ಮಹಾಮಾರಿ ಅಟ್ಟಹಾಸಕ್ಕೆ ನಲುಗುತ್ತಿವೆ ಜೀವ- ಸಾವಿನೂರಿಗೆ ಹಲವರ ಪಯಣ

ಕೊರೊನಾಗೆ ಸತ್ತವರ ಲೆಕ್ಕ ಇಟ್ಟವರ್ಯಾರು?

281

Get real time updates directly on you device, subscribe now.

ಕುಣಿಗಲ್‌: ಕಳೆದ ಕೆಲದಿನಗಳಿಂದ ಅಬ್ಬರಿಸಿ ಬೊಬ್ಬಿರಿದು ಇದೀಗ ಲಾಕ್ ಡೌನ್ ಗೂ ಕಾರಣವಾಗಿರುವ ಕೊವಿಡ್‌ ಎರಡನೆ ಅಲೆಯಿಂದ ಸತ್ತವರ ಬಗ್ಗೆ ಲೆಕ್ಕ ನಿರ್ವಹಣೆಯಾಗದೆ ಇರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿ ಕೊವಿಡ್ ನಿಂದ ಸತ್ತವರ ಲೆಕ್ಕ ಇಟ್ಟವರು ಯಾರು ಎಂಬ ಪ್ರಶ್ನೆ ಮೂಡಿದೆ.
ಕೊವಿಡ್‌ ಎರಡನೆ ಅಲೆ ಕಳೆದ ಮೂರು ವಾರಗಳಿಂದ ತೀವ್ರಗತಿಯಲ್ಲಿ ಏರಿಕೆಯಾದ ಪರಿಣಾಮ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯೇ ಪೂರ್ಣ ಪ್ರಮಾಣದ ಕೊವಿಡ್‌ ಆಸ್ಪತ್ರೆಯಾಗಿದೆ. ಲೆಕ್ಕದಲ್ಲಿ 50 ಆಕ್ಸಿಜನ್‌ ಬೆಡ್‌ ವ್ಯವಸ್ಥೆ ಮಾಡಿದರೂ ಹೆಚ್ಚುವರಿ ರೋಗಿಗಳು ಬಂದ ಕಾರಣ ಇನ್ನು 20 ಕ್ಕೂ ಹೆಚ್ಚು ಬೆಡ್‌ಗಳಿಗೆ ಆಕ್ಸಿಜನ್‌ ಒದಗಿಸಲಾಗಿದೆ. ಐದು ಐಸಿಯು ಬೆಡ್‌ ಇದ್ದರೂ ಮೂರಕ್ಕೆ ವೆಂಟಿಲೇಟರ್‌ ವ್ಯವಸ್ಥೆ ಇರುವ ಕಾರಣ ಅತ್ಯಂತ ಗಂಭೀರ ಪ್ರಮಾಣದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ, ಈ ಮಧ್ಯೆ ಸೋಂಕಿನ ತೀವ್ರತೆಯಿಂದ ಆಮ್ಲಜನಕ ಪ್ರಮಾಣ ಅತಿಕಡಿಮೆ ಇರುವವರು ಆಸ್ಪತ್ರೆಗೆ ಬಂದಾಗ ಸಮರ್ಪಕ ಚಿಕಿತ್ಸೆ ದೊರೆಯದೆ ಮೃತಪಡುತ್ತಿದ್ದಾರೆಂದು ಮೃತಪಟ್ಟವರ ಸಂಬಂಧಿಕರ ಆರೋಪವಾಗಿದೆ.
ಆರೋಗ್ಯ ಇಲಾಖೆ ಅಧಿಕೃತ ಅಂಕಿ ಅಂಶದ ಪ್ರಕಾರ ಕೊವಿಡ್‌ ಮೊದಲನೆ ಅಲೆಯೂ ಸೇರಿದಂತೆ ಹತ್ತನೆ ಮೇ ದಿನಾಂಕಕ್ಕೆ ತಾಲೂಕಿನಲ್ಲಿ 3827 ಸೋಂಕಿಗೆ ಒಳಪಟ್ಟಿದ್ದು 2532 ಮಂದಿ ಗುಣಮುಖರಾಗಿದ್ದರೆ 1262 ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊವಿಡ್ ನಿಂದ ಕೇವಲ 19, ಇತರೆ ಕಾರಣದಿಂದ 14 ಸೇರಿ ಒಟ್ಟು 33 ಮಂದಿ ಮೃತಪಟ್ಟಿರುವ ವರದಿ ಇದೆ. ಆದರೆ ಇದು ಸತ್ಯಕ್ಕೆ ದೂರಾಗಿದೆ ಎಂದು ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿದ ಸಂಸದ ಡಿ.ಕೆ.ಸುರೇಶ್‌ ಅವರ ಬಳಿ ನಾಗರಿಕರು ಅಳಲು ತೋಡಿಕೊಂಡು ಕೇವಲ ಒಂದು ವಾರದಲ್ಲೆ ಪಟ್ಟಣದ ಆಸ್ಪತ್ರೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಮಂದಿ ಸೋಂಕಿತರು ಮೃತಪಟ್ಟರೂ ಸಮರ್ಪಕ ದಾಖಲೆ ನಿರ್ವಹಣೆ ಆಗಿಲ್ಲ ಎಂದು ದೂರಿದರು.
