕು ಎಂದು ಆಕ್ಷೇಪಿಸಿದಾಗ, ಇವರಿಬ್ಬರು ನನ್ನ ಮೇಲೆ ಮುಗಿಬಿದ್ದು, ಇವರ ಜೊತೆಯಲ್ಲಿದ್ದ ಚೌಡನಕುಪ್ಪೆ ಚಂದ್ರ, ಸಿಂಗೋನಹಳ್ಳಿ ಉಮೇಶ್ ಇತರರು ಸೇರಿಕೊಂಡು ನನ್ನ ಮೇಲೆ ಹಲ್ಲೆ ಮಾಡಿ ರಕ್ತಗಾಯ ಮಾಡಿ ಕೆಳಕ್ಕೆ ಕೆಡವಿದರು, ಇದೆ ವೇಳೆ ಆಸ್ಪತ್ರೆಗೆ ಬಂದಿದ್ದ ದಿಲೀಪ್‌ಗೌಡ, ಸಂದೀಪ್ ಬಿಡಿಸಿ ಕಳಿಸಿದರು. ಬೆಡ್ ಕೊಡಿಸಲು ಲಂಚ ಕೇಳಿ, ಹಲ್ಲೆ ನಡೆಸಿದ ಶಾಸಕರ ಆಪ್ತ ಮತ್ತು ಆತನ ಸ್ನೇಹಿತರ ಮೇಲೆ ಕ್ರಮ ಕೈಗೊಳ್ಳುವಂತೆ ದೂರು ನೀಡಿದ ಮೇರೆಗೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.
Comments are closed.