ಹಾಸಿಗೆಗಳನ್ನು ಕಾಯ್ದಿರಿಸಲು ವೈದ್ಯರ ನೇಮಕ

399

Get real time updates directly on you device, subscribe now.

ತುಮಕೂರು: ಕೋವಿಡ್‌- 19 ಸೋಂಕಿತರಿಗೆ ಹಾಸಿಗೆಗಳನ್ನು ಕಾಯ್ದಿರಿಸುವ ಸಂಬಂಧ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ವೈದ್ಯರನ್ನು ನಿಯೋಜಿಸಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಪ್ರತಿದಿನ 2000- 2500 ಕೋವಿಡ್‌- 19 ಸೋಂಕಿತ ಪ್ರಕರಣಗಳು ವರದಿಯಾಗುತ್ತಿವೆ. ಈ ಪೈಕಿ ಹೆಚ್ಚಿನ ಸೋಂಕಿತರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಆಕ್ಸಿಜನ್‌ ಪ್ರಮಾಣ ಕಡಿಮೆಯಾಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಸದರಿ ಸೋಂಕಿತರನ್ನು ವೈದ್ಯಕೀಯ ವಿದ್ಯಾಲಯ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲು ಸರ್ಕಾರದ ನಿರ್ದೇಶನದಂತೆ ಪ್ರತ್ಯೇಕವಾಗಿ ವಿಭಾಗವಾರು ಹಾಸಿಗೆಗಳನ್ನು ಕಾಯ್ದಿರಿಸಬೇಕು. ವೈದ್ಯಕೀಯ ವಿದ್ಯಾಲಯಗಳಲ್ಲಿ ಒಟ್ಟು ಹಾಸಿಗೆಗಳ ಪೈಕಿ ಶೇ.75 ರಷ್ಟು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ರಷ್ಟು ಹಾಸಿಗಗಳನ್ನು ಕಾಯ್ದಿರಿಸಬೇಕು. ಜಿಲ್ಲಾ ವ್ಯಾಪ್ತಿಯ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಕಾಯ್ದಿರಿಸಿ ಕ್ರಮ ಕೈಗೊಳ್ಳಲು ಈಗಾಗಲೇ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಈಗಾಗಲೇ ಅಧಿಕಾರಿಗಳು ಖಾಸಗಿ ವೈದ್ಯಕೀಯ ವಿದ್ಯಾಲಯ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌- 19 ಸೋಂಕಿತರಿಗೆ ಹಾಸಿಗೆಗಳನ್ನು ಕಾಯ್ದಿರಿಸುವ ಬಗ್ಗೆ ಕ್ರಮವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕಾಯ್ದಿರಿಸಿದ ಹಾಸಿಗೆಗಳ ಪೈಕಿ ಎ ಬಿ ಎ ಆರ್ ಕೆ ರೆಫರಲ್‌ ಇರುವಂತಹ ಸೋಂಕಿತರಿಗೆ ಕಡ್ಡಾಯವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡುವುದು ಅತ್ಯಾವಶ್ಯಕ, ಈ ಹಿನ್ನೆಲೆಯಲ್ಲಿ ಸೋಂಕಿತರಿಗೆ ಹಾಸಿಗೆಗಳನ್ನು ಒದಗಿಸಲು ಹಾಗೂ ಆನ್ ಲೈನ್ ನಲ್ಲಿ ಅಪ್ ಡೇಟ್‌ ಮಾಡಲು ಜಿಲ್ಲಾ ತರಬೇತಿ ಸಂಸ್ಥೆ ಪ್ರಾಂಶುಪಾಲರಾದ ಡಾ.ರಜನಿ (9448613666) ಅವರ ಮೇಲ್ವಿಚಾರಣೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹಿಮಾ (9448182051), ಕುಷ್ಠರೋಗ ನಿಯಂತ್ರಣಾಧಿಕಾರಿ ಹಾಗೂ ಎಬಿಆರ್‌ಕೆ ನೋಡಲ್‌ ಅಧಿಕಾರಿ ಡಾ.ಚೇತನ್‌ (89711884715), ಡಾ.ಶ್ವೇತಾ (8971105648) ಅವರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ನಿಯೋಜಿಸಲಾಗಿರುವ ವೈದ್ಯರು ಸರ್ಕಾರದ ಆದೇಶದಂತೆ ಹಾಸಿಗೆಗಳನ್ನು ಕಾಯ್ದಿರಿಸಿರುವುದನ್ನು ಖಾತರಿಪಡಿಸಿಕೊಳ್ಳಬೇಕು. ಎ ಬಿ ಎ ಆರ್ ಕೆ ರೆಫರಲ್‌ ಹೊಂದಿರುವ ಕೋವಿಡ್‌ 19 ಸೋಂಕಿತರಿಗೆ ಆದ್ಯತೆ ಮೇರೆಗೆ ದಾಖಲಿಸಿಕೊಳ್ಳುತ್ತಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ಎ ಬಿ ಎ ಆರ್ ಕೆ ರೆಫರಲ್‌ ಹೊಂದಿರುವ ಕೋವಿಡ್‌- 19 ಸೋಂಕಿತರು ಚಿಕಿತ್ಸೆ ಪೂರ್ಣಗೊಂಡು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ತಕ್ಷಣ ಈ ಬಗ್ಗೆ ಸಹಾಯವಾಣಿ ಕೇಂದ್ರಕ್ಕೆ ಮಾಹಿತಿ ನೀಡಿ ದತ್ತಾಂಶವನ್ನು ಆನ್ ಲೈನ್ ನಲ್ಲಿ ಅಪ್ ಡೇಟ್‌ ಮಾಡಿಸಬೇಕು. ವೈದ್ಯಕೀಯ ವಿದ್ಯಾಲಯ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೋವಿಡ್‌-19 ಸೋಂಕಿತರು ದಾಖಲಾಗಿರುವ ಬಗ್ಗೆ ಹಾಗೂ ಚಿಕಿತ್ಸೆ ಪೂರ್ಣಗೊಂಡು ಬಿಡುಗಡೆಯಾಗಿರುವ ಬಗ್ಗೆ ಮಾಹಿತಿಯನ್ನು ಪರಿಶೀಲಿಸಬೇಕು. ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ತಪ್ಪಿದಲ್ಲಿ ಸಂಬಂಧಪಟ್ಟವರ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ರೋಗ ಅಧಿನಿಯಮ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ 2005 ರಡಿ ಸೂಕ್ತ ಕ್ರಮವಹಿಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!