ಸಂಸದರು ಸಹ ಸರ್ಕಾರ ಸೇರಿದಂತೆ ಆರೋಗ್ಯ ಇಲಾಖೆ ಮೃತಪಟ್ಟ ವರದಿ ಸಮರ್ಪಕವಾಗಿ ನಿರ್ವಹಣೆ ಮಾಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಐದು ಮಂದಿ ಸತ್ತರೆ ಒಬ್ಬರ ಲೆಕ್ಕ ತೋರಿಸುತ್ತಿದ್ದಾರೆ ಇದು ಸರಿಯಲ್ಲ, ಕಳೆದ ಮೂರು ವಾರಗಳಲ್ಲಿ ತಾಲೂಕಿನಲ್ಲಿ ಒಟ್ಟಾರೆ 80 ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಶಂಕೆ ಇದೆ ಎಂದಿದ್ದಾರೆ.
ಶಾಸಕ ಡಾ.ರಂಗನಾಥ್‌ ಸಹ ಆರೋಗ್ಯ ಇಲಾಖಾಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ಸೋಂಕಿನಿಂದ ಸತ್ತವರ ಸಮರ್ಪಕ ವರದಿ ತಯಾರು ಮಾಡುವಂತೆ ಸೂಚಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಆರೋಗ್ಯ ಇಲಾಖೆ ದಿನಾಲೂ ಪ್ರಕಟಿಸುವ ಮಾಹಿತಿಯಿಂದ ತಿಳಿಯುತ್ತಿದೆ. ಇತ್ತೀಚೆಗೆ ನಡೆದ ಜಿಲ್ಲಾಉಸ್ತುವಾರಿ ಸಚಿವರ ಸಭೆಯಲ್ಲಿ ಸಂಸದರು, ಶಾಸಕರು ಇಬ್ಬರು ತಾಲೂಕಿನಲ್ಲಿ ಸೋಂಕಿನಿಂದ ಮೃತಪಟ್ಟಿರುವವರ ಬಗ್ಗೆ ಡೆತ್‌ ಆಡಿಟ್‌ ಮಾಡುವಂತೆ ಮನವಿ ಮಾಡಿದಾಗ ಸಚಿವರು ಹೇಗೆ ಸಾಧ್ಯ, ಸೋಂಕಿತರೆ ಮರಣೋತ್ತರ ಪರೀಕ್ಷೆ ಮಾಡಲಾಗುತ್ತದೆಯೆ, ಅದು ಆಗುತ್ತದಾ ಎಂದು ಪ್ರಶ್ನಿಸಿ ಕೊನೆಗೆ ಒತ್ತಡ ಹೆಚ್ಚಾದಾಗ ತುಮಕೂರು ಉಪ ವಿಭಾಗಾಧಿಕಾರಿಗಳಿಗೆ ತಾಲೂಕಿನಲ್ಲಿ ಸೋಂಕಿನಿಂದ ಮೃತಪಟ್ಟವರ ಪ್ರತ್ಯೇಕ ದಾಖಲೆ ನಿರ್ವಹಣೆ ಮಾಡುವಂತೆ ಸೂಚಿಸಿದರೂ ಇನ್ನು ಯಾವುದೆ ಕ್ರಮವಾಗದೆ ಇರುವುದು ಸೋಂಕಿನಿಂದ ಸತ್ತವರ ಲೆಕ್ಕ ಇಟ್ಟವರು ಯಾರು? ಇದು ವ್ಯವಸ್ಥೆಯ ಲೋಪವೆ ಅಥವಾ ವ್ಯವಸ್ಥೆ ಲೋಪ ಮುಚ್ಚಿಕೊಳ್ಳುವ ಹುನ್ನಾರವೆ ಎಂದು ಚರ್ಚೆಗೆ ಕಾರಣವಾಗಿದೆ.

Get real time updates directly on you device, subscribe now.

Comments are closed.

error: Content is protected !!