ತುಮಕೂರು: ನಾನು ಬಂದಿರುವ ದೆಸೆಯಿಂದ ರಸ್ತೆಗಳೆಲ್ಲಾ ಖಾಲಿ ಖಾಲಿ, ಅಂಗಡಿಗಳು ಬಂದ್, ಎಲ್ಲಾ ಚಟುವಟಿಕೆಗಳು ಕ್ಲೋಸ್.. ಜನ ಮನೆ ಬಿಟ್ಟು ಬರುತ್ತಿಲ್ಲ.. ನನ್ನ ತಾಕತ್ತೇ ಅಂಥದ್ದು ಎಂಬಂತೆ ಕೊರೊನಾ ಗೇಲಿ ಮಾಡುವಂತಿತ್ತು ನಗರಗಳ ಪರಿಸ್ಥಿತಿ.
ಹೌದು, ಕೊರೊನಾ ಮಾರಿಯ ಅಬ್ಬರಕ್ಕೆ ಜನ ತತ್ತರಿಸಿ ಹೋಗಿದ್ದು, 2ನೇ ಅಲೆ ಭೀಕರತೆಗೆ ಕಡಿವಾಣ ಹಾಕಲು ಮೇ 10 ರಿಂದ ಸರ್ಕಾರ ರಾಜ್ಯಾದ್ಯಂತ ಸೆಮಿ ಲಾಕ್ ಡೌನ್ ಘೋಷಣೆ ಮಾಡಿತ್ತು, ತುಮಕೂರು ನಗರದಲ್ಲೂ ಪೊಲೀಸರು ಕಟ್ಟುನಿಟ್ಟಾಗಿ ಲಾಕ್ ಡೌನ್ ಜಾರಿಗೆ ಮುಂದಾದ ಪರಿಣಾಮ ಸಾರ್ವಜನಿಕರ ಅನಗತ್ಯ ಓಡಾಟಕ್ಕೆ ಬ್ರೇಕ್ ಬಿದ್ದಿತ್ತು, ರಸ್ತೆಗಳು ಖಾಲಿ ಖಾಲಿ ಕಾಣುತ್ತಿದ್ದವು, ಅಲ್ಲದೆ ಅನಗತ್ಯವಾಗಿ ರಸ್ತೆಗಳಿದವರಿಗೆ ಪೊಲೀಸರು ಕೇಸ್ ಜಡಿಯುತ್ತಿದ್ದ ದೃಶ್ಯವೂ ಕಂಡು ಬಂತು.
ನಗರದಲ್ಲಿ ಸೋಮವಾರ ಬೆಳಗ್ಗೆ ಪೊಲೀಸರು ವಾಹನಗಳ ತಪಾಸಣೆ ನಡೆಸಿ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಿದರು. ಸಕಾರಣವಿಲ್ಲದೆ ಸಂಚರಿಸುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆದುಕೊಂಡರು, ನಗರ ಪ್ರವೇಶಿಸುವ ಹಾಗೂ ನಗರದಿಂದ ಹೊರಗೆ ಹೋಗುವ ವಾಹನಗಳನ್ನು ತಪಾಸಣೆ ಮಾಡಲಾಯಿತು.
ಇನ್ನು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಂತರ್ ಜಿಲ್ಲೆಗಳನ್ನು ಸಂಪರ್ಕಿಸುವ ಸ್ಥಳಗಳಲ್ಲಿ ಬ್ಯಾರಿಕೇಡ್ ಗಳನ್ನು ನಿರ್ಮಿಸಿದ್ದು, ಹೊರ ಜಿಲ್ಲೆಯ ವಾಹನಗಳು ಜಿಲ್ಲೆ ಪ್ರವೇಶಿಸದಂತೆ ತಡೆಯಲಾಗಿತ್ತು, ಜಿಲ್ಲೆಯಿಂದಲೂ ಹೊರಕ್ಕೆ ಹೋಗಲು ಬಿಡಲಿಲ್ಲ, ಅಗತ್ಯ ಸೇವೆ ಒದಗಿಸುವ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗುತ್ತು, ಹಿಂದಿನ ಕೊರೊನಾ ಕರ್ಫ್ಯೂ ದಿನಗಳಿಗೆ ಹೋಲಿಸಿದರೆ ಸೋಮವಾರ ವಾಹನ ಹಾಗೂ ಜನ ಸಂಚಾರ ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಇತ್ತು, ಪೊಲೀಸರು ಬೆಳಗ್ಗೆಯಿಂದಲೇ ಕಟ್ಟುನಿಟ್ಟು ತಪಾಸಣೆ ನಡೆಸಿದರು.
