ಮನೆ ಬಾಗಿಲಿಗೆ ಹೋಗಿ ಹೆಸರು ನಮೂದಿಸಿ: ಸಚಿವ ಮಾಧುಸ್ವಾಮಿ

ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆ ಸಿಗ್ಬೇಕು

133

Get real time updates directly on you device, subscribe now.

ಗುಬ್ಬಿ: ಕೊರೊನಾ ಲಸಿಕೆಯನ್ನು ಆಪ್ ಮೂಲಕ ದೃಢೀಕರಿಸಬೇಕಾಗಿರುವುದರಿಂದ ಆಯಾಯ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಮನೆ ಬಾಗಿಲಿಗೆ ಹೋಗಿ ಪ್ರತಿಯೊಬ್ಬರ ಹೆಸರುಗಳನ್ನ ನಮೂದಿಸಿ ಎಲ್ಲರಿಗೂ ಲಸಿಕೆ ಸಿಗುವಂತೆ ಮಾಡಬೇಕು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ನಡೆದ ಕೊರೊನಾ ನಿಯಂತ್ರಣ ಎರಡನೆ ಸಭೆಯಲ್ಲಿ ಮಾತನಾಡಿ, ಗುಬ್ಬಿ ಮತ್ತು ಶಿರಾದಲ್ಲಿ ಅತ್ಯಧಿಕ ಕೊರೊನಾ ಕೇಸ್ ಬರುತ್ತಿದ್ದು ಅವುಗಳನ್ನು ನಿಯಂತ್ರಣ ಮಾಡಲೇಬೇಕಾದ ಅನಿವಾರ್ಯತೆ ಪ್ರತಿಯೊಬ್ಬರ ಮೇಲಿದೆ, ಸೋಂಕಿತರು ಎಲ್ಲಿಯೇ ಕಂಡು ಬಂದ ಕೂಡಲೇ ಅವರ ಪ್ರಾಥಮಿಕ ಸಂಪರ್ಕದಲ್ಲಿರುವವರ ಟೆಸ್ಟ್ ನ್ನು ಕಡ್ಡಾಯವಾಗಿ ಮಾಡಿಸಲೇಬೇಕು ಮತ್ತು ಆದಷ್ಟು ಕೋವಿಡ್ ಕೇರ್ ಸೆಂಟರ್ ಗೆ ಸೋಂಕಿತರನ್ನು ಸ್ಥಳಾಂತರ ಮಾಡುವ ಕೆಲಸ ಮಾಡಲೇಬೇಕು, ತಾಲೂಕಿನಲ್ಲಿ ಎರಡನೇ ಬಾರಿಗೆ ಕೊರೊನಾ ನಿಯಂತ್ರಣ ಸಭೆ ನಡೆಯುತ್ತಿದ್ದರೂ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೆ ಕೇವಲ ಗಣಿತದ ಲೆಕ್ಕವನ್ನು ನನ್ನ ಮುಂದೆ ಹೇಳುತ್ತಿದ್ದೀರಿ, ಇದು ಸರಿಯಲ್ಲ, ಕೊರೊನ ನಿಯಂತ್ರಣವಾಗಬೇಕು ಎಂದರೆ ತಾವು ನಿಷ್ಠೆಯಿಂದ ಕೆಲಸ ಮಾಡಬೇಕು ಎಂದರು.
ಗುಬ್ಬಿಯಲ್ಲಿ ಪಾಸಿಟಿವ್ ಪ್ರಕರಣ ಹೆಚ್ಚುತ್ತಿರುವುದರಿಂದ ಗುಬ್ಬಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ 100 ಹಾಸಿಗೆಯ ಬೆಡ್ ಗಳನ್ನು ಸಿದ್ಧಮಾಡಬೇಕು, ಯಾವುದೇ ಕಾರಣಕ್ಕೂ ಅಗತ್ಯವಿಲ್ಲದೆ ಇರುವಂಥವರಿಗೆ ಆಕ್ಸಿಜನ್ ನೀಡುವ ಕೆಲಸ ಮಾಡದೆ ಅವಶ್ಯಕತೆ ಇರುವವರಿಗೆ ಮಾತ್ರ ನೀಡಬೇಕು, ಇಲ್ಲಿಗೆ ಬರುವ ಸೋಂಕಿತರನ್ನು ತುಮಕೂರಿಗೆ ಕಳುಹಿಸುತ್ತಿರುವ ಸುದ್ದಿ ನನಗೆ ಬರುತ್ತಿದ್ದು ಇನ್ನು ಮುಂದೆ ಇಂತಹ ಕೆಲಸ ನಡೆಯಬಾರದು ಎಂದು ವೈದ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಪ್ರತಿ ಮನೆಗಳಿಗೆ ತೆರಳಿ ಅಲ್ಲಿನ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯಬೇಕು, ಯಾವುದೇ ಸೋಂಕಿತರು ಕಂಡು ಬಂದಲ್ಲಿ ಅವರ ಬಗ್ಗೆ ಹೆಚ್ಚಿನ ಗಮನ ಹರಿಸಿ ಅವರಿಗೆ ಚಿಕಿತ್ಸೆ ಕೊಡುವ ಕೆಲಸ ಮಾಡಬೇಕಾಗಿದೆ, ಗುಬ್ಬಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಸರಿಯಾಗಿ ಕೆಲಸ ನಿರ್ವಹಣೆ ಮಾಡುತ್ತಿಲ್ಲ, ಇಲ್ಲಿ ಬೆಡ್ ಇಲ್ಲ ಎಂದು ಬಂದವರಿಗೆ ತುಮಕೂರಿನಲ್ಲಿ ಚಿಕಿತ್ಸೆ ಕೊಡಿಸುವ ಕೆಲಸ ಮಾಡುತ್ತಿದ್ದೇನೆ, ಇದು ಸರಿಯಲ್ಲ, ನಿಮ್ಮ ಕೆಲಸವನ್ನು ನೀವು ಸರಿಯಾಗಿ ನಿರ್ವಹಣೆ ಮಾಡದೆ ಇರುವುದರಿಂದ ಇಲ್ಲಿ ಸೋಂಕಿತರ ಪಟ್ಟಿ ಬೆಳೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ ಗ್ರಾಮಗಳಲ್ಲಿ ಇರುವ ಸೋಂಕಿತರು ಯಾವುದೇ ಕಾರಣಕ್ಕೂ ಮನೆಯಲ್ಲಿ ಇರದೆ ಅಡ್ಡಾದಿಡ್ಡಿ ಓಡಾಡುತ್ತಾರೆ, ಹಾಗಾಗಿ ಹೋಬಳಿಗೊಂದು ಕೊರೊನಾ ಕೇರ್ ಸೆಂಟರ್ ಮಾಡಿ ಅಲ್ಲಿಯೇ ಅವರನ್ನು ಇರಿಸುವ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಎಸ್ಪಿ ವಂಶಿಕೃಷ್ಣ, ಜಿಲ್ಲಾ ಆರೋಗ್ಯಾಧಿಕಾರಿ ನಾಗೇಂದ್ರಪ್ಪ, ಸಿಇಒ ವಿದ್ಯಾಕುಮಾರಿ, ತಹಶೀಲ್ದಾರ್ ಡಾ.ಪ್ರದೀಪ್ ಕುಮಾರ್, ಡಿವೈಎಸ್ಪಿ ಕುಮಾರಪ್ಪ, ಇಓ ನರಸಿಂಹಯ್ಯ, ತಾಲೂಕು ಆರೋಗ್ಯಾಧಿಕಾರಿ ಡಾ.ಬಿಂದು ಮಾಧವ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!