ತುರುವೇಕೆರೆ: ತಾಲೂಕಿನ ವ್ಯಾಪ್ತಿಯ ಕೆಲವೆಡೆ ಎರಡು ತಾಸಿಗೂ ಹೆಚ್ಚು ಕಾಲ ಸುರಿದ ಮಳೆ ಸಹಿತ ಬಿರುಗಾಳಿಗೆ ಮರಗಳು ವಿದ್ಯುತ್ ಲೈನ್ ಮೇಲೆ ಮುರಿದು ಬಿದ್ದ ಪರಿಣಾಮ ವಿದ್ಯುತ್ ಪರಿವರ್ತಕಗಳು ಹಾಗೂ ವಿದ್ಯುತ್ ಕಂಬಗಳು ನೆಲಕಚ್ಚಿದ್ದು, ಬೆಸ್ಕಾಂ ಇಲಾಖೆಗೆ ಲಕ್ಷಾಂತರ ನಷ್ಟ ಸಂಭವಿಸಿದೆ.
ತಾಲೂಕಿನ ತಂಡಗ ವ್ಯಾಪ್ತಿಯ ಮಾವಿನಹಳ್ಳಿ, ಗುರುವಿನಮಠ, ಸಾದರಹಳ್ಳಿ ಗೊಲ್ಲರಹಟ್ಟಿ, ಕಸಬಾ ವ್ಯಾಪ್ತಿಯ ಮುನಿಯೂರು, ಮರಸರಕೊಟ್ಟಿಗೆ, ಪಟ್ಟಣ ವ್ಯಾಪ್ತಿಯ ಫೀಡರ್ 13 ಮತ್ತು 16 ರ ವ್ಯಾಪ್ತಿಯಲ್ಲಿ ಅಪಾರ ಹಾನಿ ಸಂಭವಿಸಿದೆ, ಬಿರುಗಾಳಿ ಮಳೆಗೆ ವಿದ್ಯುತ್ ಮಾರ್ಗಗಳು ತುಂಡಾದ ಪರಿಣಾಮ ಆಯಾ ವ್ಯಾಪ್ತಿಯ ಗ್ರಾಮಗಳು ಇಡೀ ರಾತ್ರಿ ಕತ್ತಲಿನಲ್ಲಿ ಮುಳುಗುವಂತಾಗಿತ್ತು. ಮಂಗಳವಾರ ಬೆಳಗ್ಗೆಯಿಂದ ಸಂಜೆಯಾದರೂ ವಿದ್ಯುತ್ ಮಾರ್ಗಗಳ ದುರಸ್ತಿ ಕಾರ್ಯದಲ್ಲಿ ಬೆಸ್ಕಾಂ ಇಲಾಖೆ ತೊಡಗಿಕೊಳ್ಳುವಂತಾಯಿತು. ಒಂದು ದಿನದ ಮಟ್ಟಿಗೆ ವಿವಿಧ ಗ್ರಾಮಗಳ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು.
ಭರಣಿ ಮಳೆ ತಾಲೂಕಿನ ವ್ಯಾಪ್ತಿಯಲ್ಲಿ ಉತ್ತಮವಾಗಿ ಬಿದ್ದ ಹಿನ್ನಲೆಯಲ್ಲಿ ರೈತಾಪಿಗಳ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಪೂರ್ವ ಮುಂಗಾರಿನಲ್ಲಿ ಹೆಸರು, ಉದ್ದು, ಹಲಸಂದೆ, ದ್ವಿದಳ ಧಾನ್ಯಗಳ ಬಿತ್ತನೆ ಕಾರ್ಯಕ್ಕೆ ಭರಣಿ ಮಳೆ ಸಾಥ್ ನೀಡಿದೆ, ತಾಲೂಕಿನ ಕೆಲೆವೆಡೆ ಪೂರ್ವ ಮುಂಗಾರು ಬಿತ್ತನೆ ಮಾಡಲು ಭೂಮಿ ಹಸನು ಕಾರ್ಯ ಮಾಡಿದ್ದ ರೈತಾಪಿಗಳಿಗೆ ಸೋಮವಾರ ಸುರಿದ ವರ್ಷಧಾರೆ ಹರ್ಷ ತಂದಿದೆ, ತಾಲೂಕಿನ ವ್ಯಾಪ್ತಿಯ ಕಸಬಾದಲ್ಲಿ 84.6 ಮಿ.ಮೀ, ದಂಡಿನಶಿವರ 12.3 ಮಿ.ಮೀ, ಸಂಪಿಗೆ 8.8 ಮಿ.ಮೀ ಮಳೆ ಪ್ರಮಾಣ ದಾಖಲಾಗಿದೆ.
ಈ ಮೊದಲೇ ಬಿತ್ತನೇ ಮಾಡಿ ಎರಡಲೇ ಹಂತದಲ್ಲಿರುವ ಪೂರ್ವ ಮುಂಗಾರು ಬೆಳೆಯ ಬೆಳವಣಿಗೆಗೆ ಸಹಕಾರಿಯಾಗಿದೆ, ಇನ್ನು ತೋಟಗಾರಿಕಾ ಬೆಳೆಗಳಾದ ತೆಂಗು, ಕಂಗು, ಬಾಳೆ ಬೆಳೆಗಳಿಗೆ ಭರಣಿ ಮಳೆ ಜೀವ ಕಳೆ ತಂದಿದ್ದು, ಹಸಿರಿನಿಂದ ನಳನಳಿಸುತ್ತಿವೆ. ತೋಟದ ಮಡಿಗಳು ಕೆಂಪು ಮಿಶ್ರಿತ ನೀರು ಶೇಖರಣೆಯಾಗುವ ಮೂಲಕ ರೈತಾಪಿಗಳಲ್ಲಿ ಮುಂದೆಯೂ ಉತ್ತಮ ಮಳೆಯಾಗಬಹುದೆಂಬ ಭರವಸೆ ಸೃಷ್ಟಿಸಿದೆ, ಒಟ್ಟಾರೆ ಭರಣಿ ಮಳೆ ಬಂದರೆ ಧರಣಿಯೆಲ್ಲಾ ತಂಪು ಎನ್ನುವ ಹಿರಿಯ ಮಾತಿಗೆ ಪುಷ್ಟಿ ದೊರೆತಿದೆ.
ಭರಣಿ ಮಳೆಯ ಆರ್ಭಟಕ್ಕೆ ನೆಲಕಚ್ಚಿದ ಮರಗಳು
Get real time updates directly on you device, subscribe now.
Next Post
Comments are closed.