515 ವಾಹನ ಜಪ್ತಿ
ಕೊರೊನಾ ತಡೆಗಾಗಿ ಕಟ್ಟುನಿಟ್ಟಿನ ಲಾಕ್ ಡೌನ್ ರಾಜ್ಯಾದ್ಯಂತ ಜಾರಿಯಲ್ಲಿದ್ದರೂ ಜಿಲ್ಲೆಯಲ್ಲಿ ಕೆಲವರು ಮುನ್ನೆಚ್ಚರಿಕೆ ಕಡೆಗಣಿಸಿ ವಾಹನಗಳಲ್ಲಿ ಸೂಕ್ತ ಕಾರಣ ಇಲ್ಲದೆ ತಿರುಗಾಡುತ್ತಿದ್ದವರ ವಾಹನಗಳನ್ನು ವಶಪಡಿಸಿಕೊಳ್ಳಲಾಯಿತು. ತುಮಕೂರು ನಗರದಲ್ಲಿ 239, ಕುಣಿಗಲ್- 56, ಮಧುಗಿರಿ- 66, ತಿಪಟೂರು – 59, ಶಿರಾ- 95 ಸೇರಿ ಒಟ್ಟು 515 ವಾಹನಗಳನ್ನು ಜಪ್ತಿ ಮಾಡಲಾಯಿತು.
ಪೊಲೀಸರಿಂದ ಹಣ ವಸೂಲಿ
ಲಾಕ್ ಡೌನ್ ಇರುವ ಕಾರಣ ಬೆಳಗ್ಗೆ 6 ರಿಂದ 10 ಗಂಟೆವೆರಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ, ಆದರೆ ನಿಗದಿತ ಸಮಯದಲ್ಲೇ ದೂರದ ಪ್ರದೇಶಗಳಿಂದ ಅಗತ್ಯ ವಸ್ತುಗಳ ಖರೀದಿಗೆ ಬಂದವರನ್ನು ಪೊಲೀಸರು ನಿಲ್ಲಿಸಿ ತೊಂದರೆ ನೀಡುತ್ತಿದ್ದ ದೃಶ್ಯವೂ ಕಂಡು ಬಂತು, ಅಲ್ಲದೆ ತೂಕದ ವಸ್ತುಗಳನ್ನು ಇಟ್ಟುಕೊಂಡು ಹೋಗಲು ದ್ವಿಚಕ್ರ ವಾಹನದಲ್ಲಿ ಬಂದವನ್ನು ತಡೆದು ಗಾಡಿ ನಿಲ್ಲಿಸಿ ಅವರಿಂದ ಹಣ ಪಡೆದು ಬಿಟ್ಟುಕಳಿಸಿದ ಘಟನೆಗಳು ಜರುಗಿವೆ, ನಗರದ ತರಕಾರಿ ಮಾರ್ಕೆಟ್, ಎಪಿಎಂಸಿ ಸೇರಿದಂತೆ ಹಲವು ಭಾಗದಲ್ಲಿ ಪೊಲೀಸರು ಜನರಿಂದ ಹಣ ಪೀಕಿರುವ ಬಗ್ಗೆ ಆರೋಪ ಕೇಳಿ ಬಂದಿದ್ದು, ಜಿಲ್ಲಾ ಎಸ್ಪಿ ಪೊಲೀಸರ ಈ ವರ್ತನೆಗೆ ಕಡಿವಾಣ ಹಾಕುವ ಅಗತ್ಯವಿದೆ.
Comments are closed.